ಹುದ್ದೆ ಗಲಾಟೆ: ಅರಣ್ಯ ಇಲಾಖೆಗೆ ಆಂತರಿಕ ಬೇಗುದಿ
ಬೆಂಗಳೂರು: ಕಾಳ್ಗಿಚ್ಚಿನ ಕಷ್ಟಕ್ಕೀಡಾಗಿದ್ದ ಅರಣ್ಯ ಇಲಾಖೆಯಲ್ಲಿ ಈಗ ಅಂತರಿಕ ಬೇಗುದಿ ಬೆಂಕಿ ಕಾಣಿಸಿಕೊಂಡಿದೆ.
ಹುದ್ದೆಗಳ ಸ್ಥಾನ ಪಲ್ಲಟ ಮತ್ತು ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ನಡುವೆ ಕಚ್ಚಾಟ ಶುರುವಾಗಿದೆ. ಇದರೊಂದಿಗೆ ಇಷ್ಟು ದಿನ ಆಂತರಿಕವಾಗಿ ಹೊಗೆಯಾಡುತ್ತಿದ್ದ ಹಿರಿಯ ಅಧಿಕಾರಿಗಳ ಸಮರ ತೀವ್ರವಾಗಿದ್ದು, ಇಲಾಖೆ ಒಳಗಿನ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿದೆ.
ಪ್ರಸ್ತುತ ಸವಾಲುಗಳಿಗೆ ಇಲಾಖೆಯನ್ನು ಬಲಪಡಿಸಿ ಸಜ್ಜುಗೊಳಿಸಲು ಇಡೀ ಇಲಾಖೆಯ ಹುದ್ದೆಗಳನ್ನು ಪುನಾರಾಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಇದರ ಪ್ರಥಮ ಹಂತವಾಗಿ ಅರಣ್ಯ ಸೇವೆಗೆಂದೇ ಇರುವ ಐಎಫ್ಎಸ್ ಅಧಿಕಾರಿಗಳನ್ನು ವಿವಿಧ ವಿಭಾಗಗಳಿಗೆ ನಿಯೋಜಿಸುವ ಚಿಂತನೆ ನಡೆದಿದೆ. ಆ ಮೂಲಕ ರಾಜ್ಯ ಸೇವೆಯ ಅರಣ್ಯಾಧಿಕಾರಿಗಳನ್ನು ತೆಗೆದು ಆ ಜಾಗಕ್ಕೆ ಕಾನೂನು ಬದ್ಧವಾಗಿ ಐಎಫ್ಎಸ್ ಅಧಿಕಾರಿಗಳನ್ನು ನೇಮಿಸುವ ತೀರ್ಮಾನವಾಗಿದೆ. ಇದಕ್ಕಾಗಿಯೇ ಅನೇಕ ಹುದ್ದೆಗಳನ್ನು ಮೇಲ್ದರ್ಜೆಗೇರಿಸಲೂ ನಿರ್ಧರಿಸಲಾಗಿದೆ. ಆದರೆ ಇದಕ್ಕೆ ರಾಜ್ಯ ಸೇವೆ ಅರಣಾಧಿಕಾರಿಗಳು ತೀವ್ರ ವಿರೋಧವಿದೆ.
ಏಕೆಂದರೆ, ರಾಜ್ಯ ಸೇವೆ ಅರಣ್ಯಾಧಿಕಾರಗಳು ಈಗಾಗಲೇ ಆಯಕಟ್ಟಿನ ಹುದ್ದೆಗಳಲ್ಲಿದ್ದಾರೆ. ಅವರೀಗ ತಮ್ಮ ಸ್ಥಾನಗಳನ್ನು ಐಎಫ್ಎಸ್ ಅಧಿಕಾರಿಗಳಿಗೆ ಬಿಟ್ಟುಕೊಡಲು ತಯಾರಿಲ್ಲ. ಹೀಗಾಗಿ ಅವರು ಸರ್ಕಾರದ ಪುನಾರಚನಾ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ಅಂತರಿಕ ಬೇಗುದಿ?: ಇಲಾಖೆಯಲ್ಲಿರುವ ಅನೇಕ ಪ್ರಮುಖ ಹುದ್ದೆಗಳಲ್ಲಿ ಐಎಫ್ಎಸ್ ಅಧಿಕಾರಿಗಳು ಇರಬೇಕಿತ್ತು. ಆದರೆ ಸರ್ಕಾರ ಅವರನ್ನು ವಿವಿಧ ಇಲಾಖೆಗಳಿಗೆ ವರ್ಗಾಯಿಸುತ್ತಾ ಬಂದಿದ್ದರಿಂದ ಆ ಹುದ್ದೆಗಳು ರಾಜ್ಯ ಸೇವೆ ಅರಣ್ಯಾಧಿಕಾರಿಗಳ ಪಾಲಾಗಿವೆ. ಆದರೆ ನಿಯಮದಂತೆ ಅರಣ್ಯ ಇಲಾಖೆಯ ಬಹುತೇಕ ಪ್ರಮುಖ ಹುದ್ದೆಗಳಲ್ಲಿ ಐಎಫ್ಎಸ್ ಅಧಿಕಾರಿಗಳಿರಬೇಕಿದ್ದರಿಂದ ಸರ್ಕಾರ ಇಲಾಖೆ ಅಧಿಕಾರಿಗಳ ಪುನಾರಚನೆಗೆ ಕೈ ಹಾಕಿದೆ. ಪುನಾರಚನೆ ಪ್ರಸ್ತಾಪದ ಪ್ರಕಾರ, ಸದ್ಯ ಅಸ್ತಿತ್ವದಲ್ಲಿರುವ 4 (ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ) ಹುದ್ದೆಗಳ ಜತೆಗೆ ಹೆಚ್ಚುವರಿ 7 ಪಿಸಿಸಿಎಫ್ ಹುದ್ದೆಗಳನ್ನು ರಚಿಸಲಾಗುತ್ತಿದೆ. ಈಗಿರುವ ಆಡಳಿತ, ವನ್ಯಜೀವಿ ಹಾಗೂ ನಿಗಮಗಳ ಪಿಸಿಸಿಎಫ್ ಹುದ್ದೆಗಳ ಜತೆಗೆ ಆಡಳಿತ, ಸಂರಕ್ಷಣೆ, ಸಂರಕ್ಷಣೆ, ಸಂಪನ್ಮೂಲ, ಅಭಿವೃದ್ಧಿ, ಜಂಗಲ್ಲಾಡ್ಜಸ್ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರತ್ಯೇಕ ಪಿಸಿಸಿಎಫ್ಗಳನ್ನು ನೇಮಿಸಲಾಗುತ್ತದೆ.
ಅಂದರೆ ಇರುವ ಎಪಿಸಿಸಿಎಫ್ಗಳನ್ನೇ ಮೇಲ್ದರ್ಜೆಗೇರಿಸಿ, ಅವರನ್ನು ಪಿಸಿಸಿಎಫ್ಗಳನ್ನಾಗಿ ಮಾಡಲಾಗುತ್ತದೆ. ಆ ಮೂಲಕ ಯುವ ಅಧಿಕಾರಿಗಳನ್ನು ಕಾಡಿನ ಕಾರ್ಯಾಚರಣೆಗೆ ಇಳಿಯುವಂತೆ ಮಾಡಲಾಗುತ್ತದೆ. ಇದಲ್ಲದೆ, ಮುಖ್ಯ ಅರಣ್ಯಾಧಿಕಾರಿಗಳ (ಸಿಎಫ್ಒ) ಹುದ್ದೆಗಳನ್ನೂ ಮೇಲ್ದರ್ಜೆಗೇರಿಸಿ ಅವುಗಳನ್ನು ವಿಭಾಗೀಯ ಮುಖ್ಯ ಅರಣಾಧಿಕಾರಿಗಳನ್ನಾಗಿ(ಡಿಸಿಎಫ್ಒ) ಮಾಡಲಾಗುತ್ತಿದೆ.
ಈ ಮೂಲಕ ಪ್ರತಿ ವಿಭಾಗಗಳಿಗೂ ಪ್ರತ್ಯೇಕ ಡಿಸಿಎಫ್ಒಗಳನ್ನು ನೇಮಿಸಿ ಅಲ್ಲಿ ನಿಯಮದಂತೆ ಐಎಫ್ಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
ಹೈಕೋರ್ಟ್ ಆದೇಶವಿದೆ: ಹಾಗೆ ನೋಡಿದರೆ, ಇಲಾಖೆ ಅಧಿಕಾರಿ ವ್ಯವಸ್ಥೆ ಪುನಾರಚನೆ ಅನಿವಾರ್ಯ. ಏಕೆಂದರೆ, ಅರಣ್ಯ ಸೇವೆಗೆಂದೇ ಇರುವ ಐಎಫ್ಎಸ್ ಅಧಿಕಾರಿಗಳನ್ನು ಅರಣ್ಯ ಇಲಾಖೆಗೇ ಬಳಸಿಕೊಳ್ಳಬೇಕು. ಈ ಬಗ್ಗೆ 2013ರಲ್ಲಿ ಕೇಂದ್ರ ಆಡಳಿತ ನ್ಯಾಯಮಂಡಳಿ ಸ್ಪಷ್ಟ ಆದೇಶ ನೀಡಿದೆ.
ಅಂದರೆ, ಸರ್ಕಾರ ಅರಣ್ಯ ಸೇವೆಯಲ್ಲಿರುವ ಐಎಫ್ಎಸ್ ಕೇಡರ್ ಹುದ್ದೆಗಳಿಗೆ ಅದೇ ಅಧಿಕಾರಿಗಳನ್ನು ನಿಯೋಜಿಸಬೇಕು. ಒಂದುವೇಳೆ ಐಎಫ್ಎಸ್ ಅಧಿಕಾರಿ ಕೊರತೆ ಇದ್ದರೆ, ರಾಜ್ಯ ಸೇವೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ನಿಯೋಜಸಬಹುದು. ಅದೂ ಕೇವಲ 6 ತಿಂಗಳ ಅವಧಿಗೆ ಮಾತ್ರ ಎಂದು ಸ್ಪಷ್ಟವಾಗಿ ಹೇಳಿತ್ತು. ಇದನ್ನೇ ಹೈಕೋರ್ಟ್ ಕೂಡ ಹೇಳಿತ್ತು.
ಏನೆಲ್ಲಾ ಬದಲಾವಣೆ ?
ಇಲಾಖೆಯಲ್ಲಿ ಒಟ್ಟಾರೆ 149 ಐಪಿಎಸ್ ಹುದ್ದೆಗಳಿದ್ದು, ಅದರಲ್ಲಿ 100 ಹುದ್ದೆಗಳಿಗಷ್ಟೇ ಐಎಫ್ಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇನ್ನುಳಿದ 49 ಹುದ್ದೆಗಳಲ್ಲಿ ಇರಬೇಕಾದ ಐಎಫ್ಎಸ್ ಅಧಿಕಾರಿಗಳು ಬೇರೆ ಇಲಾಖೆಗಳ ಸೇವೆಗೆ ನಿಯೋಜನೆಯಾಗಿದ್ದಾರೆ. ಅಂಥವರನ್ನು ವಾಪಸ್ ಕರೆತಂದು ಅರಣ್ಯ ಇಲಾಖೆಗೆ ನಿಯೋಜಿಸಲಾಗುತ್ತಿದೆ. ಇಲಾಖೆಯಲ್ಲಿ 50ಕ್ಕೂ ಹೆಚ್ಚಾಗಿರುವ ಡಿಸಿಎಫ್ಒ ಹುದ್ದೆಗಳ ಪೈಕಿ 22 ಹುದ್ದೆಗಳಲ್ಲಿ ಐಎಫ್ಎಸ್ ಬದಲು ರಾಜ್ಯ ಸೇವೆ ಅಧಿಕಾರಿಗಳಿದ್ದಾರೆ. ಈ ದೋಷವನ್ನು ನಿವಾರಿಸಲು ಸದ್ಯಕ್ಕೆ 15 ಡಿಸಿಎಫ್ಒ ಹುದ್ದೆಗಳಿಗೆ ಐಎಫ್ಎಸ್ ಅಧಿಕಾರಿ ನಿಯೋಜಿಸಲು ಇಲಾಖೆ ತೀರ್ಮಾನಿಸಿದೆ.
-ಶಿವಕುಮಾರ್ ಬೆಳ್ಳಿತಟ್ಟೆ