ಕನ್ನಡಕ್ಕೆ ಈ ಬಾರಿಯೂ ತಾರತಮ್ಯ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕೇಂದ್ರದಲ್ಲಿ ಯುಪಿಎ ಸರ್ಕಾರ ಇರಲಿ, ಎನ್‌ಡಿಎ ಸರ್ಕಾರವೇ ಇರಲಿ, ಕರ್ನಾಟಕದ ಬಗ್ಗೆ ತಾರತಮ್ಯ ಧೋರಣೆ ಮಾತ್ರ ನಿಲ್ಲುವುದಿಲ್ಲ.
ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಣೆ ಮಾಡಲು ಸಾಕಷ್ಟು ವಿಳಂಬ ಮಾಡಿದ ಕೇಂದ್ರ ಸರ್ಕಾರ ಅನುದಾನ ನೀಡಿಕೆಯಲ್ಲೂ ಭೇದ ನೀತಿ ಅನುಸರಿಸುತ್ತಿವೆ. ಮೂರು ವರ್ಷಗಳಲ್ಲಿ ಕನ್ನಡಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೀಡಿರುವ ಅನುದಾನ 4.93 ಕೋಟಿ. ಇದೇ ಅವಧಿಯಲ್ಲಿ ತಮಿಳುನಾಡಿಗೆ ರು. 25.44 ಕೋಟಿ ಒದಗಿಸಲಾಗಿದೆ. ಇದು ಯುಪಿಎ ಸರ್ಕಾರದಲ್ಲಿ ಆದ ಅನ್ಯಾಯ.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾದರೂ ಇಂಥ ತಾರತಮ್ಯ ನಿಲ್ಲಬಹುದೆಂದು ನಿರೀಕ್ಷಿಸಿದ್ದರೆ ಅದು ತಪ್ಪು. ಪ್ರಸಕ್ತ ಸಾಲಿನಲ್ಲಿ ಕನ್ನಡಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಒದಗಿಸಿರುವ ಅನುದಾನ ಕೇವಲ 1 ಕೋಟಿ. ತಮಿಳುನಾಡಿಗೆ ಈ ಸಾಲಿನಲ್ಲಿ ರು. 10 ಕೋಟಿ ಒದಗಿಸಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 49 ಲಕ್ಷ ಮತ್ತು ತಮಿಳುನಾಡಿಗೆ ರು. 3 ಕೋಟಿ ಬಿಡುಗಡೆ ಮಾಡಲಾಗಿದೆ.
ತುಮಕೂರು ಲೋಕಸಭಾ ಸದಸ್ಯ ಮುದ್ದಹನುಮೇಗೌಡ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಈ ಮಾಹಿತಿ ನೀಡಿದ್ದಾರೆ.
2011-12ರಲ್ಲಿ ರು. 54.54 ಲಕ್ಷ, 2012-13 ಮತ್ತು 2013-14ರಲ್ಲಿ ತಲಾ ರು. 2.18 ಕೋಟಿ ಕರ್ನಾಟಕಕ್ಕೆ ಬಿಡುಗಡೆ ಮಾಡಲಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡಿಗೆ ಕ್ರಮವಾಗಿ, 10 ಕೋಟಿ, 6.40 ಕೋಟಿ ಹಾಗೂ 9 ಕೋಟಿ ಬಿಡುಗಡೆ ಮಾಡಲಾಗಿದೆ.
25.44 ಕೋಟಿ
ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ತಮಿಳು ಭಾಷೆಗೆ ನೀಡಿರುವ ಅನುದಾನ.
4.93 ಕೋಟಿ
ಕಳೆದ ಮೂರು ವರ್ಷಗಳಲ್ಲಿ ಕನ್ನಡಕ್ಕಾಗಿ ನೀಡಿರುವ ಅನುದಾನ.
49 ಲಕ್ಷ
ಈ ಸಾಲಿನಲ್ಲಿ ಈವರೆಗೆ ರಾಜ್ಯಕ್ಕೆ ಬಿಡುಗಡೆಯಾಗಿರುವ ಹಣ.
3 ಕೋಟಿ
ಈ ಸಾಲಿನಲ್ಲಿ ಈವರೆಗೆ ತಮಿಳುನಾಡಿಗೆ ಬಿಡುಗಡೆಯಾಗಿರುವ ಹಣ