ಸಾಮಾಜಿಕ ಜಾಲತಾಣ; ಅತ್ಯಾಚಾರ ವಿರುದ್ಧ ಬಾಣ
ಈಗ ಅತ್ಯಾಚಾರದ ವಿರುದ್ಧ ಆನ್ ರೋಡ್ ಪ್ರತಿಭಟನೆ ಮಾತ್ರವಲ್ಲ. ಆನ್ಲೈನ್ ಪ್ರತಿಭಟನೆಗಳೂ...
ಕಾರವಾರ: ಈಗ ಅತ್ಯಾಚಾರದ ವಿರುದ್ಧ ಆನ್ ರೋಡ್ ಪ್ರತಿಭಟನೆ ಮಾತ್ರವಲ್ಲ. ಆನ್ಲೈನ್ ಪ್ರತಿಭಟನೆಗಳೂ ಆಗುತ್ತಿವೆ! ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ರಾಜಕಾರಣಿಗಳು, ಪೊಲೀಸ್ ವ್ಯವಸ್ಥೆ, ಕಾಮುಕರ ವಿರುದ್ಧ ವ್ಯಾಪಕ ಟೀಕೆಗಳು ಶುರುವಾಗಿದೆ.
'ಸಿದ್ದರಾಮಯ್ಯ ನಿದ್ದೆಯಲ್ಲಿದ್ದಾರೆ. ಕಾಮುಕರ ಅಟ್ಟಹಾಸ ಮೇರೆ ಮೀರಿದೆ', 'ಕಾಮುಕ ಜಗತ್ತಿಗೆ ಧಿಕ್ಕಾರವಿರಲಿ', 'ಇವು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ', ಇವು ಆಕ್ರೋಶಿತ ಪೋಸ್ಟ್ಗಳ ಸ್ಯಾಂಪಲ್ಗಳು.
ಹೌದು. ಈಗ ಟ್ವಿಟರ್, ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗಳಲ್ಲೂ ಪ್ರತಿಭಟನೆ ಶುರುವಾಗಿದೆ. ಯುವಜನತೆ ಸಿಡಿದೆದ್ದಿದ್ದಾರೆ. ಇವರಲ್ಲಿ ಹೆಚ್ಚಿನ ಪಾಲು ಮಹಿಳೆಯರು ಹಾಗೂ ಯುವತಿಯರದ್ದು.
ಕಪ್ಪು ಚುಕ್ಕೆ: ಸಾಕಷ್ಟು ಮಹಿಳೆಯರು ಫೇಸ್ಬುಕ್ ಹಾಗೂ ವಾಟ್ಸಆ್ಯಪ್ಗಳಲ್ಲಿ ತಮ್ಮ ಪ್ರೊಫೈಲ್ ಫೋಟೋ ಜಾಗಕ್ಕೆ ಕಪ್ಪು ಚುಕ್ಕೆ (ಬ್ಲ್ಯಾಕ್ ಡಾಟ್) ಹಾಕಿ ಪ್ರತಿಭಟಿಸುತ್ತಿದ್ದಾರೆ. ಬ್ಲ್ಯಾಕ್ ಡಾಟ್ ಆಫ್ ಶೇಮ್ ಎಂಬ ಬರಹವನ್ನೂ ಕಪ್ಪು ಚುಕ್ಕೆಯಲ್ಲಿ ಹಾಕಲಾಗಿದೆ. ಅತ್ಯಾಚಾರ ಮತ್ತು ಕಾಮುಕರ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಟೀಕಾಸ್ತ್ರಗಳ ಪೋಸ್ಟ್ಗಳನ್ನೂ ಹಾಕಲಾಗಿದೆ. ಪ್ರತಿಯೊಂದು ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ.
ಅತ್ಯಾಚಾರ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಸಂಬಂಧಿಸಿದ್ದು, ಹೆಣ್ಣನ್ನು ಭೋಗದ ವಸ್ತುವೆಂದು ಭಾವಿಸಿ ಇಂಥ ಕೃತ್ಯ ಎಸಗುವ ಮನುಷ್ಯನಿಗೆ ಧಿಕ್ಕಾರ ಎಂದು ಒಂದು ಪೋಸ್ಟ್ನಲ್ಲಿದ್ದರೆ, ನ್ಯಾಯಾಲಯದಲ್ಲಿ ಅತ್ಯಾಚಾರಿಗಳ ಬಗ್ಗೆ ಪ್ರಕರಣ ದಾಖಲಿಸುವ ಮುನ್ನ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಬೇಕು ಎನ್ನುವುದು ಮತ್ತೊಂದು ಪೋಸ್ಟ್ನ ಕಾರ ನುಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿದ್ದೆಯಲ್ಲಿದೆಯೇ? ಏನು ಮಾಡುತ್ತಿದೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಸರ್ಕಾರದ ವಿರುದ್ಧ ತೀವ್ರ ದಾಳಿ: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಅತ್ಯಾಚಾರ ಹಾಗೂ ಅತ್ಯಾಚಾರಿಗಳ ವಿರುದ್ಧ ಮಾತ್ರ ಅಲ್ಲ, ಸರ್ಕಾರದ ವಿರುದ್ಧವೂ ಮಹಿಳೆಯರು ಹಾಗೂ ಯುವತಿಯರು ಮುಗಿಬಿದ್ದಿದ್ದಾರೆ. ರಾಜ್ಯಾದ್ಯಂತ ಅತ್ಯಾಚಾರ ನಡೆಯುತ್ತಿದ್ದರೂ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಛೇಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂಥ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗೊಂಡಿರುವಾಗಲೆ ಕರ್ನಾಟಕದಲ್ಲೂ ಮೇಲಿಂದ ಮೇಲೆ ನಡೆಯುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂಬ ಪೋಸ್ಟ್ಗಳೂ ಹರಿದಾಡುತ್ತಿವೆ.
ನಾಗರಿಕ ಸಮಾಜದಲ್ಲಿ ನಾವಿದ್ದೇವೆ. ಆದರೆ, ನಮ್ಮನ್ನು ರಕ್ಷಿಸುವವರು ಮಾತ್ರ ಯಾರೂ ಕಾಣುತ್ತಿಲ್ಲ ಎಂದು ಧಾರವಾಡದ ವೇದಾ ಅಂಡಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಹಗಲಿನಲ್ಲಿ, ಜನ ಸಂಚಾರ ಇರುವಲ್ಲಿ ಅತ್ಯಾಚಾರ ನಡೆಯುತ್ತಿದ್ದರೂ ಆರೋಪಿಗಳನ್ನು ಬಂಧಿಸಲಾಗುತ್ತಿಲ್ಲ. ಅತ್ಯಾಚಾರದಂಥ ಘಟನೆ ತಡೆಯಲು ಮುಂದಾಗುತ್ತಿಲ್ಲ. ಮಹಿಳಾ ಸಮಾನತೆ, ಮಹಿಳೆಯರ ಹಕ್ಕಿನ ಬಗ್ಗೆ ಓತಪ್ರೋತವಾಗಿ ಮಾತನಾಡುವವರು ಮಹಿಳೆಯರ ರಕ್ಷಣೆಗೆ ಮುಂದಾಗದಿರುವುದು ದುರ್ದೈವದ ಸಂಗತಿ ಎಂದು ಸರ್ಕಾರ, ಪೊಲೀಸರು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತ್ಯಾಚಾರ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕಾಮುಕರು ಹಾಗೂ ಸರ್ಕಾರದ ವಿರುದ್ಧ ಆಂದೋಲನ ರೂಪಗೊಳ್ಳುತ್ತಿದೆ.
-ವಸಂತಕುಮಾರ್ ಕತಗಾಲ