ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೈರಪ್ಪನವರ ಹೊಸ 'ಯಾನ' ವಾರದಲ್ಲಿ ಕನ್ನಡಿಗರ ಕೈಗೆ ಲಭ್ಯ

ಎಸ್.ಎಲ್.ಭೈರಪ್ಪನವರ ಹೊಸ 'ಯಾನ'...

Vishwanath S
Updated On : 22 Jul 2014, 1:57 am

ಬೆಂಗಳೂರು: ಎಸ್.ಎಲ್.ಭೈರಪ್ಪನವರ ಹೊಸ 'ಯಾನ' ಯಶಸ್ವಿಯಾಗಿದ್ದು, ಇನ್ನೊಂದೇ ವಾರದಲ್ಲಿ ಅದರ ಅನುಭವ ಕನ್ನಡಿಗರಿಗೆ ಆಗಲಿದೆ.
ಕನ್ನಡ ಅಷ್ಟೇಕೆ, ಪಾಶ್ಚಾತ್ಯ ಸಾಹಿತ್ಯದಲ್ಲೂ ಇದುವರೆಗೆ ಯಾರೂ ಮುಟ್ಟಿರದ ಹೊಸ ವಸ್ತು ಭೈರಪ್ಪನವರ ಈ ಬಾರಿಯ ಕಾದಂಬರಿಯ ವಸ್ತು ಎಂಬುದು ವಿಶೇಷ. ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವೇ ಈ ಕಾದಂಬರಿಯ ವಸ್ತು.
ಕಾದಂಬರಿ ಮಾರುಕಟ್ಟೆಗೆ ಮಾಸಾಂತ್ಯ ಬರಲಿದೆ. ಪ್ರಕಟಣೆಗೆ ಮುನ್ನ ಯಾರಿಗೂ ಕೃತಿಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ಭೈರಪ್ಪನವರು 'ಕನ್ನಡಪ್ರಭ'ಕ್ಕೆ ಈ ಕುರಿತು ವಿಶೇಷ ಸಂದರ್ಶನ ನೀಡಿದ್ದಾರೆ.
'ಮಾನವ ತನ್ನ ಸಾಮಾಜಿಕ ಹಾಗೂ ನೈತಿಕ ನಿಯಮಗಳನ್ನು ಸೂರ್ಯನ ಬೆಳಕು, ಶಾಖಗಳನ್ನು ಅವಲಂಬಿಸಿ ರಚಿಸಿಕೊಂಡಿದ್ದಾನೆ. ಅವನ ಎಲ್ಲ ಮಿತಿಗಳೂ ಸೌರಮಂಡಲಕ್ಕೆ ಸೀಮಿತ. ಆದರೆ ಈ ಸೂರ್ಯಮಂಡಲದಿಂದ ಆಚೆಗೆ ಪ್ರಯಾಣ ಮಾಡುವಾಗ ಇದೇ ನೈತಿಕ ನಿಯಮಗಳನ್ನೇ ಆತ ಕಾಪಾಡಿಕೊಳ್ಳಲು ಸಾಧ್ಯವೇ? ಇಲ್ಲಿ ಅನ್ವಯಿಸುವ, ನೀತಿ, ಮೌಲ್ಯಗಳು ಸೌರಮಂಡಲದಾಚೆಗೂ ಅನ್ವಯವೇ? ಅಲ್ಲಿ ಆತ ಎದುರಿಸುವ ಸಮಸ್ಯೆಗಳೇನು? ಎಂಬ ಪ್ರಶ್ನೆಗಳಿಗೆ ಕಾದಂಬರಿ ಉತ್ತರಿಸುತ್ತದೆ.               
ವೈಜ್ಞಾನಿಕ ವಸ್ತುವನ್ನು ಹೊಂದಿದ್ದರೂ, ಇದು ಸಂಪೂರ್ಣ ವೈಜ್ಞಾನಿಕ ಕಾದಂಬರಿಯಲ್ಲ. ಇಲ್ಲಿ ಮನುಷ್ಯ ಸಂಬಂಧಗಳನ್ನು, ಆತನ ಪ್ರೀತಿ, ಪ್ರಣಯ, ನಿಷ್ಠೆ, ಪ್ರಾಮಾಣಿಕತೆ ಎಲ್ಲವನ್ನೂ ಪರೀಕ್ಷೆಗೊಡ್ಡಲಾಗಿದೆ' ಎನ್ನುತ್ತಾರೆ ಭೈರಪ್ಪ.
ಅವರದೇ ಮಾತುಗಳಲ್ಲಿ ಹೇಳುವುದಾದರೆ, ನಿರ್ದಿಷ್ಟ ಕೋರ್ಟ್ ವ್ಯಾಪ್ತಿಯಲ್ಲಿ ಮಾಡಿಕೊಳ್ಳುವ ಒಡಂಬಡಿಕೆ (ಅಗ್ರಿಮೆಂಟ್) ಮತ್ತೊಂದು ನ್ಯಾಯಾಲಯದ ಪರಿಧಿಯಲ್ಲಿ ಮೌಲ್ಯ ಕಳೆದುಕೊಳ್ಳುವಂತೆಯೇ, ಸೌರಮಂಡಲದ ವ್ಯಾಪ್ತಿಯಲ್ಲಿ ನಾವು ಮಾನವರು ವಿಧಿಸಿಕೊಳ್ಳುವ ನೀತಿ ನಿಯಮಾವಳಿ ಎಂಬುದನ್ನು ಸೌರಮಂಡಲದಾಚೆಗೆ ತಮ್ಮ ಮೌಲ್ಯವನ್ನು ಕಳೆದುಕೊಳ್ಳಬಹುದೇ ಎಂಬ ಪ್ರಶ್ನೆಯನ್ನು ಕಾದಂಬರಿ ಚರ್ಚಿಸಿದೆ.  
ಇದೊಂದು ಗಂಭೀರ ಕಾದಂಬರಿ. ಇಲ್ಲಿ ಸ್ಪೇಸ್ ಟ್ರಾವೆಲ್, ಕಪ್ಪುಕುಳಿಗಳು, ವೈಜ್ಞಾನಿಕ ವಿವರಗಳಿವೆ. ಆದರೆ ಅವೆಲ್ಲವನ್ನೂ ಮನುಷ್ಯನ ಕತೆಯ ಮೂಲಕ ಹೇಳಲಾಗಿದೆ. ಕಪ್ಪುಕುಳಿಗಳ ಆಚೆಗೆ ಏನಿದೆ ಎಂಬುದಕ್ಕೆ ವಿಜ್ಞಾನ ಉತ್ತರಿಸಿಲ್ಲ. ಇದಕ್ಕೆ ತತ್ವಜ್ಞಾನದಲ್ಲಿ ಉತ್ತರ ಇದೆಯಾ ಕಂಡುಕೊಳ್ಳಲು ಯತ್ನಿಸಿದ್ದೇನೆ ಎಂಬುದು ಅವರ ವಿವರಣೆ.
ತಮ್ಮ ಪ್ರತಿ ಕಾದಂಬರಿಗೂ ಮಾಡುವ ಗಂಭೀರ ಕ್ಷೇತ್ರಕಾರ್ಯಕ್ಕಾಗಿ ಹೆಸರಾದ ಭೈರಪ್ಪ, ಇದಕ್ಕೂ ಎರಡು ವರ್ಷಗಳ ಅಧ್ಯಯನ ಮಾಡಿದ್ದಾರೆ. ಎರಡು ವರ್ಷಗಳಿಂದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಆಹ್ವಾನಿತರಾಗಿದ್ದ ಭೈರಪ್ಪ, ಅಲ್ಲಿ ಕಳೆದ ವೇಳೆಯಲ್ಲಿ ವೈಜ್ಞಾನಿಕ ಪುಸ್ತಕಗಳನ್ನು ಓದಿದ್ದಾರೆ, ವಿಜ್ಞಾನಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ.
'ಸ್ಪೇಸ್ ಟ್ರಾವೆಲ್ ಕುರಿತು ನನಗೆ ಬಾಲ್ಯದಿಂದಲೂ ಆಸಕ್ತಿಯಿತ್ತು. ಚಂದ್ರನಲ್ಲಿ ಮಾನವ ಮೊದಲ ಬಾರಿಗೆ ಕಾಲಿಟ್ಟಾಗ ಅದು ಗರಿಗೆದರಿತು. ವಾಷಿಂಗ್ಟನ್‌ಗೆ ಪ್ರತಿ ಸಲ ಹೋದಾಗಲೂ ಅಲ್ಲಿನ ಸ್ಮಿತ್‌ಸೋನಿಯನ್ ಮ್ಯೂಸಿಯಂಗೆ ಭೇಟಿ ನೀಡುತ್ತೇನೆ. ಇಸ್ರೋ ಹಾಗೂ ಐಐಎಸ್‌ಸಿ ವಿಜ್ಞಾನಿಗಳ ಜತೆ ಮಾತನಾಡುತ್ತಾ ಕಾದಂಬರಿಯ ಥೀಮ್ ಸ್ಪಷ್ಟವಾಯ್ತು. ಅನಂತರ ಕೂತು ಬರೆದೆ. ವಿಜ್ಞಾನಿಗಳಿಗೆ ಕೊಟ್ಟು ತಿದ್ದಿಸಿದೆ' ಎನ್ನುತ್ತಾರೆ ಭೈರಪ್ಪ.
ಸುಮಾರು 210 ಪುಟಗಳ ಈ ಕೃತಿಗೆ ಶತಾವಧಾನಿ ಆರ್.ಗಣೇಶ್ 'ಯಾನ' ಎಂಬ ಶೀರ್ಷಿಕೆ ಸೂಚಿಸಿದ್ದಾರೆ. 'ಯಾನ' ಅಂದರೆ ಬಾಹ್ಯಾಕಾಶ ಪ್ರಯಾಣ ಎಂಬ ಅರ್ಥ ಮಾತ್ರವಲ್ಲ. ಸೂರ್ಯನ ಸುತ್ತಲಿನ ಭೂಮಿಯ ಭೌತಿಕ ಯಾನ, ಮಾನವನ ಜೀವನ ಯಾನ, ನೈತಿಕ ಯಾನ ಇತ್ಯಾದಿ ಅರ್ಥಗಳನ್ನು ಹೆಸರು ಸೂಚಿಸುತ್ತದೆ. ಇದುವರೆಗೆ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಸಂಗೀತ ವಿಚಾರಗಳನ್ನು ಕಾದಂಬರಿಗಳಲ್ಲಿ ತಂದಿದ್ದ ಭೈರಪ್ಪನವರಿಗೂ ಇದು ಹೊಸ 'ಯಾನ'ವಾಗಿದೆ. ಕತೆ ಎನ್ನುವುದು ವೈಜ್ಞಾನಿಕ ಅಥವಾ ತತ್ವಜ್ಞಾನ ಆಧಾರಿತ ವಿಷಯಕ್ಕೆ ಸೀಮಿತ ಆಗಿರಲು ಸಾಧ್ಯವಿಲ್ಲ. ಅದರಿಂದ ಹೊರತಾದ ಮನುಷ್ಯನ ಸಮಸ್ಯೆಗಳೇ ವಸ್ತುವಾದಾಗ ಮಾತ್ರ ಜನರನ್ನು ತಲುಪಲು ಸಾಧ್ಯ. ಹೀಗಾಗಿ ಸಾಮಾನ್ಯ ಜೀವನದ ಭಾಗವಾಗಿರುವ ಪ್ರೀತಿ, ಪ್ರಣಯದ ಜೊತೆಯಲ್ಲಿ ಅದಕ್ಕೆ ಸಂಬಂಧಿಸಿದ ನಿಷ್ಠೆ, ಬದ್ಧತೆ ಹಾಗೂ ಪ್ರಾಮಾಣಿಕತೆಯ ಅಗತ್ಯವನ್ನು ಚರ್ಚಿಸಿರುವುದಾಗಿ ಭೈರಪ್ಪ ಹೇಳುತ್ತಾರೆ. ಒಂದೆಡೆ ಜೀವನ ಮೌಲ್ಯಗಳು, ವಿಜ್ಞಾನ, ತತ್ವಜ್ಞಾನ ಹಾಗೂ ಕತೆ ಈ ಎಲ್ಲವೂ ಕಾದಂಬರಿಯಲ್ಲಿ ಒಟ್ಟೊಟ್ಟಿಗೇ ಸಾಗುತ್ತವೆ. ಕತೆ ಸುಲಭದಲ್ಲಿ ಓದಿಸಿಕೊಂಡು ಹೋಗುವ ಜತೆಗೆ ಗಂಭೀರ ವಿಷಯಗಳ ಕಡೆಗೆ ಓದುಗರನ್ನು ಸೆಳೆಯುವಂತೆಯೂ ಮಾಡಿರುವುದು ಹೊಸ ಕಾದಂಬರಿಯ ವೈಶಿಷ್ಟ್ಯ.   
ಮನುಷ್ಯ ಈ ಭೂಮಿಯಲ್ಲಿ ಅಜ್ಞಾತ ಶಕ್ತಿಯೊಂದರಿಂದ ನಿಯಂತ್ರಣಕ್ಕೊಳಪಟ್ಟಿದ್ದಾನೆ. ಸೌರಮಂಡಲದ ವಿಚಾರಕ್ಕೆ ಬಂದಾಗ ಅದನ್ನು ಗ್ರಾವಿಟೇಶನ್ ಎನ್ನಬಹುದು. ಇದರಿಂದಾಗುವ ಗಂಭೀರ ಪರಿಣಾಮ ಕಾದಂಬರಿಯ ಮೂಲ ಸ್ರೋತ. ಹಾಗೆಂದು ಇದು ವಿಜ್ಞಾನಾಧಾರಿತ ಕಾದಂಬರಿಯಾಗಿದ್ದರೂ ಫಿಕ್ಷನ್ ಅಲ್ಲ. ಮಾನವನ ಮನಸ್ಸಿನೊಳಗಿನ ಭಾವನೆಗಳ ಒಳತೋಟಿಯನ್ನು ಚರ್ಚಿಸುತ್ತದೆ ಅಲ್ಲದೆ ಹಲವು ಜಿಜ್ಞಾಸೆಗಳಿಗೆ ತೆರೆದುಕೊಳ್ಳುತ್ತದೆ. ಅವರ ಕಳೆದೆರಡು ಕಾದಂಬರಿಗಳಿಗೆ ಹೋಲಿಸಿದರೆ ಇದರಲ್ಲಿ ಅಂಥ ವಿವಾದಿತ ಅಂಶಗಳು ಇಲ್ಲ. ಆದರೆ ವಿವಾದಕ್ಕೆ ಯಾವುದೇ ವಿಷಯ ಹೊರತಲ್ಲ ಎನ್ನುತ್ತಾರೆ ಭೈರಪ್ಪ.



-ರಾಧಾಕೃಷ್ಣ ಎಸ್. ಭಡ್ತಿ/ ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement