ವಿದ್ಯಾ ದೇಗುಲದಲ್ಲಿ ಖಾಸಗಿ ದರ್ಬಾರ್
ಬೆಂಗಳೂರು: ದೂರು ನೀಡಿದರೆ ಹುಷಾರ್, ಶಾಲೆಯಿಂದ ತೆಗೆದುಹಾಕುತ್ತೇವೆ!
ಕಳೆದೊಂದು ವಾರದಿಂದ ಸುದ್ದಿಯಲ್ಲಿರುವ ವಿಬ್ಗ್ಯೊರ್ ಶಾಲೆಯ ಆಡಳಿತ ಮಂಡಳಿ ಇಂತಹ ಹುಚ್ಚಾಪಟ್ಟೆ ಷರತ್ತುಗಳನ್ನು ಹೊಂದಿರುವ 30 ಅಂಶಗಳ ಮುಚ್ಚೋಲೆ ಪತ್ರಕ್ಕೆ ಎಲ್ಲ ಪಾಲಕರಿಂದ ಸಹಿ ಹಾಕಿಸಿಕೊಂಡಿದೆ. ಇದರರ್ಥ ಶಾಲೆಯ ಯಾವುದೇ ಅಚಾತುರ್ಯ ಅಥವಾ ಅಕ್ರಮಗಳಿದ್ದರೆ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ. ದೂರು ನೀಡುವುದು ಅಥವಾ ಮಾಧ್ಯಮಗಳೆದುರು ಶಾಲೆಯ ವಿರುದ್ಧ ಮಾತನಾಡಿದರೆ ಶುಲ್ಕ ಕೂಡ ಹಿಂತಿರುಗಿಸದೇ ಮಕ್ಕಳನ್ನು ಶಾಲೆಯಿಂದ ಹೊರದಬ್ಬಲಾಗುತ್ತದೆ.
ಇಂತಹ ವಿಚಿತ್ರ ನಿಯಮ ರೂಪಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತಂತೆ 'ಕನ್ನಡಪ್ರಭ' ಈಗಾಗಲೇ ವರದಿ ಪ್ರಕಟಿಸಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿದ ಪರಿಣಾಮ ಖಾಸಗಿ ಶಾಲೆಗಳ ಲಘು ಧೋರಣೆಗಳು ಮುಂದುವರಿದಿವೆ. ಕರ್ನಾಟಕ ರಾಜ್ಯದ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 23ರ ಪ್ರಕಾರ ಯಾವುದೇ ಶಾಲೆಗಳು ಇಂತಹ ಷರತ್ತು ಹಾಕುವುದು ಕಾನೂನು ಬಾಹಿರ.
ಈ ಶಾಲೆ ಹೊರಡಿಸಿರುವ 30 ಅಂಶಗಳ ಷರತ್ತು ಪಟ್ಟಿಯಲ್ಲಿ 20 ಮತ್ತು 21ನೇ ಅಂಶ ಬಹುಮುಖ್ಯವಾಗಿದೆ. ಇದರಲ್ಲಿ ಹೇಳುವಂತೆ ಶಿಕ್ಷಣ ಸಂಸ್ಥೆ, ಸಿಬ್ಬಂದಿಗಳ ವಿರುದ್ಧ ಧರಣಿ ಮಾಡುವಂತಿಲ್ಲ.
ಯಾರೊಬ್ಬರಿಗೂ ಆಡಳಿತ ಮಂಡಳಿಗೆ ವಿರುದ್ಧವಾಗಿ ದೂರು ನೀಡಬಾರದು. ಮಾಧ್ಯಮಗಳೊಂದಿಗೂ ಸಂವಹನ ಮಾಡಬಾರದು. ಒಂದೊಮ್ಮೆ ಈ ರೀತಿಯ ಮಾಹಿತಿ ಸೋರಿಕೆ ಮಾಡಿದರೆ ಶಾಲೆಯಿಂದ ಡಿಬಾರ್ ಮಾಡಲು ಒಪ್ಪಿಗೆ ಪಡೆದುಕೊಂಡು ತಂದೆ-ತಾಯಿ ಹಾಗೂ ಪೋಷಕರ ಸಹಿ ಪಡೆಯಲಾಗುತ್ತದೆ.
ಈ ಶಾಲೆಗೆ ಎಂತಹ ಧೈರ್ಯವೆಂದರೆ ಈ ಪೇರೆಂಟ್ಸ್ ಮ್ಯಾನ್ಯುವಲ್ ಅನ್ನು ಶಾಲೆಯ ವೆಬ್ಸೈಟ್ನಲ್ಲಿಯೇ ಹಾಕಲಾಗಿದೆ. ಬೆಂಗಳೂರು ದಕ್ಷಿಣ ವಲಯದ ಡಿಡಿಪಿಐ ಹಾಗೂ ಸ್ಥಳೀಯ ಬಿಇಒ ವೆಬ್ಸೈಟ್ ನೋಡದಷ್ಟು ಅನಕ್ಷರಸ್ಥರೇ? ಶಿಕ್ಷಣ ಹಕ್ಕು ಕಾರ್ಯಪಡೆ ಕೂಡ ಈ ವಿಚಾರದ ಬಗ್ಗೆ ಸತತವಾಗಿ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಇಲಾಖೆಗೆ ದೂರು ನೀಡಿದೆ. ಇದು ನಗರದ ಇತರ ಶಾಲೆಗಳಲ್ಲಿಯೂ ನಡೆಯುತ್ತಿದೆ.
ಅಚಾತುರ್ಯಕ್ಕೆ ಜವಾಬ್ದಾರರಲ್ಲ
ನೀವು ಮನೆಯಲ್ಲೂ ಪಾಠ ಮಾಡಬೇಕು, ಇಂಗ್ಲಿಷ್ ಮಾತನಾಡಿಸಬೇಕು, ಶಾಲೆಯ ಆವರಣದಲ್ಲಿ ನಡೆಯುವ ಅಚಾತುರ್ಯಕ್ಕೆ ನಾವು ಜವಾಬ್ದಾರರಲ್ಲ!
ಖಾಸಗಿ ಶಾಲೆಯೊಂದರ ಹೇಳಿಕೆ ಈ ರೀತಿಯಿದ್ದರೆ ಲಕ್ಷಗಟ್ಟಲೇ ಶುಲ್ಕ ಪಡೆಯುವ ಉದ್ದೇಶವೇನು ಎಂಬ ಪ್ರಶ್ನೆ ಮೂಡುತ್ತದೆ. ಪಾರ್ಕಿಂಗ್ ಮಾಡುವಾಗ ಗಂಟೆಗೆ ಹಣ ವಸೂಲಿ ಮಾಡಿ 'ಪಾರ್ಕ್ ಅಟ್ ಯುವರ್ ಓನ್ ರಿಸ್ಕ್' ಎಂದು ಹೇಳಿದಂತಾಗುತ್ತದೆ. ಈ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ನೀಡಿ ಪಾಲಕರು ಮಕ್ಕಳನ್ನು ಕಳುಹಿಸುವುದು, 'ಶಾಲೆಯಲ್ಲಿದ್ದಷ್ಟು ಕ್ಷಣ ವಿದ್ಯಾರ್ಥಿಗಳ ರಕ್ಷಣೆ ಸಂಸ್ಥೆಗಳ ಜವಾಬ್ದಾರಿ' ಎನ್ನುವ ಕಾರಣಕ್ಕೆ. ಇದರ ಜತೆಗೆ ಪಾಲಕರೇ ಎಲ್ಲವನ್ನೂ ಹೇಳಿಕೊಡಬೇಕಾದರೆ ಶಾಲೆಗೆ ಕಳುಹಿಸುವ ಅಗತ್ಯವಿರುವುದಿಲ್ಲ. ಎಲ್ಲವೂ ತಿಳಿದ ಮಕ್ಕಳಿಗೆ ಲಕ್ಷಾಂತರ ಶುಲ್ಕ ನೀಡಿ ಓದಿಸುವ ಅನಿವಾರ್ಯವೂ ಎದುರಾಗುವುದಿಲ್ಲ.
ಮೂರು ವಾರದ ಹಿಂದೆ ಖಾಸಗಿ ಶಾಲೆಯೊಂದರ ಬಸ್ನಿಂದ ಮಗುವಿನ ಮರಣವಾಯಿತು. ಆ ಸಂದರ್ಭದಲ್ಲಿಯೂ 'ಶಾಲೆಯಿಂದ ಹೊರಹೋದ ಮೇಲೆ ನಮ್ಮ ಜವಾಬ್ದಾರಿಯಿಲ್ಲ' ಎಂಬ ಅಸಡ್ಡೆ ಮಾತು ಕೇಳಿಬಂದಿತ್ತು. ಈಗ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಸಂದರ್ಭದಲ್ಲಿಯೂ ಇಂತಹ ಹೇಳಿಕೆ ಬಂದಿದೆ. ಒಂದೊಮ್ಮೆ ಈ ಸಂಸ್ಥೆಗಳು ಉಚಿತ ಶಿಕ್ಷಣ ನೀಡುತ್ತಿದ್ದರೂ ಇಂತಹ ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿರಲಿಲ್ಲ. ಶಿಕ್ಷಣ ಹಕ್ಕು ಕಾಯಿದೆ ಇಂತಹದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಸ್ಕೂಲ್ ಬಸ್ ಸೇರಿದಂತೆ ಪ್ರತಿಯೊಂದಕ್ಕೂ ಹಣ ಪಡೆದು ಜವಾಬ್ದಾರಿಯಿಲ್ಲ ಎಂದರೆ, ಪಾಲಕರು ಯಾರನ್ನು ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಇಂತಹ ವರ್ತನೆಗೆ ನಿಯಂತ್ರಣ ಹೇರದೆ ಮೀನಮೇಷ ಎಣಿಸುತ್ತಿದ್ದರೆ ಮಕ್ಕಳ ರಕ್ಷಣೆ ಅಸಾಧ್ಯ.
ನೆಪ ಮಾತ್ರಕ್ಕೆ ಶಾಲೆಗೆ ನೋಟಿಸ್
ಮಾಧ್ಯಮಗಳಲ್ಲಿ ಶಿಕ್ಷಣ ಇಲಾಖೆಯ ಮೌನದ ಬಗ್ಗೆ ಲೇಖನಗಳು ಬಂದಾಗ ನೆಪ ಮಾತ್ರಕ್ಕೆ ವಿಬ್ಗ್ಯೊರ್ ಶಾಲೆಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 39ರ ಪ್ರಕಾರ ಶಾಲೆಯ ಮಾನ್ಯತೆ ಏಕೆ ರದ್ದು ಮಾಡಬಾರದು ಎಂದು ವಿವರಣೆ ಕೇಳಲಾಗಿದೆ. ಇದೇ ಸಂದರ್ಭದಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಐಸಿಎಸ್ಇ ಮಂಡಳಿಗೆ ಶಿಫಾರಸು ಮಾಡಲಾಗಿದೆ.
ಜಿಲ್ಲಾ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗೆ ನೀಡಿರುವ ನೋಟಿಸ್ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಆದರೆ ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆಯಾಗಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿಲ್ಲ. ಶಾಲೆಯ ವಿರುದ್ಧ ಸ್ಥಳೀಯ ಶಿಕ್ಷಣಾಧಿಕಾರಿಗಳು ದೂರು ಕೂಡ ದಾಖಲಿಸಿಲ್ಲ.
ಈಗಾಗಲೇ ಗೃಹ ಮಂತ್ರಿ ತಿಳಿಸಿರುವಂತೆ ವಿದ್ಯಾರ್ಥಿನಿಯನ್ನು ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಶಾಲೆಯ ಈ ಕ್ರಮ ಶಿಕ್ಷಣ ಹಕ್ಕು ಕಾಯಿದೆ ಉಲ್ಲಂಘನೆಯಾಗುತ್ತದೆ. ಆದರೆ ಸರ್ಕಾರದ ನೋಟಿಸ್ನಲ್ಲಿ ಈ ಬಗ್ಗೆ ಸೊಲ್ಲೆತ್ತಿಲ್ಲ. ಶಿಕ್ಷಣ ಸಂಸ್ಥೆಯ ಅಕ್ರಮವನ್ನು ಗೃಹ ಇಲಾಖೆ ಬಿಚ್ಚಿಟ್ಟ ಬಳಿಕವೂ ಅಧಿಕಾರಿಗಳು ರಕ್ಷಣೆಗೆ ಮುಂದಾಗದಿರುವುದು ಇಲಾಖೆ ಕಾರ್ಯವೈಖರಿಗೆ ಸಾಕ್ಷಿ.
ವಿಚಿತ್ರವೆಂದರೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿರುವ ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಈ ಸಂಸ್ಥೆಗಳು ಬರುವುದಿಲ್ಲ. ಐಸಿಎಸ್ಇ ಶಿಕ್ಷಣ ಸಂಸ್ಥೆಗಳನ್ನು ಕಾಯಿದೆ ವ್ಯಾಪ್ತಿಯಿಂದ ಹೊರಗಿಟ್ಟು 1998ರಲ್ಲಿ ನಿಯಮ ರೂಪಿಸಲಾಗಿದೆ. ಸರ್ಕಾರದ ಈ ತಿದ್ದುಪಡಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿ 3 ವರ್ಷವಾಯಿತು. ಇದಾದ ನಂತರ ವಿಭಾಗೀಯ ಪೀಠ ಹಾಗೂ ಸುಪ್ರೀಂ ಕೋರ್ಟ್ ಅಂಗಳಕ್ಕೆ ಈ ಪ್ರಕರಣ ಹೋಗಿದೆ. ಆದರೆ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿ ತರುವ ಈ ಆದೇಶಕ್ಕಿರುವ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಲೇ ಇಲ್ಲ. ಆದ್ದರಿಂದ ಸರ್ಕಾರ ಶಿಕ್ಷಣ ಕಾಯಿದೆ ಮೂಲಕ ನೋಟಿಸ್ ನೀಡಿದರೆ ಏನೂ ಮಾಡಲಾಗುವುದಿಲ್ಲ.
ಶಾಲೆಗೆ ಸಹಾಯ ಮಾಡುವ ದೃಷ್ಟಿಯಿಂದಲೇ ಅಧಿಕಾರಿಗಳು ಈರೀತಿ ಮಾಡಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ. ಯಾಕೆಂದರೆ ನೋಟಿಸ್ ನೀಡಿದ ಹಾಗೂ ಆಗಬೇಕು, ಅದರಿಂದ ಶಾಲೆಗೆ ಯಾವುದೇ ಹಾನಿ ಆಗಬಾರದು ಎಂಬುದು ಸರ್ಕಾರದ ನಿಲುವಿರುವಂತಿದೆ.
-ರಾಜೀವ ಹೆಗಡೆ