ಸಿಎಂ ಅವರೇ, ಚೀನಾನೇ ಏಕೆ? ಬೈನಾ ಬೇಡವೇ?
ವಾಸ್ಕೋ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಶಾಸಕರು ಅಧ್ಯಯನ ಪ್ರವಾಸ ಹೆಸರಿನಲ್ಲಿ ಮೋಜು-ಮಸ್ತಿಗಾಗಿ ವಿದೇಶಿ ಪ್ರವಾಸಕ್ಕೆ ಹೋಗುವ ಬಗ್ಗೆ ರಾಜ್ಯಾದ್ಯಂತ ವಿರೋಧ ಉಂಟಾಯಿತು. ಆದರೆ ನೀವು, ಅದೇ ಶಾಸಕರ ತಂಡವನ್ನು ಅಧ್ಯಯನಕ್ಕಾಗಿ ಗೋವಾದ ಬೈನಾಕ್ಕೆ ಏಕೆ ಕಳಿಸಬಾರದು? ಇದರಿಂದ ನಿಮಗೂ ಒಳ್ಳೇ ಹೆಸರು ಬರುವುದಿಲ್ಲವೇ?
ಇಲ್ಲಿನ ಕನ್ನಡಿಗರ ಬಗ್ಗೆ ಅಧ್ಯಯನ ನಡೆಸುವ ತುರ್ತು ಅಗತ್ಯವಿದೆ. ನಮ್ಮ ಶಾಸಕರು ಅಧ್ಯಯನ ಪ್ರವಾಸಕ್ಕೆಂದು ಚೀನಾಕ್ಕೆ ಹೋಗುತ್ತಾರೆ. ಸಿಂಗಾಪುರಕ್ಕೆ ದೌಡಾಯಿಸುತ್ತಾರೆ. ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಹೀಗೆ ಎಲ್ಲಿ ಬೇಕೆಂದರಲ್ಲಿ ಅಧ್ಯಯನದ ಹೆಸರಿನಲ್ಲಿ ಪ್ರವಾಸ ಹೋಗುತ್ತಾರೆ. ಆದರೆ ಗೋವಾದ ಬೈನಾದಲ್ಲಿ ನಿರ್ಗತಿಕರಾದ ಇವರ ಸ್ಥಿತಿ-ಗತಿ ಅಧ್ಯಯನಕ್ಕೆ ಯಾಕೆ ಬರಲ್ಲ ಎಂದು ಜನತೆ ಪ್ರಶ್ನಿಸುವಂತಾಗಿದೆ.
ಅಧ್ಯಯನ ವಿಷಯಗಳು: ಬೈನಾದಲ್ಲಿ 2004ರಲ್ಲಿ 400ಕ್ಕೂ ಹೆಚ್ಚು ಕನ್ನಡಿಗ ಕೂಲಿ ಕಾರ್ಮಿಕರ ಮನೆಗಳನ್ನು ಬುಡಮೇಲು ಮಾಡಲಾಗಿದೆ. ಆಗ ಸಾವಿರಾರು ಜನರು ನಿರ್ಗತಿಕರಾಗಿದ್ದರು. ಜು. 11ರಂದು 75ರಷ್ಟು ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಈ ಕೂಲಿ ಕಾರ್ಮಿಕರು ಆಸರೆಯೇ ಇಲ್ಲದೆ ಬೈನಾದ ಕಡಲತೀರದಲ್ಲಿ ನೆಲೆಸಿದ್ದಾರೆ. ಅವರು ಹಗಲು-ರಾತ್ರಿ ಹೇಗೆ ಕಳೆಯುತ್ತಾರೆ. ಒಪ್ಪೊತ್ತಿನ ಊಟ ಎಷ್ಟು ಜನರಿಗೆ ಲಭಿಸುತ್ತದೆ. ಗರ್ಭಿಣಿಯರು, ಬಾಣಂತಿಯರು, ಹಸುಗೂಸು ಇವೆಲ್ಲವುಗಳ ಬಗ್ಗೆ ಅಧ್ಯಯನ ಮಾಡಬಹುದು. ಮಕ್ಕಳು ಶಾಲೆಗೆ ಏಕೆ ಹೋಗುತ್ತಿಲ್ಲ. ಎಷ್ಟು ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾಯಿಲೆಗೆ ಕಾರಣಗಳೇನು? ಸಾಂಕ್ರಾಮಿಕ ರೋಗ ಹರಡದಂತೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು? ಅವರಿಗೆ ಕಾಯಂ ಪುನರ್ವಸತಿ, ಪರಿಹಾರ ಹೇಗೆ ಒದಗಿಸಬಹುದು? ಅವರ ಪರಿಸ್ಥಿತಿ ಹೇಗೆ ಸುಧಾರಿಸಬಹುದು? ಎಂಬೆಲ್ಲ ವಿಷಯಗಳ ಬಗ್ಗೆ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಬಹುದು.
ಯಾರೂ ವಿರೋಧಿಸಲ್ಲ: ವಿದೇಶಿ ಪ್ರವಾಸಕ್ಕಿಂತ ಬೈನಾಕ್ಕೆ ಹೋಗಿ ಕನ್ನಡಿಗರೊಂದಿಗೆ ಇದ್ದು, ಅಧ್ಯಯನ ನಡೆಸಲು ಯಾರದ್ದೂ ವಿರೋಧ ವ್ಯಕ್ತವಾಗಲಿಕ್ಕಿಲ್ಲ. ತಡವೇಕೆ ಸಿದ್ದರಾಮಯ್ಯ ಅವರೇ ಶಾಸಕರ ತಂಡವೊಂದನ್ನು ಕಳುಹಿಸಿ. ಬೈನಾ ನಿಯೋಗಕ್ಕೆ ಭರವಸೆ ಕೊಟ್ಟಂತೆ ಬೈನಾ ಕನ್ನಡಿಗರ ಸಮಸ್ಯೆ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆಯುವುದಕ್ಕಿಂತ ಇದು ಅತ್ಯುತ್ತಮ ಕ್ರಮವಾಗಿದೆ.
-ವಸಂತಕುಮಾರ್ ಕತಗಾಲ