ಶಾಲಾ ಮಕ್ಕಳೇ ನಾಟಿ ಮಾಡ್ತಾರೆ, ಬತ್ತ ಬೆಳೀತಾರೆ!
ಶಿವಮೊಗ್ಗ: ಹಾಲು ಉತ್ಪತ್ತಿ ಹೇಗಾಗುತ್ತದೆ ಎಂದರೆ ಪ್ಯಾಕೇಟ್ನಲ್ಲಿ ಬರುತ್ತದೆಂದೂ, ಅಕ್ಕಿ ಬರೋದು ಅಂಗಡಿಯಿಂದ ಎಂದೂ ಹೌಹಾರುವ ಉತ್ತರಗಳನ್ನು ಇಂದಿನ ಮಕ್ಕಳು ನೀಡುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅನ್ನದ ಮೌಲ್ಯವನ್ನು ಮಕ್ಕಳಿಗೆ ತಿಳಿಸುವ ವಿಶೇಷ ಪ್ರಯತ್ನವೊಂದನ್ನು ಜಿಲ್ಲೆಯ ಸಾಗರದ ಸೇವಾ ಸಾಗರ ಶಾಲೆ ಮಾಡುತ್ತಿದೆ. ಪ್ರೌಢಶಾಲೆಯ 55 ಮಕ್ಕಳು ಬತ್ತ ಬಿತ್ತನೆ ಮಾಡಿ, ಕೊಯ್ಲು ನಡೆಸಿ, ಮಿಲ್ಗೆ ತೆರಳಿ ಅಕ್ಕಿ ಮಾಡಿಸಿಕೊಂಡು ಬಂದು ಊಟ ಮಾಡುವವರೆಗೂ ಪ್ರಾಯೋಗಿಕ ತಿಳಿವಳಿಕೆ ಪಡೆದುಕೊಳ್ಳಲಿದ್ದಾರೆ.
ಹೀಗಿದೆ ಕಾರ್ಯಕ್ರಮ: ರೈತನೇ ದೇಶದ ಬೆನ್ನೆಲುಬು ಎಂಬ ಅರಿವು ಮೂಡಿ, ಮಕ್ಕಳಲ್ಲಿ ರೈತನ ಬಗ್ಗೆ ವಿಶೇಷ ಭಾವ ಮೂಡಬೇಕು. ಗದ್ದೆಯಲ್ಲಿ ದುಡಿಯುವ ಕಷ್ಟ, ಸುಖ ಮಕ್ಕಳಿಗೂ ಗೊತ್ತಾಗಲಿ ಎಂಬ ಉದ್ದೇಶದೊಂದಿಗೆ ಇಂಥದ್ದೊಂದು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎನ್ನುತ್ತಾರೆ ಶಾಲೆಯ ಮುಖ್ಯಸ್ಥರು. ಈ ಶಾಲೆಯ ಮಕ್ಕಳ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಸಾಗರದಿಂದ 3 ಕಿ.ಮೀ. ದೂರವಿರುವ ಸೂರನಗದ್ದೆ ಗ್ರಾಮಕ್ಕೆ ಅಂಟಿಕೊಂಡಿರುವ ಗದ್ದೆ ಬಯಲಿನಲ್ಲಿ. ಸದ್ಯ ಮಕ್ಕಳೀಗ ಬತ್ತದ ಸಸಿ ಮಾಡಿ, ಅದನ್ನು ನಾಟಿ ಮಾಡಿದ್ದಾರೆ. ಇದೆಲ್ಲದಕ್ಕೂ ಸ್ಥಳೀಯ ರೈತರು ಮಾರ್ಗದರ್ಶನ ನೀಡುತ್ತಿದ್ದಾರೆ. ಬತ್ತ ಬೆಳೆಯುವ ಪ್ರತಿ ಹಂತವನ್ನು ಗಮನಿಸುವ ಮಕ್ಕಳು, ನಾಟಿ ಬಗ್ಗೆ ರೈತರಿಂದಲೇ ಮಾಹಿತಿ ಪಡೆಯುತ್ತಾರೆ. ಬತ್ತ ಹೂವು ಕಟ್ಟುವ ಸಂದರ್ಭದಲ್ಲಿ ಗದ್ದೆ ಬಯಲಿನಲ್ಲಿ ಹೇಗೆ ಕಾಣುತ್ತದೆ, ಬೆಳೆಗೆ ಬರುವ ಕೀಟಗಳು, ರೈತರು ಬೆಳೆಯ ರಕ್ಷಣೆಗೆ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತಾರೆ? ತೆನೆಯಲ್ಲಿ ಹಾಲು ತುಂಬುವುದು ಅಂದರೇನು? ಬತ್ತ ಬಲಿಯುವ ವಿಧಾನ ಹೇಗೆ? ಕಟಾವು ಸೇರಿದಂತೆ ವಿವಿಧ ಹಂತಗಳ ಬಗ್ಗೆ ಖುದ್ದಾಗಿ ಗದ್ದೆಗೆ ತೆರಳಿ ಮಕ್ಕಳು ಮಾಹಿತಿ ಪಡೆದು, ಕೆಲಸ ಮಾಡುತ್ತಾರೆ.
ನಂತರ ಒಕ್ಕಲು, ಹುಲ್ಲು ಮತ್ತು ಕಾಳನ್ನು ಬೇರ್ಪಡಿಸುವ ವಿಧಾನ, ನಂತರ ಕಾಳು ಒಣಗಿಸಿ ಅಕ್ಕಿ ಮಾಡಿಸುವ ಪ್ರಕ್ರಿಯೆ, ಅಕ್ಕಿಯಿಂದ ಅನ್ನ ಮಾಡುವ ಬಗೆಯನ್ನು ಮಕ್ಕಳು ಅರಿತುಕೊಳ್ಳುತ್ತಾರೆ.
- ಶ್ರೀಕಾಂತ್ ಭಟ್