ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಕ್ಕಳ ಸುರಕ್ಷೆಗೆ ಗೃಹ ಇಲಾಖೆ ಮಾರ್ಗಸೂಚಿ

ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳನ್ನು ತಡೆಗಟ್ಟಲು ಗೃಹ ಇಲಾಖೆ..

Vishwanath S
Updated On : 21 Jul 2014, 3:28 am

ಬೆಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳನ್ನು ತಡೆಗಟ್ಟಲು ಗೃಹ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಯನ್ನು ಶಾಲೆಗಳಿಗೆ ಕಳುಹಿಸಲು ಗೃಹ ಇಲಾಖೆ ನಿರ್ಧರಿಸಿದೆ.
ತೂಬರಹಳ್ಳಿಯ ವಿಬ್‌ಗ್ಯೊರ್ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಜವಾಬ್ದಾರಿ ಶಾಲೆಗಳಿಗೆ ಸೇರಿದ್ದು. ಅಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಶಾಲಾ ಮುಖ್ಯಸ್ಥರು ಹೊಣೆಯಾಗುತ್ತಾರೆ. ಹೀಗಾಗಿ ಶಿಕ್ಷಣ ಹಾಗೂ ಸುರಕ್ಷತೆ ಶಾಲೆಯ ಜವಾಬ್ದಾರಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.  ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಲು ಯಾವುದೇ ಗಡುವು ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. 

ಮಾರ್ಗಸೂಚಿ ಅಂಶಗಳು
* ಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ.
* ಮಕ್ಕಳನ್ನು ಅವರ ಪೋಷಕರೊಂದಿಗೆ ಮಾತ್ರ ಕಳುಹಿಸಬೇಕು. ಕರೆದೊಯ್ಯುವವರ ಗುರುತಿನ ಪತ್ರ ಪರಿಶೀಲಿಸಬೇಕು.
* ಯಾವುದೇ ರೀತಿಯ ದೌರ್ಜನ್ಯ, ಶಿಕ್ಷೆ, ಅಪರಾಧಗಳು ಕಂಡುಬಂದಲ್ಲಿ ಶಾಲೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಬೇಕು.
* ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯ ಹಿನ್ನೆಲೆ ಹಾಗೂ ವಿವರ ಸಂಪೂರ್ಣ ತಿಳಿದುಕೊಂಡು ನೇಮಕ ಮಾಡಿಕೊಳ್ಳುವುದು ಹಾಗೂ ಈ ವಿವರವನ್ನು ಪೊಲೀಸರಿಗೆ ನೀಡುವುದು.
* ತಿಂಗಳಿಗೊಮ್ಮೆ ಶಾಲೆಗಳಿಗೆ ಪೊಲೀಸರ ಕಡ್ಡಾಯ ಭೇಟಿ.
* ಶಾಲೆಗಳ ಅಭಿವೃದ್ಧಿ ಹಾಗೂ ಬದಲಾವಣೆ ಬಗ್ಗೆ ಪೊಲೀಸರಿಂದ ನಿಗಾ
* ಶಾಲೆಗಳಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ ಇಡುವುದು.
* ಶಾಲೆಗಳಲ್ಲಿ ಮಕ್ಕಳಿಗೆ ಗಂಭೀರ ಶಿಕ್ಷೆ ನೀಡಬಾರದು.

ವಿವಿಗಳಲ್ಲಿ ಸಿಸಿಟಿವಿ: ಆರ್ವಿ
ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ತಮ್ಮಲ್ಲಿರುವ ವಿದ್ಯಾರ್ಥಿ ಸಮೂಹಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಅದರಂತೆ ಅವರು ಕಾಲೇಜುಗಳಿಗೆ ಭೇಟಿ ನೀಡಿ ಸಿಸಿ ಟಿವಿ ಅಳವಡಿಸಿ, ಎಲ್ಲರ ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಆಯಾ ಕಾಲೇಜುಗಳ ಪ್ರಾಚಾರ್ಯರಿಗೂ ಈ ಕುರಿತು ಜವಾಬ್ದಾರಿ ವಹಿಸುವಂತೆ ತಿಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಇನ್ನು ಮುಂದೆ ಅತ್ಯಾಚಾರ, ದೌರ್ಜನ್ಯ ಎಸಗಿದ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಲಾಗುವುದು. ಇಂಥ ವಿಷಯದಲ್ಲಿ ರಾಜಕೀಯ ಸಲ್ಲದು. ಆರೋಪಿಗಳಿಗೆ ಭಯ ಹುಟ್ಟಿಸುವ ವಾತಾವರಣವನ್ನು ನಿರ್ಮಿಸಬೇಕು. ಈ ಪೈಶಾಚಿಕ ಕೃತ್ಯಗಳು ನಡೆಯಬಾರದು. ಮಾಧ್ಯಮಗಳ ಇಂಥವನ್ನು ವೈಭವೀಕರಿಸದೇ, ಖಂಡಿಸಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಧೈರ್ಯಗೆಡದೆ ಸಾಕ್ಷ್ಯ ಕಾಪಾಡಿ
ಅತ್ಯಾಚಾರಕ್ಕೊಳಗಾದಾಗ ಏನು ಮಾಡಬೇಕೆನ್ನುವುದು ಸುಲಭ. ಆದರೆ ಪಾಲಿಸುವುದು ಕಷ್ಟ. ಅಂಥ ಸ್ಥಿತಿ ಯಾರಿಗೂ ಬಾರದಿರಲಿ. ಆದರೆ, ಅನಾಹುತ ನಡೆದೇಹೋದಾಗ ಮುಂದೇನು ಮಾಡಬೇಕೆಂಬುದರ ಬಗ್ಗೆ ಕೆಲವು ಸಲಹೆಗಳು.
* ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಹೋಗಿ, ವೈದ್ಯ ತಪಾಸಣೆಗೆ ಒಳಗಾಗಿ.
* ಪೊಲೀಸ್ ನಿಯಂತ್ರಣ ಕೊಠಡಿಗೂ ಮಾಹಿತಿ ನೀಡಿ. ಆಸ್ಪತ್ರೆಗೆ ಹೋಗಲೂ ಸಾಧ್ಯವಾಗದ ಸ್ಥಿತಿ ಇದ್ದರೆ ಮಹಿಳಾ ಸಹಾಯವಾಣಿ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ.
* ಬಟ್ಟೆ ಬದಲಾಯಿಸಿದರೂ, ಅತ್ಯಾಚಾರವಾದಾಗ ಧರಿಸಿದ್ದ ಬಟ್ಟೆಗಳನ್ನು ಎಸೆಯಬೇಡಿ. ತೊಳೆಯಬೇಡಿ. ಸಹಾಯಕ್ಕೆ ಬಂದವರಿಗೂ ಹೇಳಿ.
* ಒರೆಸಿಕೊಳ್ಳುವುದು, ಸ್ನಾನ ಮಾಡುವುದು, ತಲೆ ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಮೈ ಮೇಲಿನ ಕುರುಹುಗಳು ಹಾಗೂ ಸಾಕ್ಷ್ಯ ತೆಗೆಯುವುದು ಬೇಡ. ನಿಮ್ಮ ಮೈಮೇಲಿನ ಕುರುಹುಗಳೇ ಆರೋಪಿಗೆ ಮಾರಕ ಎಂದು ನೆನಪಿರಲಿ.
* ಮೈಮೇಲೆ ಯಾವುದೇ ಗಾಯ ಇಲ್ಲದಿದ್ದರೂ ಪರವಾಗಿಲ್ಲ. ಸಾಧ್ಯವಾದಷ್ಟು ಬೇಗ ವೈದ್ಯ ಪರೀಕ್ಷೆಗೆ ಒಳಪಡಬೇಕು. ಆರೋಪಿಯ ವೀರ್ಯ, ಕೂದಲು, ಗಾಯವಾಗಿದ್ದಲ್ಲಿ ಆತನ ಚರ್ಮ, ರಕ್ತ ಹೀಗೆ ಕುರುಹು ಲಭ್ಯವಾಗುತ್ತದೆ.
* ಆರೋಪಿಯ ಕೂದಲು ಎಳೆಯಿರಿ. ಅಥವಾ ಮೈ ಪರಚಿ. ಇದರಿಂದ ಅತ್ಯಾಚಾರ ತಪ್ಪದಿದ್ದರೂ ಆತನ ಕೂದಲು, ಚರ್ಮ ಸಿಕ್ಕಿಕೊಳ್ಳುತ್ತದೆ. ಇಷ್ಟು ಸಾಕು, ಆತನನ್ನು ಸಿಕ್ಕಿಸಲು.
* ಒಂದು ವೇಳೆ ಪ್ರಜ್ಞೆ ತಪ್ಪಿಸುವ ಪಾನೀಯ, ಮಾತ್ರೆ, ಚುಚ್ಚುಮದ್ದು ನೀಡಿದಲ್ಲಿ, ರಕ್ತ, ಮೂತ್ರ ಮಾದರಿ ತೆಗೆಯಲು ವೈದ್ಯರಲ್ಲಿ ಮನವಿ ಮಾಡಿ.
* ಕೃತ್ಯ ಎಸಗಿದ ವ್ಯಕ್ತಿ ಅಪರಿಚಿತನಾಗಿದ್ದಲ್ಲಿ ಆತನ ಮುಖಚಹರೆ ಹಾಗೂ ಕೃತ್ಯದ ಬಗೆಗಿನ ವಿಷಯಗಳನ್ನು ಸಂಪೂರ್ಣವಾಗಿ ವೈದ್ಯರು ಹಾಗೂ ಪೊಲೀಸರ ಮುಂದೆ ವಿವರಿಸಿ.
* ಮನೆಯ ಒಳಗೆ ಅತ್ಯಾಚಾರ ಸಂಭವಿಸಿದಲ್ಲಿ ಸ್ಥಳವನ್ನು ಸ್ವಚ್ಛಗೊಳಿಸುವುದಾಗಲಿ, ತೊಳೆಯುವುದಾಗಲಿ ಮಾಡಬಾರದು.
* ಕುಟುಂಬ ಸದಸ್ಯರು, ಆಪ್ತ ಸ್ನೇಹಿತರಿಗೆ ಮಾಹಿತಿ ನೀಡಿ. ಅವರು ನಿಮಗೆ ಮಾನಸಿಕ ಬೆಂಬಲ, ಧೈರ್ಯ- ಸ್ಥೈರ್ಯ ತುಂಬುವಂತಿರಬೇಕು. ನೀವಿರುವ ಸ್ಥಿತಿಯಲ್ಲಿ ಯಾರು ಧೈರ್ಯ ತುಂಬಿ ಸಹಾಯ ಮಾಡಬಲ್ಲರೋ ಅವರಿಗೆ ಮಾತ್ರ ತಕ್ಷಣಕ್ಕೆ ಮಾಹಿತಿ ನೀಡಿದರೆ ಸಾಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement