ಗೂಂಡಾ ಕಾಯಿದೆ ಕಣ್ಣೊರೆಸುವ ತಂತ್ರ
ಈಶಾನ್ಯ ರಾಜ್ಯದವರನ್ನು ಕೀಟಲೆ ಮಾಡಿದರೆ ಗೂಂಡಾ ಕಾಯಿದೆ, ಕಳ್ಳ ಮತದಾನ ಮಾಡಲು ಯತ್ನಿಸಿದರೆ ಗೂಂಡಾ ಕಾಯಿದೆ, ಮಾದಕದ್ರವ್ಯ ಮಾರಾಟ ಮಾಡುವವರಿಗೂ ಗೂಂಡಾ ಕಾಯಿದೆ, ಪ್ರಶ್ನೆಪತ್ರಿಕೆ ಹೊರಹಾಕಿದವರಿಗೂ ಗೂಂಡಾ ಕಾಯಿದೆ, ಇದೀಗ ನಮ್ಮ ಮುಖ್ಯಮಂತ್ರಿಗಳು ಅತ್ಯಾಚಾರಿಗಳಿಗೂ ಗೂಂಡಾ ಕಾಯಿದೆ ಅನ್ವಯ ಮಾಡುವುದಾಗಿ ಹೇಳಿದ್ದಾರೆ!
ಗೂಂಡಾ ಕಾಯಿದೆ ಎಂಬುದು ಸರ್ಕಾರದ ಪಾಲಿಗೆ ಬ್ರಹ್ಮಾಸ್ತ್ರ ಎಂಬಂತೆ ಎಲ್ಲದಕ್ಕೂ ಇದನ್ನೇ ಬಳಸುವುದಾಗಿ ಹೇಳುತ್ತಿದೆ. ಆದರೆ ನಿಜವಾಗಿ ಗೂಂಡಾ ಕಾಯಿದೆ ಹಾಕುತ್ತೇವೆ ಎಂಬುದಕ್ಕಿಂತ ದೊಡ್ಡ ಕಣ್ಣೊರೆಸುವ ತಂತ್ರ ಇನ್ನೊಂದಿಲ್ಲ. ಗೂಂಡಾ ಕಾಯಿದೆ ಹಾಕುವುದರಿಂದ ಏನಾಗುತ್ತದೆ? ಯಾವುದಕ್ಕೆ ಬೇಕಾದರೂ ಗೂಂಡಾ ಕಾಯಿದೆ ಅನ್ವಯ ಮಾಡಬಹುದಾ?.
ಎಲ್ಲ ಅಪರಾಧಕ್ಕೂ ಗೂಂಡಾ ಕಾಯಿದೆಯೇ ಮದ್ದು ಎಂದಾದರೆ ಉಳಿದ ಕಾಯಿದೆಗಳ ಅಗತ್ಯವೇ ಇರುವುದಿಲ್ಲವಲ್ಲ. ರಾಜಕಾರಣಿಗಳು ಹೇಗೆಲ್ಲ ಜನರ ಕಣ್ಣಿಗೆ ಮಣ್ಣೆರಚುತ್ತಾರೆ ಎಂಬುದಕ್ಕೆ ಗೂಂಡಾ ಕಾಯಿದೆ ಉತ್ತಮ ಉದಾಹರಣೆ. ಭಾರೀ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಬಿಂಬಿಸಲು ಸರ್ಕಾರ ಈ ಹೇಳಿಕೆ ನೀಡುತ್ತಿದೆ. ಕಾನೂನು ಪ್ರಕಾರ ಗೂಂಡಾ ಕಾಯಿದೆ ಅನ್ವಯಿಸಲು ಸಾಧ್ಯವಿಲ್ಲ. ಅಕಸ್ಮಾತ್ ಮುಖ್ಯಮಂತ್ರಿಗಳ ಮಾತಿಗೆ ಬೆಲೆಕೊಟ್ಟು ಪೊಲೀಸರು ಗೂಂಡಾ ಕಾಯಿದೆಯನ್ನು ಆರೋಪಿಗಳ ಮೇಲೆ ಹೇರಿದರೂ ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಅಂತಿಮವಾಗಿ ತೀರ್ಪು ನೀಡುವಾಗ ಈ ಗೂಂಡಾ ಕಾಯಿದೆಯಿಂದ ಯಾವುದೇ ಉಪಯೋಗ ಆಗುವುದಿಲ್ಲ. ಹೆಚ್ಚೆಂದರೆ ಗೂಂಡಾ ಕಾಯಿದೆ ಅನ್ವಯ ಆರೋಪಿ 3 ತಿಂಗಳು ಜೈಲಿನಲ್ಲೇ ಇರುವಂತೆ ಮಾಡಬಹುದು. ಅದೂ ಆರೋಪಿ ಕಾಯಿದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಿದ್ದರೆ. ಅದಕ್ಕಿಂತ ಹೆಚ್ಚಿನ ಉಪಯೋಗ ಆಗುವುದಿಲ್ಲ.
ಸಿಕ್ಕಸಿಕ್ಕವರಿಗೆ ಗೂಂಡಾ ಕಾಯಿದೆ ಅಳವಡಿಸುವಂತಿಲ್ಲ. ಪ್ರತಿ ಕಾಯಿದೆಗೂ ಅದರ ವ್ಯಾಪ್ತಿ ಇರುತ್ತದೆ. ಅದರ ವ್ಯಾಪ್ತಿ ಇರುವ ಅಪರಾಧ ಪ್ರಕರಣಗಳಿಗೆ ಮಾತ್ರ ಆ ಕಾನೂನು, ಕಲಂ ಅನ್ವಯಿಸಬಹುದು.
ಆದರೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸುವ ಜನರನ್ನು ಸುಮ್ಮನುಳಿಸಲು ಸರ್ಕಾರ ಗೂಂಡಾ ಕಾಯಿದೆ ಎನ್ನುತ್ತಿದೆ. ನಿಜವಾಗಿಯೂ ಗೂಂಡಾ ಕಾಯಿದೆ ಅರಿವಿದ್ದು ಮುಖ್ಯಮಂತ್ರಿಗಳು ಹಾಗೆ ಹೇಳುತ್ತಿದ್ದಾರೋ? ಅಥವಾ ಹಿಂದಿನ ಗೃಹ ಸಚಿವರಂತೆ 'ಗೂಂಡಾ ಕಾಯಿದೆ' ಭ್ರಮೆಗೆ ಒಳಗಾಗಿದ್ದಾರೋ? ಯಾಕೆಂದರೆ ಅತ್ಯಾಚಾರಿಗೆ ಗೂಂಡಾ ಕಾಯಿದೆಯಲ್ಲಿ ಶಿಕ್ಷೆ ಕೊಡಿಸುವುದು ಆಗದ ಮಾತು. ಹೆಚ್ಚು ಸಮಯ ಆತ ಜೈಲಿನಲ್ಲಿರುವಂತೆ, ಜಾಮೀನು ಪಡೆಯದಂತೆ ಮಾಡಬಹುದು.
ಈಗಾಗಲೇ ಉದಾಹರಿಸಿದಂತೆ ಪ್ರಶ್ನೆಪತ್ರಿಕೆ ಬಹಿರಂಗಗೊಳಿಸಿದ ಆರೋಪಿಗಳಿಗೆ, ಈಶಾನ್ಯ ಪ್ರದೇಶದ ಜನರಿಗೆ ತೊಂದರೆ ಕೊಡುವವರಿಗೆ, ಮಾದಕದ್ರವ್ಯ ಮಾರಾಟ ಮಾಡುವವರಿಗೆ ಗೂಂಡಾ ಕಾಯಿದೆ ಅಳವಡಿಸುತ್ತೇವೆ ಎಂದು ಸರ್ಕಾರಗಳು ವಿಧಾನಸಭೆಯಲ್ಲೇ ಹೇಳಿಕೆ ನೀಡಿರುವುದಕ್ಕೆ ವಿಧಾನಸಭೆ ಕಲಾಪದ ದಾಖಲೆಗಳ ಸಾಕ್ಷ್ಯವಿದೆ. ಆದರೆ ಅದರಿಂದ ಅಂತಿಮವಾಗಿ ಆರೋಪಿಗೆ ಶಿಕ್ಷೆಯಾಯಿತೇ? ಅದರಿಂದಾದ ಉಪಯೋಗವೇನು? ಎಂಬುದಕ್ಕೆ ಯಾರ ಬಳಿಯೂ ದಾಖಲೆ ಇಲ್ಲ.ಜನ ಹೋರಾಟಕ್ಕಾಗಿ ಬೀದಿಗಿಳಿದಾಗ, ಸರ್ಕಾರದ ಮೇಲೆ ಒತ್ತಡ ಹೆಚ್ಚಿದಾಗ ಅದರಿಂದ ಬಚಾವಾಗಲು ಸರ್ಕಾರ ಗೂಂಡಾ ಕಾಯಿದೆ ಎಂಬ ಅಸ್ತ್ರ ಬಳಸುತ್ತಿದೆ. ಇದನ್ನು ನಂಬಿದ ಜನರೂ ಸುಮ್ಮನಾಗುತ್ತಾರೆ. ಮತ್ತೆ ಯಥಾಸ್ಥಿತಿ ಮುಂದುವರಿಯುತ್ತದೆ.
ಒಮ್ಮೆ ಅತ್ಯಾಚಾರ ಮಾಡಿದ ಆರೋಪಿಗೆ ಗೂಂಡಾ ಕಾಯಿದೆ ಅನ್ವಯವಾಗದು. ಒಂದುವೇಳೆ ಅಧಿಕಾರಿಗಳು ಅನ್ವಯಿಸಿದರೂ ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ಗೂಂಡಾ ಕಾಯಿದೆ ಅಳವಡಿಸಲೇಬೇಕೆಂದಾದರೆ ಅದಕ್ಕೆ ತಿದ್ದುಪಡಿ ತರಬೇಕಾಗುತ್ತದೆ.
- ಅಶೋಕ್ ಕುಮಾರ್, ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ
-ವಿನಾಯಕ ಭಟ್ಟ ಮೂರೂರು