ಮಹಿಳೆ, ಮಕ್ಕಳಿಗೆ ರಕ್ಷಣೆ ಇಲ್ಲ: ಶೋಭಾ ಕಿಡಿ
ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು...
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ಜು.19
ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾನೂನಿನ ಭಯ ಇಲ್ಲದ್ದರಿಂದ ಕ್ರಿಮಿನಲ್ ಮತ್ತು ಸಮಾಜ ದ್ರೋಹಿ ಚಟುವಟಿಕೆ ಹೆಚ್ಚಾಗಿದೆ. ಗುರುವಾರವೊಂದೇ ದಿನ ರಾಜ್ಯಾದ್ಯಂತ 8 ಅತ್ಯಾಚಾರ ಪ್ರಕರಣ ನಡೆದಿದೆ. ಇಂಥ ಪ್ರಕರಣಗಳನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.
ಶೋಭಾ ಆಗ್ರಹವೇನು?
* ಮಹಿಳೆಯರ ಸುರಕ್ಷತೆಗೆ ರಾಜ್ಯದಲ್ಲಿ ಹೊಸ ಕಾಯ್ದೆ ರಚಿಸಬೇಕು.
* ಕೇಂದ್ರ ಸರ್ಕಾರ ಜಾರಿಗೆ ತಂದ ಕ್ರಿಮಿನಲ್ ಲಾ- 2013 ಕಾಯ್ದೆ ಆಧಾರದಲ್ಲಿ ಇನ್ನೂ ಬಲವಾದ ಕಾನೂನನ್ನು ಈ ಅಧಿವೇಶನದಲ್ಲಿಯೇ ಜಾರಿಗೆ ತರಬೇಕು.
* ಅತ್ಯಾಚಾರ, ಕೊಲೆಯಷ್ಟೇ ಗಂಭೀರ ಪ್ರಕರಣ. ಅತ್ಯಾಚಾರಿಗಳ ಪುರುಷ್ಯತ್ವ ಹರಣ ಮಾಡಬೇಕು. ಇಂಥ ಕಾನೂನು ಜಾರಿಗೆ ಬರಲಿ.
* ಅತ್ಯಾಚಾರ ಎಸಗಿರುವ ಅಪರಾಧಿಗಳಿಗೆ ಉಗ್ರ ಶಿಕ್ಷೆ ಕೊಡುವಂತೆ ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಬೇಕು.
* ಇಂಥವರಿಗೆ ಜಾಮೀನು ರಹಿತ ಕೇಸ್ ದಾಖಲಿಸಲು ತಕ್ಷಣವೇ ಸರ್ಕಾರ ಪೊಲೀಸ್ ಇಲಾಖೆಗೆ ಸೂಚಿಸಬೇಕು.
* ಇಂಥ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು
* ಈ ನ್ಯಾಯಾಲಯಗಳಿಂದ ಶೀಘ್ರ ತೀರ್ಪು ನೀಡಲು ಬೇಕಾದ ಪೂರಕ ಮಾಹಿತಿ ಒದಗಿಸಲು ಪೊಲೀಸ್ ಇಲಾಖೆ ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕು.
* ಅಪರಾಧಿಗಳ ಪತ್ತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು
* ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಹಿಳಾ ಸುರಕ್ಷತೆ ಜವಾಬ್ದಾರಿ ವಹಿಸಬೇಕು.