ರಾಜ್ಯದಲ್ಲಿ ಮತ್ತೆ ಹತ್ತು ಮಾನಭಂಗ
ರಾಜ್ಯಾದ್ಯಂತ ಅತ್ಯಾಚಾರ ಪರ್ವ ಮುಂದುವರಿದಿದೆ. ಶನಿವಾರ ಮೂರು ಅತ್ಯಾಚಾರ, 6 ರೇಪ್ ಯತ್ನ ಪ್ರಕರಣಗಳು ನಡೆದಿವೆ.
ಬೆಂಗಳೂರು: ರಾಜ್ಯಾದ್ಯಂತ ಅತ್ಯಾಚಾರ ಪರ್ವ ಮುಂದುವರಿದಿದೆ. ಶನಿವಾರ ಮೂರು ಅತ್ಯಾಚಾರ, 6 ರೇಪ್ ಯತ್ನ ಪ್ರಕರಣಗಳು ನಡೆದಿವೆ. ಜತೆಗೆ ಸೊಸೆ ಮೇಲೆ ಮಾವನೇ ಮೂರು ತಿಂಗಳಿಂದ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದ್ದರೆ, ಮತ್ತೊಂದೆಡೆ ಬಾಲಕಿ ಮೇಲೆ ಅತ್ಯಾಚಾರ ನಡೆದು 7 ತಿಂಗಳ ಗರ್ಭಿಣಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
1) ಬುದ್ಧಿಮಾಂದ್ಯೆ ಮೇಲೆ
ನಂಜನಗೂಡು ತಾಲೂಕು ತಾಯೂರಿನ ವಿವಾಹಿತ ಮಾಧು (25) ಎಂಬಾತ ಪಕ್ಕದ ಮನೆಯಲ್ಲಿದ್ದ 23 ವರ್ಷದ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈತನನ್ನು ಪೊಲೀಸರು ಬಂಧಿಸಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
2) ಡ್ರಾಪ್ ಕೊಡುವ ನೆಪದಲ್ಲಿ ರೇಪ್
ಮೈಸೂರು ತಾಲೂಕು ಕೆ.ಎಂ. ಹಳ್ಳಿ ನಿವಾಸಿ, ಗಂಗಾಧರ್ (26) ಮತ್ತು ಲಷ್ಕರ್ ಮೊಹಲ್ಲಾದ ಮಹದೇವ (25) ಬೆಂಗಳೂರು ಮೂಲದ 14 ವರ್ಷದ ಬಾಲಕಿಗೆ ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಆಟೋ ಹತ್ತಿಸಿಕೊಂಡು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಬಂಧಿಸಿದ್ದಾರೆ.
3) ಬಾಲಕಿ ಅಪಹರಿಸಿ ರೇಪ್
ಮೈಸೂರಿನ ಏಕಲವ್ಯ ನಗರದಲ್ಲಿನ ಘಟನೆ. ಲೋಕೇಶ್ ಎಂಬಾತ 16 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ್ದಾನೆ. ಇಷ್ಟೇ ಅಲ್ಲ, ಬೆಂಬಲಿಗರೊಂದಿಗೆ ಆಕೆಯ ಮನೆಗೆ ನುಗ್ಗಿ ಬಾಲಕಿಯ ತಾಯಿ ಮತ್ತು ಸಹೋದರಿಯ ಮೇಲೂ ಬಲಾತ್ಕಾರಕ್ಕೆ ಯತ್ನ ಮಾಡಿದ್ದಾನೆ. ಈತನ ಮೇಲೆ ಪ್ರಕರಣ ದಾಖಲಾಗಿದೆ.
4) ಬಾಲೆ ಮೇಲೆ ವೃದ್ಧನ ಅತ್ಯಾಚಾರ
ಹಾವೇರಿ ತಾಲೂಕಿನ ಅಗಡಿಯಲ್ಲಿ ಶನಿವಾರ 4 ವರ್ಷದ ಬಾಲಕಿ ಮೇಲೆ 58 ವರ್ಷದ ವೃದ್ಧ ಪರಸಪ್ಪ ಹಾಲಗಿ ಅತ್ಯಾಚಾರ ನಡೆಸಿದ್ದು, ಪೊಲೀಸರು ಬಂಧಿಸಿದ್ದಾರೆ. ಬಾಲಕಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗ್ರಾಮಸ್ಥರ ಪರಸಪ್ಪನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
5) ಬುದ್ಧಿಮಾಂದ್ಯೆ ಮೇಲೆ ಕ್ರೌರ್ಯ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಳ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಅಂಗವಿಕಲನೊಬ್ಬ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಆರೋಪಿ ಶ್ರೀರಂಗ (38)ನನ್ನು ಪೊಲೀಸರು ಬಂಧಿಸಿದ್ದಾರೆ.
6) ಅತ್ಯಾಚಾರ, ತಡವಾಗಿ ಬೆಳಕಿಗೆ
ಅರಕಲಗೂಡು ತಾಲೂಕಿನ ಬಿಜಾಪುರ 2ನೇ ಕಾಲೋನಿಯಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅದೇ ಗ್ರಾಮದ ಯೋಗೇಶ್ ಎಂಬಾತ ಅತ್ಯಾಚಾರ ನಡೆಸಿದ್ದಾನೆ. ಈಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
7) ಸೊಸೆಯನ್ನೂ ಬಿಡದ ಮಾವ
ಕೂಡ್ಲಿಗಿ ತಾಲೂಕು ಐಗಳ ಮಲ್ಲಾಪುರ ಗ್ರಾಮದಲ್ಲಿ ಸೊಸೆ ಮೇಲೆ 53 ವರ್ಷದ ಮಾವ ಚೆನ್ನಿಗಪ್ಪ ಅತ್ಯಾಚಾರ ನಡೆಸಿದ್ದಾನೆ. ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಆಕೆಯನ್ನು ಮೈಸೂರಿಗೆ ಕರೆದೊಯ್ದು ಮೂರು ತಿಂಗಳು ಸಂಸಾರ ಮಾಡಿದ್ದಾನೆ. ಈಗ ಗ್ರಾಮಕ್ಕೆ ಮರಳಿರುವ ಸೊಸೆ, ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
8) ಯತ್ನ-ಬಂಧನ
ಯಾದಗಿರಿ ಜಿಲ್ಲೆಯ ಕಿರದಲ್ಲಿ ತಾಂಡಾದ ಕೆಂಭಾವಿಯಲ್ಲಿ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ರಾತ್ರಿ ಮಲಗಿದ್ದಾಗ ಏಕಾಏಕಿ ನುಗ್ಗಿದ ಸಂತೋಷ್ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು, ಆಕೆ ಕೂಗಿಕೊಂಡಾಗ ಪರಾರಿಯಾಗಿದ್ದಾನೆ.
9) ಯುವತಿ ಮೇಲೆ ಯತ್ನ
ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೆಮಡುಗು ಗ್ರಾಮದ ಸಮೀಪ ಇರುವ ಕಾಚರಾಕನ ಹಳ್ಳಿಯಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆಗ ರಕ್ಷಣೆಗೆ ಬಂದ ಸೋದರ ಬೈರಾರೆಡ್ಡಿ ಮೇಲೂ ರಾಡಿನಿಂದ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಯುವತಿ ಹೇಳಿಕೆ ನೀಡಿದ ಕೆಲ ಸಮಯದ ನಂತರ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾಳೆ.
10) ವೃದ್ಧನಿಂದ ಕೃತ್ಯ
ಅಂಕೋಲಾ ತಾಲೂಕಿನ ರಾಮನಗುಳಿಯಲ್ಲಿ ಶನಿವಾರ ಬಾಲಕಿ ಮೇಲೆ 62 ವರ್ಷದ ವೃದ್ಧ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದು ಈ ಕೃತ್ಯಕ್ಕೆ ಮುಂದಾಗಿದ್ದ.
ದಿನಕ್ಕೆ 92 ಮಹಿಳೆಯರ ಅತ್ಯಾಚಾರ!
ಬೆಳಗಾವಿ: ದೇಶಾದ್ಯಂತ ನಿತ್ಯವೂ ಸರಾಸರಿ 92 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಗೃಹ ಸಚಿವಾಲಯ ಬಹಿರಂಗ ಪಡಿಸಿದೆ. ಈ ಪೈಕಿ 2013ರಲ್ಲಿ ರಾಜ್ಯಾದ್ಯಂತ 1030 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತಿಹೆಚ್ಚು ಅಂದರೆ 80 ಪ್ರಕರಣ ಬೆಂಗಳೂರು(ನಗರ) ಜಿಲ್ಲೆಯಲ್ಲಿಯೇ ನಡೆದಿದೆ. 2ನೇ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ 62 ಪ್ರಕರಣಗಳ್ನು ದಾಖಲಾಗಿವೆ. 61 ಪ್ರಕರಣ ದಾಖಲಾಗಿರುವ ಹಾಸನ ಜಿಲ್ಲೆ 3ನೇ ಸ್ಥಾನದಲ್ಲಿದೆ.
ದಾಖಲಾದ ಪ್ರಕರಣಗಳು
0-10 ವರ್ಷದೊಳಗಿನ 1584 ಬಾಲಕಿಯರ ಮೇಲೆ ಅತ್ಯಾಚಾರ, 10-14ವರ್ಷದೊಳಗಿನ ಬಾಲೆಯರ ಮೇಲೆ 2843 ಪ್ರಕರಣ, 14-18 ವರ್ಷದೊಳಗೆ 8877, 18-30ರ ವರ್ಷದೊಳಗಿನ ಮಹಿಳೆಯರ ಮೇಲೆ 15,556 ಪ್ರಕರಣ, 30-50 ವರ್ಷದೊಳಗಿನ ಮಹಿಳೆಯರ ಮೇಲೆ 4648 ಹಾಗೂ 50ಕ್ಕಿಂತ ಅಧಿಕ ವಯಸ್ಸಿನ ಹೆಂಗಸರ ಮೇಲೆಯೂ 256 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಜನವರಿ 2014ರಿಂದ ಜುಲೈ 18ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 45 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 13 ಪ್ರಕರಣಗಳ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. 32 ಪ್ರಕರಣಗಳ ವಿಚಾರಣೆ ಇನ್ನೂ ತನಿಖೆ ಹಂತದಲ್ಲಿವೆ.
ವರ್ಷದಲ್ಲಿ 33,707
ದೇಶಾದ್ಯಂತ 2013ರಲ್ಲಿ 33,707 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಈ ವರದಿಯಲ್ಲಿದೆ. ಮಧ್ಯಪ್ರದೇಶದಲ್ಲಿ 4355 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಮೊದಲ ರಾಜ್ಯವಾಗಿದೆ. ರಾಜಸ್ಥಾನಕ್ಕೆ 2ನೇ ಸ್ಥಾನ, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಈ ಪೈಕಿ ಕರ್ನಾಟಕ 14ನೇ ಸ್ಥಾನದಲ್ಲಿದೆ.