ಕಳಪೆ ಕಾಮಗಾರಿ, ಓಬಿರಾಯನ ಕಾಲದ ವಿನ್ಯಾಸ, ದುಂದುವೆಚ್ಚ
ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಬೇಕಾದ ಗುಣಮಟ್ಟ ...
- ಮಲೆನಾಡು, ಬಯಲುಸೀಮೆ ರಸ್ತೆಗಳಿಗೆ ಒಂದೇ ರೀತಿಯ ವಿನ್ಯಾಸ | ಗುಣಮಟ್ಟ ವಿಭಾಗಕ್ಕೆ ಕೆಲಸವೇ ಇಲ್ಲ
ವಿಧಾನಸಭೆ: ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರೀಕ್ಷಿಸಬೇಕಾದ ಗುಣಮಟ್ಟ ವಿಭಾಗಕ್ಕೇ ಕೆಲಸ ಇಲ್ಲ. ಕಳಪೆ ಮಟ್ಟದ ಕೆಲಸಗಳಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ವಾಸ್ತುಶಿಲ್ಪ ವಿಭಾಗವಂತೂ ಓಬಿರಾಯನ ಕಾಲದ ವಿನ್ಯಾಸಕ್ಕೇ ಅಂಟಿಕೊಂಡು ದುಂದುವೆಚ್ಚ ಮಾಡುತ್ತಿದೆ. ರಸ್ತೆ ಕಾಮಗಾರಿಗಳು ನಿರ್ದಿಷ್ಟ ಸಮಯದಲ್ಲಿ ನಡೆಯುತ್ತಿಲ್ಲ. ಮಲೆನಾಡು, ಬಯಲುಸೀಮೆಗೆ ಒಂದೇ ರೀತಿಯ ರಸ್ತೆ ವಿನ್ಯಾಸ ಮಾಡಲಾಗುತ್ತಿದೆ...
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಲೋಕೋಪಯೋಗಿ ಇಲಾಖೆಯ ನ್ಯೂನತೆಗಳನ್ನು ವಿಧಾನಸಭೆಯಲ್ಲಿ ತೆರೆದಿಟ್ಟದ್ದು ಹೀಗೆ. ಇಲಾಖೆ ಬೇಡಿಕೆ ಮೇಲಿನ ಚರ್ಚೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಯನ್ನು ಶೆಟ್ಟರ್ ಅವರು ಬುಧವಾರ ಟೀಕಿಸಿದರು.
ಉತ್ತಮ ರಸ್ತೆಗಳು ರಾಜ್ಯಕ್ಕೆ ಭೂಷಣ. ನಮ್ಮ ರಸ್ತೆಗಳು ಸುಂದರವಾಗಿದ್ದರೆ, ಗುಣಮಟ್ಟದ್ದಾಗಿದ್ದರೆ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ಆದರೆ, ಈ ಸರ್ಕಾರ ಕಳೆದ ಒಂದು ವರ್ಷದಿಂದ ರಸ್ತೆ ಅಭಿವೃದ್ಧಿಯ ಒಂದೇ ಒಂದು ಯೋಜನೆಯನ್ನೂ ತಂದಿಲ್ಲ. ಮಲೆನಾಡು ಪ್ರದೇಶಗಳಿಗೂ ಒಂದೇ ವಿನ್ಯಾಸ, ಬಯಲುಸೀಮೆಗೂ ಒಂದೇ ವಿನ್ಯಾಸ. ರಸ್ತೆಯ ಗುಣಮಟ್ಟ ಆಯಾ ಪ್ರದೇಶಗಳ ವಾತಾವರಣಕ್ಕೆ ಅನುಗುಣವಾಗಿರಬೇಕು. ಆದರೆ ವಾಸ್ತುಶಿಲ್ಪವಿಭಾಗ ಇಂತಹ ಕೆಲಸ ನಿರ್ವಹಿಸುತ್ತಿಲ್ಲ ಎಂದರು.
ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಸೇರಿದಂತೆ ರಾಜ್ಯದಲ್ಲಿರುವ ಬಹುತೇಕ ಸರ್ಕಿಟ್ ಹೌಸ್, ಐಬಿ, ಟಿಬಿಗಳಲ್ಲಿ ರೂಮಿಗಿಂತ ದೊಡ್ಡ ಬಾತ್ರೂಮ್ಗಳಿವೆ, ನಾಲ್ಕು ರೂಂಗಳಾಗುವಷ್ಟು ಒಂದು ಕೊಠಡಿ ಇರುತ್ತದೆ. ಇಲ್ಲಿ ಇರಲು ಜನರು ಭಯಪಡುವಂತಹ ವಾತಾವರಣ ಇದೆ. ಹುಬ್ಬಳ್ಳಿಯಲ್ಲಿ ನ್ಯಾಯಾಧೀಶರಿಗಾಗಿ ವಸತಿ ಸಂಕೀರ್ಣ ಕಟ್ಟಿದ್ದು, ಅತ್ಯಂತ ದೊಡ್ಡದಾಗಿದೆ. ಅಲ್ಲಿ ಅವರು ಇರಲು ಭಯಪಡುತ್ತಿದ್ದಾರೆ. ಹೀಗಾಗಿ, ವಿನ್ಯಾಸಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕು. ಸರ್ಕಾರಿ ಜಾಗವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಣ್ಣ ಕೆಲಸಗಳಿಗೂ ಕೋಟಿ: ನವೀಕರಣದ ವೆಚ್ಚದಲ್ಲಿ ಹೊಸ ಕಟ್ಟಡವನ್ನೇ ಕಟ್ಟಬಹುದಾಗಿದೆ. ಸುಣ್ಣ-ಬಣ್ಣ ಸೇರಿದಂತೆ ಕೆಲವು ಸಣ್ಣ ಕೆಲಸಗಳಿಗೂ ಕೋಟಿಗಟ್ಟಲೆ ಕೋಟ್ ಮಾಡುತ್ತಾರೆ. ನಿಮ್ಮ (ಲೋಕೋಪಯೋಗಿ ಸಚಿವ ಮಹದೇವಪ್ಪ) ಮನೆಯನ್ನು ನವೀಕರಿಸಲು ಕೋಟ್ಯಂತರ ವೆಚ್ಚ ಮಾಡಿದ್ದಾರೆ. ಇದೆಲ್ಲ ಸರಿ ಇಲ್ಲ. ಅಲ್ಲದೆ, ಕಟ್ಟಡ ನಿರ್ವಹಣೆ ಹಾಗೂ ನಿರ್ಮಾಣದಲ್ಲಿ ರಾಷ್ಟ್ರೀಯ ಕಟ್ಟಡ ಕೋಡ್ ಅನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳು ಅನುಸರಿಸುತ್ತಿಲ್ಲ. ಗ್ರೀನ್ ಬಿಲ್ಡಿಂಗ್ ಎಂದರೆ ಪರಿಸರಸ್ನೇಹಿ ಎಂದರ್ಥ. ಆದರೆ ಇವರು ಹಸಿರು ಬಣ್ಣ ಬಳಿಯುವುದಷ್ಟೇ ಎಂದು ಭಾವಿಸಿದ್ದಾರೆ ಎಂದರು.
ಮಳೆ ಬಂದು ರಸ್ತೆ ಕಿತ್ತುಹೋಗಿದೆ, ಗುಂಡಿ ಬಿದ್ದಿದೆ ಎಂದು ಎಂಜಿನಿಯರ್ಗಳು ಸಬೂಬು ನೀಡುತ್ತಾರೆ. ಒಂದು ರಸ್ತೆ ನಿರ್ಮಾಣ ಮಾಡುವಾಗ ಆ ಪ್ರದೇಶದಲ್ಲಿ ವಾಡಿಕೆ ಮಳೆ ಎಷ್ಟು, ಎಷ್ಟು ವಾಹನಗಳು ಸಂಚರಿಸುತ್ತವೆ. ಬಾರಿ ವಾಹನಗಳೆಷ್ಟು ಎಂಬ ಲೆಕ್ಕಾಚಾರ ಮಾಡಿರುವುದಿಲ್ಲವೇ? ಕೇವಲ ದುಡ್ಡಿಗಾಗಿ ರಸ್ತೆ ನಿರ್ಮಾಣ ಮಾಡುತ್ತಾರೆ. ಗುಣಮಟ್ಟ ಇರುವುದೇ ಇಲ್ಲ ಎಂದು ಶೆಟ್ಟರ್ ಆರೋಪಿಸಿದರು.
ಟೋಲ್ ರಸ್ತೆ ಬಗ್ಗೆ ನಾಗರಿಕರಲ್ಲಿ ಸಾಕಷ್ಟು ಅಸಮಾಧಾನ ಇದೆ. ಸರ್ವಿಸ್ ರಸ್ತೆ ಇಲ್ಲದೆ ಟೋಲ್ ರಸ್ತೆ ನಿರ್ಮಾಣ ಆಗಲೇಬಾರದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಐಎಎಸ್ ಅಧಿಕಾರಿಗಳನ್ನೇ ನಿಮ್ಮ ಇಲಾಖೆ ಹೊಂದಿದೆ. ಅದರ ಬದಲು ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್ (ಐಇಎಸ್)ನವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳಿ. ಮಲೆನಾಡು, ಗುಡ್ಡಗಾಡು, ಕರಾವಳಿ ಎಂಬ ಪ್ರತ್ಯೇಕ ಘಟಕ ಮಾಡಿ, ಅಲ್ಲಿಗೆ ಮೂರು ಮುಖ್ಯ ಎಂಜಿನಿಯರ್ಗಳನ್ನು ಮಾಡಿ. ಅಲ್ಲಿನ ಹವಾಗುಣಕ್ಕೆ ಅನುಗುಣವಾಗಿ ರಸ್ತೆ ನಿರ್ಮಾಣ ಮಾಡುವ ಕೆಲಸವಾಗಲಿ ಎಂದು ಸಲಹೆ ನೀಡಿದರು.
ಪಿಪಿಪಿ ಮಾದರಿಯಲ್ಲಿ ಯಾರೂ ಕೆಲಸ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ಇಪಿಸಿ (ಸಾಂಪ್ರದಾಯಿಕ ಐಟಂ ದರ) ಗುತ್ತಿಗೆ ಮಾದರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತದೆ. ಟೋಲ್ ರಸ್ತೆಗಳ ಬಗ್ಗೆ ಇರುವ ಅಸಮಾಧಾನ ಹಾಗೂ ಅದನ್ನು ಕಡಿಮೆ ಮಾಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.