ಬೇಳೂರು ಪುತ್ರಿ ಹೆಸರಲ್ಲಿ ಫೇಸ್‌ಬುಕ್ ಪ್ರೀತಿ, ಪ್ರೇಮ!
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ..
ಬೆಂಗಳೂರು: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪುತ್ರಿಯ ಫೋಟೋ ದುರುಪಯೋಗಪಡಿಸಿಕೊಂಡು ಫೇಸ್‌ಬುಕ್, ವಾಟ್ಸ್ ಆ್ಯಪ್ ಹಾಗೂ ವಿ ಚಾಟ್ ಅಕೌಂಟ್ ಸೃಷ್ಟಿಸಿ ಹುಡುಗರನ್ನು ಯಾಮಾರಿಸುತ್ತಿದ್ದ ಯುವತಿಯೊಬ್ಬಳ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೆನ್ನೈನಲ್ಲಿ ಈ ಯುವತಿ ಬಂಧಿಸಲಾಗಿದೆ.
ಗೋಪಾಲಕೃಷ್ಣ ಪುತ್ರಿ ಮೇಘ ಹೆಸರಿನಲ್ಲಿ ಈ ಯುವತಿ ಫೇಸ್‌ಬುಕ್‌ನ ನಕಲಿ ಅಕೌಂಟ್ ತೆರೆದು ಕಳೆದ 1 ವರ್ಷದಿಂದ ಹಲವು ಯುವಕರೊಂದಿಗೆ ಚಾಟಿಂಗ್ ಮಾಡುತ್ತಿದ್ದಳು. ವಾಟ್ಸ್ ಆ್ಯಪ್ ವಿ ಚಾಟ್ ಮೂಲಕವೂ ಚಾಟಿಂಗ್ ನಡೆಸುತ್ತಿದ್ದಳು. ಅಲ್ಲದೆ ಮೊಬೈಲ್ ಫೋನ್ ನಂಬರ್ ನೀಡಿ ಗಂಟೆಗಟ್ಟಲೆ ಮಾತನಾಡುತ್ತಿದ್ದಳು. ಆದರೆ, ಈ ವಿಷಯ ಮೇಘ ಅವರ ಗಮನಕ್ಕೆ ಬಂದಿರಲಿಲ್ಲ.
ನಾಲ್ಕು ದಿನಗಳ ಹಿಂದಷ್ಟೇ ಸ್ನೇಹಿತರೊಬ್ಬರು ಮೇಘ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಹಲವು ತಿಂಗಳುಗಳಿಂದ ಚಾಟ್ ಮಾಡುತ್ತಿದ್ದೇವಲ್ಲಾ ಎಂದು ಹೇಳಿದ್ದಾರೆ. ಆಶ್ಚರ್ಯಗೊಂಡ ಮೇಘ, ಆ ಮೊಬೈಲ್ ನಂಬರ್ ನೋಡಿದಾಗ ಬೇರೆಯದೇ ಆಗಿತ್ತು. ಇನ್ನು ಫೇಸ್‌ಬುಕ್ ಅಕೌಂಟ್ ಇರುವುದನ್ನೂ ಅವರು ತಿಳಿಸಿದ್ದಾರೆ. ಆ ಅಕೌಂಟ್ ಕೂಡಾ ನಕಲಿಯಾಗಿತ್ತು. ಹೀಗಾಗಿ ಮೇಘ ಜು.17ರಂದು ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ತನ್ನ ಫೋಟೋ ದುರ್ಬಳಕೆ ಸಂಬಂಧ ದೂರು ದಾಖಲಿಸಿದ್ದಾರೆ.
ಹೈಸ್ಕೂಲ್ ಸ್ನೇಹಿತೆಯಿಂದ ದುರುಪಯೋಗ: ಪೊಲೀಸರ ಪರಿಶೀಲನೆ ವೇಳೆ ಮೊಬೈಲ್ ನಂಬರ್ ಪ್ರತಿಮಾ ಎನ್ನುವವರದು ಎಂದು ತಿಳಿದುಬಂದಿದೆ. ಸದ್ಯ ಚೆನ್ನೈನಲ್ಲಿ ವಾಸವಿರುವ ಪ್ರತಿಮಾ, ಮೇಘ ಅವರ ಫೋಟೋ ದುರ್ಬಳಕೆ ಮಾಡಿಕೊಳ್ಳುತ್ತಿದ್ದಳು. ಮೇಘ - ಪ್ರತಿಮಾ ಹೈಸ್ಕೂಲ್ ಸ್ನೇಹಿತ ರಾಗಿದ್ದರು. ಕಾಲೇಜಿಗೆ ಬಂದ ಬಳಿಕ ಇಬ್ಬರೂ ದೂರವಾಗಿದ್ದರು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಪ್ರೀತಿ ಪ್ರೇಮ!
ಯುವತಿ ಪ್ರತಿಮಾ, ಮೇಘ ಅವರ ಫೇಸ್‌ಬುಕ್ ಫೋಟೋ ದುರ್ಬಳಕೆ ಮಾಡಿಕೊಂಡು ಸುಮಾರು 1 ವರ್ಷದಿಂದ ಹಲವು ಯುವಕರೊಂದಿಗೆ ವಾಟ್ಸ್ ಆ್ಯಪ್ ಹಾಗೂ ವಿ ಚಾಟ್‌ನಲ್ಲಿ ಪ್ರೀತಿ, ಪ್ರೇಮ ಎಂದೆಲ್ಲ ಚಾಟಿಂಗ್ ಮಾಡಿದ್ದಾಳೆ. ಮೊಬೈಲ್ ನಂಬರ್ ನೀಡಿ ಗಂಟೆಗಟ್ಟಲೆ ಪ್ರೀತಿ, ಪ್ರೇಮ ಕುರಿತು ಮಾತನಾಡಿದ್ದಾಳೆ. ಇದರಿಂದ ಹಲವು ಯುವಕರು ಪ್ರತಿಮಾ ಬಲೆಗೆ ಬಿದ್ದಿದ್ದರು ಎನ್ನಲಾಗಿದೆ.
ಬಿಬಿಎಂ ಪದವೀಧರೆಯಾಗಿರುವ ನನ್ನ ಮಗಳು ಧೈರ್ಯ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದುರ್ಬಲ ಮನಸ್ಸಿನವರಾಗಿದ್ದರೆ ಏನಾದರೂ ಅನಾಹುತ ಮಾಡಿಕೊಳ್ಳುತ್ತಿದ್ದರು. ಇದಕ್ಕೆಲ್ಲ ಯಾರು ಹೊಣೆ? ವಿಶೇಷವಾಗಿ ಯುವತಿಯರು ಫೇಸ್‌ಬುಕ್, ವಾಟ್ಸ್ ಆ್ಯಪ್ ಬಳಕೆ ಮಾಡುವಾಗ ಎಚ್ಚರದಿಂದ ಇರಬೇಕು.
-ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ