ನ್ಯಾಯಾಂಗ ನೇಮಕಕ್ಕೆ ರಾಜಕೀಯ ಹಸ್ತಕ್ಷೇಪ, ಇಲ್ಲೂ ನಡೆಯುತ್ತಿದೆ ಭಾರಿ ಭ್ರಷ್ಟಾಚಾರ
ನವದೆಹಲಿ/ಚೆನ್ನೈ: ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರ ಬಗ್ಗೆ ಮತ್ತೆ ವಿವಾದ ಎದ್ದಿದೆ. ಕಳಂಕ ಆರೋಪ ಹೊತ್ತಿದ್ದ ಮದ್ರಾಸ್ ಹೈಕೋರ್ಟ್ನ ಹೆಚ್ಚುವರಿ ಜಡ್ಜ್ ಒಬ್ಬರ ಅಧಿಕಾರಾವಧಿ ವಿಸ್ತರಣೆಯಲ್ಲಿ ಸುಪ್ರೀಂಕೋರ್ಟ್ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಭಾಗಿಯಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ನ್ಯಾಯಮೂರ್ತಿಗಳು ಬಲಿಯಾಗಿದ್ದಾರೆ ಎಂದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ. ಮಾರ್ಕಂಡೇಯ ಕಾಟ್ಜು ಹೊಸ ಬಾಂಬ್ ಹಾಕಿದ್ದಾರೆ. ಈ ಆರೋಪ ದೆಹಲಿ ಮತ್ತು ತಮಿಳುನಾಡಿನ ರಾಜಕೀಯ ವಲಯದಲ್ಲಿ ಕೋಲಹಾಲ ತಂದಿದೆ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಗದ್ದಲಕ್ಕೂ ಕಾರಣವಾಗಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದವರು ರಾಜಕೀಯ ಪ್ರಭಾವದಿಂದ ಹೊರತಾಗಿರಬೇಕು. ಆದರೆ ಈ ಮೂವರು ನ್ಯಾಯಮೂರ್ತಿಗಳು ಅದಕ್ಕೆ ಹೊರತಾಗಿದ್ದಾರೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕೇಂದ್ರ ಸರ್ಕಾರದ ಪ್ರಭಾವಿ ಸಚಿವರು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಪ್ರಧಾನಿ ಅಮೆರಿಕಕ್ಕೆ ಹೊರಟ ಸಂದರ್ಭದಲ್ಲಿ ಭರವಸೆ ನೀಡಿದ್ದರು.
- ನ್ಯಾ.ಮಾರ್ಕಂಡೇಯ ಕಾಟ್ಜು
ಲೋಕಸಭೆ, ರಾಜ್ಯಸಭೆಯಲ್ಲಿ ಗದ್ದಲ
ನ್ಯಾ. ಕಾಟ್ಜು ಮಾಡಿದ ಆರೋಪ ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಲೋಕಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅಣ್ಣಾ ಡಿಎಂಕೆ ನಾಯಕ ಡಾ.ತಂಬಿದೊರೈ ಆರೋಪಗಳು ಗಂಭೀರ ಪ್ರಮಾಣದ್ದು. ಈ ಬಗ್ಗೆ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ನ್ಯಾಯಾಧೀಶರ ನೇಮಕಕ್ಕೆ ಡಿಎಂಕೆ ಒತ್ತಾಯಿಸಿತ್ತು. ಶೂನ್ಯ ವೇಳೆಯಲ್ಲಿ ಇಂಥ ವಿಚಾರಗಳ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದರು ಸ್ಪೀಕರ್ ಸುಮಿತ್ರಾ ಮಹಾಜನ್. ಆದಕ್ಕೆ ಸೊಪ್ಪು ಹಾಕದ ಅಣ್ಣಾ ಡಿಎಂಕೆ ಸದಸ್ಯರು ಗದ್ದಲ ಮಾಡಿ ತನಿಖೆಗೆ ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯರು ಕೂಡ ಅಣ್ಣಾ ಡಿಎಂಕೆ ಸದಸ್ಯರಿಗೆ ಪ್ರತಿಯಾಗಿ ಘೋಷಣೆ ಕೂಗಿ ಸುಪ್ರೀಂಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ವಿಚಾರ ಸದನದ ನಿಯಮದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದರು.
- ಲಾಬಿ ಮಾಡಿದ್ದು ಎಚ್.ಆರ್.ಭಾರದ್ವಾಜ್!
ಡಿಎಂಕೆ ಎಚ್ಚರಿಕೆ ಹಿನ್ನೆಲೆಯಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಆರ್.ಸಿ.ಲಹೋಟಿ ಬಳಿಗೆ ತೆರಳಿ ಹೆಚ್ಚುವರಿ ಜಡ್ಜ್ಗೆ ಹೆಚ್ಚಿನ ಅಧಿಕಾರದ ಅವಧಿ ವಿಸ್ತರಣೆಗಾಗಿ ಲಾಬಿ ಮಾಡಿದ್ದು ಕರ್ನಾಟಕದ ಮಾಜಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್! ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ ಅವರು ಡಿಎಂಕೆ ಒತ್ತಡ ಹೇರಿದ್ದು ಹೌದು. ಈ ಹಿನ್ನೆಲೆಯಲ್ಲಿ ಖುದ್ದಾಗಿ ತಾವೇ ನ್ಯಾ.ಲಹೋಟಿ ಬಳಿ ಚರ್ಚೆ ನಡೆಸಿದ್ದಾಗಿ ತಿಳಿಸಿದರು.
- ಅರ್ಧದಿಂದಲೇ ಎದ್ದು ಹೋದ ಕಾಟ್ಜು
ಆರೋಪಗಳ ಬಗ್ಗೆ ಚರ್ಚೆ ನಡೆಸಲು ಖಾಸಗಿ ಆಂಗ್ಲ ಸುದ್ದಿವಾಹಿನಿ ಎನ್ಡಿಟಿವಿಗೆ ನ್ಯಾ.ಕಾಟ್ಜು ಅವರನ್ನು ಆಹ್ವಾನಿಸಲಾಗಿತ್ತು. ಹತ್ತು ವರ್ಷಗಳ ಬಳಿಕ ಏಕಾಏಕಿ ಈ ಆರೋಪ ಮಾಡಲು ಕಾರಣವೇನು ಎಂದು ಅವರನ್ನು ಪ್ರಶ್ನಿಸಲಾಯಿತು. ಆದರೆ ಅವರು ಉತ್ತರಿಸದೆ 'ನಾನು ಈ ವಿಚಾರ ಬಹಿರಂಗ ಮಾಡಿದ್ದು ಸರಿಯೇ. ನೀವು ಹೇಳಿ' ಎಂದು ಮರು ಪ್ರಶ್ನೆ ಹಾಕಿದರು. ಇದಾದ ಬಳಿಕ ಅವರು ಟಿವಿ ಸ್ಟುಡಿಯೋದಿಂದ ಹೊರ ನಡೆದರು.
ವಿಚಾರದ ಬಗ್ಗೆ ನ್ಯಾ.ಕಾಟ್ಜುಗೆ ಕಾಳಜಿ ಇದ್ದಿದ್ದರೆ 10 ವರ್ಷಗಳ ಹಿಂದೆಯೇ ಪ್ರತಿಭಟನೆ ಸಲ್ಲಿಸುತ್ತಿದ್ದರು. ವಿಳಂಬವಾಗಿ ಪ್ರಸ್ತಾಪಿಸುತ್ತಿದ್ದಾರೆ.
- ಎಂ.ವೀರಪ್ಪ ಮೊಯ್ಲಿ, ಕಾನೂನು ಖಾತೆ ಮಾಜಿ ಸಚಿವ
ನನ್ನ ಜೀವನದಲ್ಲಿ ಯಾವುದೇ ತಪ್ಪುಗಳನ್ನು ಮಾಡಿಲ್ಲ. ಎಲ್ಲ ವಿಚಾರಗಳೂ ದಾಖಲೆಗಳಲ್ಲಿವೆ.
- ನ್ಯಾ.ಆರ್.ಸಿ.ಲಹೋಟಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಸರ್ಕಾರ ಉಳಿಸಲು ಲಾಬಿ, ನ್ಯಾ.ಕಾಟ್ಜು ಆರೋಪ
- ಭ್ರಷ್ಟಾಚಾರದ ಆರೋಪ ಹೊತ್ತಿರುವ ಜಿಲ್ಲಾ ನ್ಯಾಯಾಧೀಶರೊಬ್ಬರ ಪರವಾಗಿ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷ (ಡಿಎಂಕೆ) ಯುಪಿಎ ಸರ್ಕಾರದ ಜತೆ ಲಾಬಿ ನಡೆಸಿತ್ತು.
- ಅವರ ಅಧಿಕಾರದ ಅವಧಿ ಮುಂದುವರಿಸದಿದ್ದರೆ ಕೇಂದ್ರದಲ್ಲಿ ನೀಡಿದ್ದ ಬೆಂಬಲ ಹಿಂಪಡೆಯುವುದಾಗಿ ಅದು ಎಚ್ಚರಿಕೆ ನೀಡಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ತೆರಳುವ ವೇಳೆ ವಿಮಾನ ನಿಲ್ದಾಣಕ್ಕೆ ತೆರಳಿ ಗುಟ್ಟಾಗಿ ಅವರಿಗೆ ಎಚ್ಚರಿಕೆ ನೀಡಿದ್ದರು.
- ಹೆಚ್ಚುವರಿ ಜಡ್ಜ್ ಅವರ ಅಧಿಕಾರದ ಅವಧಿ ವಿಸ್ತರಣೆ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳಾದ ಆರ್.ಸಿ.ಲಹೋಟಿ, ವೈ.ಕೆ.ಸಭರ್ವಾಲ್ ಮತ್ತು ಕೆ.ಜಿ.ಬಾಲಕೃಷ್ಣನ್ ಕೇಂದ್ರದ ಒತ್ತಡಕ್ಕೆ ಮಣಿದಿದ್ದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದು ರಾಜಕೀಯದ ಒತ್ತಡಕ್ಕೆ ಅವರು ಮಣಿಯುತ್ತಾರೆ ಎನ್ನುವುದು ಸಾಬೀತಾಗಿದೆ.
- ಜಿಲ್ಲಾ ನ್ಯಾಯಾಧೀಶರಾಗಿದ್ದ ಅವರಿಗೆ ಪ್ರಮುಖ ಪಕ್ಷದ ಬೆಂಬಲ ಇತ್ತು. 2004ರ ನವೆಂಬರ್ನಲ್ಲಿ ನಾನು ಮದ್ರಾಸ್ ಹೈಕೋರ್ಟ್ಗೆ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿದ್ದೆ.
- ಕಳಂಕಿತ ಎಂಬ ಆರೋಪಕ್ಕೆ ಗುರಿಯಾಗಿರುವ ಜಿಲ್ಲಾ ನ್ಯಾಯಾಧೀಶರಾಗಿದ್ದವರನ್ನು ಹೆಚ್ಚುವರಿ ಜಡ್ಜ್ ಆಗಿ ನೇಮಿಸುವ ಬಗ್ಗೆ ಪ್ರಸ್ತಾಪ ಬಂದಿತ್ತು. ಈ ಸಂದರ್ಭದಲ್ಲೇ ಅವರ ವಿರುದ್ಧ ಇರುವ ಆರೋಪಗಳ ಬಗ್ಗೆ ನನಗೆ ವರದಿಗಳು ಸಿಕ್ಕಿದ್ದವು.
- ಆರೋಪಗಳ ಹಿನ್ನೆಲೆಯಲ್ಲಿ ಆ ಜಡ್ಜ್ ಬಗ್ಗೆ ಇಂಟೆಲಿಜೆನ್ಸ್ ಬ್ಯೂರೋ ಮೂಲಕ ತನಿಖೆ ನಡೆಸಿ ವರದಿ ತರಿಸಿಕೊಳ್ಳಿ ಎಂದು ಸಿಜೆಐಗೆ ಮನವಿ ಮಾಡಿಕೊಂಡೆ.
- ವರದಿಯಲ್ಲಿದ್ದ ಅಂಶವೂ, ಆರೋಪವೂ ಸರಿಯಾಗಿತ್ತು. ಅದರ ಹೊರತಾಗಿಯೂ ಆ ಜಡ್ಜ್ ಹೈಕೋರ್ಟ್ಗೆ ನೇಮಕವಾದರು. ಅಧಿಕಾರದ ಅವಧಿ ಮುಕ್ತಾಯವಾದ ಬಳಿಕ ಮತ್ತೊಮ್ಮೆ ಅವಧಿ ವಿಸ್ತರಣೆಯಾಯಿತು.
- ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಮಿತಿ (ಕೊಲಿಜಿಯಂ)ಯಲ್ಲಿ ಹೈಕೋರ್ಟ್ ನೇಮಕ ನೋಡಿಕೊಳ್ಳುವ ಹಿರಿಯ ನ್ಯಾಯಮೂರ್ತಿಗಳಿದ್ದರು. ಅವರೆಂದರೆ ನ್ಯಾ.ಆರ್.ಸಿ.ಲಹೋಟಿ, ನ್ಯಾ.ವೈ.ಕೆ.ಸಭರ್ವಾಲ್, ನ್ಯಾ.ರುಮಾ ಪಾಲ್.
- ಅವಧಿ ಮುಕ್ತಾಯದ ಬಳಿಕ ಮತ್ತೊಮ್ಮೆ ಅವರ ಅಧಿಕಾರದ ಅವಧಿ ವಿಸ್ತರಣೆ ಬಗ್ಗೆ ಹೆಸರು ಸುಪ್ರೀಂಕೋರ್ಟ್ ಸಮಿತಿಗೆ ಶಿಫಾರಸು ಮಾಡಲಾಯಿತು. ಆದರೆ ತಿರಸ್ಕರಿಸಿತ್ತು. ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅವರ ಹೆಸರು ಶಿಫಾರಸು ಮಾಡಲಾಯಿತು.
- ನ್ಯಾ.ಕೆ.ಜಿ.ಬಾಲಕೃಷ್ಣನ್ ಕಳಂಕಿತ ಜಡ್ಜ್ ಅವರನ್ನು ಹೈಕೋರ್ಟಿನ ಕಾಯಂ ಜಡ್ಜ್ ಆಗಿ ನೇಮಿಸಿ ಆದೇಶ ಹೊರಡಿಸಿದರು. ಆದರೆ ಅವರನ್ನು ಬೇರೊಂದು ಹೈಕೋರ್ಟ್ಗೆ ವರ್ಗಾಯಿಸಲಾಯಿತು.
- ಕಳಂಕದ ಆರೋಪ ಹೊತ್ತಿದ್ದ ಆ ಜಡ್ಜ್ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಡಿಎಂಕೆ ಪ್ರಮುಖ ನಾಯಕರೊಬ್ಬರಿಗೆ ಜಾಮೀನು ಕೊಟ್ಟಿದ್ದರು.
ಯಾವುದಾದರೂ ಒಂದು ಕಾರಣಕ್ಕೆ ನ್ಯಾ.ಕಾಟ್ಜು ಸುದ್ದಿಯಲ್ಲಿರಲು ಬಯಸುತ್ತಾರೆ. ಇಂಥ ಒಂದು ಗಂಭೀರ ಆರೋಪ ನಿಜವೇ ಆಗಿದ್ದಿದ್ದರೆ ಅವರು ಈ ಹಿಂದೆಯೇ ಈ ವಿಚಾರ ಬಹಿರಂಗೊಳಿಸುತ್ತಿದ್ದರು. ಈಗ ಯಾಕೆ ಅದರ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ?
- ರಶೀದ್ ಅಳ್ವಿ, ಕಾಂಗ್ರೆಸ್ ನಾಯಕ
ನ್ಯಾ.ಕಾಟ್ಜು ಮಾಡಿದ ಆರೋಪಗಳು ಗಂಭೀರವಾಗಿವೆ. ಅವುಗಳ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸುತ್ತೇನೆ. ಅವುಗಳಲ್ಲಿ ಸತ್ಯವಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
- ಮಾಯಾವತಿ, ಬಿಎಸ್ಪಿ ನಾಯಕಿ
ಅವರು ಏನು ಹೇಳಿದ್ದಾರೆಯೋ ಅದು ಸತ್ಯ. ಈ ವಿಚಾರ ನ್ಯಾಯಾಂಗಕ್ಕೆ ಸೇರಿದೆ. ವಿಳಂಬವಾಗಿಯಾದರೂ ಸತ್ಯ ಹೊರಗೆ ಬಂದಿದೆ.
- ಶರದ್ ಯಾದವ್, ಜೆಡಿಯು ನಾಯಕ
ನ್ಯಾಯಾಧೀಶರ ಹೆಸರು ಮತ್ತು ರಾಜಕೀಯ ಪಕ್ಷದ ಹೆಸರು ಪ್ರಸ್ತಾಪಿಸದೆ ಏನು ಬೇಕಾದರೂ ಹೇಳಬಹುದು. ಅವರ ನೇಮಕವನ್ನು ಪ್ರಶ್ನಿಸಲಾಗಿತ್ತು. ಈ ಬಗ್ಗೆ ನ್ಯಾ.ಅರಿಜಿತ್ ಪಸಾಯತ್ ನೀಡಿರುವ ತೀರ್ಪನ್ನು ಓದಿ ತಿಳಿಯಿರಿ. ಒಂದು ವೇಳೆ ನ್ಯಾಯಮೂರ್ತಿ ಸರ್ಕಾರಕ್ಕೆ ಹತ್ತಿರವಾಗಿದ್ದರೆ ಅವರನ್ನು ಕೂಡಲೇ ವರ್ಗಾಯಿಸಬೇಕು. ಆರೋಪಕ್ಕೆ ಒಳಗಾದ ಹೆಚ್ಚುವರಿ ಜಡ್ಜ್ ಅವರನ್ನು ಆಂಧ್ರಪ್ರದೇಶ ಹೈಕೋರ್ಟ್ಗೆ ವರ್ಗಾಯಿಸಲಾಯಿತು.
- ನ್ಯಾ.ಕೆ.ಜಿ.ಬಾಲಕೃಷ್ಣನ್,
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಈಗ ಏಕೆ ಅವರು ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ನ್ಯಾ.ಕಾಟ್ಜು ಏನು ಮಾಡುತ್ತಿದ್ದರು?. ನ್ಯಾಯಾಂಗದಲ್ಲಿನ ನೇಮಕ ವಿಚಾರಗಳ ಬಗ್ಗೆ ನಾವು ಹಿಂದಿನಿಂದಲೇ ರಾಷ್ಟ್ರೀಯ ನ್ಯಾಯಾಂಗ ಆಯೋಗ ರಚಿಸಬೇಕೆಂದು ಒತ್ತಾಯಿಸುತ್ತಿದ್ದೆವು.
- ಎ.ರಾಜ, ಡಿಎಂಕೆ ನಾಯಕ