ಗುಡಸಲಿಗೆ ಬೆಂಕಿ: ವ್ಯಕ್ತಿ ಸಜೀವ ದಹನ
ಲಕ್ಷ್ಮೇಶ್ವರ: ಸೂರಣಗಿ ಗ್ರಾಮದ ಹೊಲದಲ್ಲಿರುವ ಗುಡಿಸಲಿಗೆ ಮಂಗಳವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದು, ನೀಲಪ್ಪ ಸೋಮಲೆಪ್ಪ ಲಮಾಣಿ (50) ಸಜೀವದಹನವಾಗಿದ್ದಾರೆ. ಜತೆಗೆ 1 ಆಕಳು, 3 ಎತ್ತು, 1 ಎಮ್ಮೆ ಸಹ ಸುಟ್ಟು ಕರಕಲಾಗಿವೆ. ಬೆಳಕಿಗಾಗಿ ಉರಿಸಿಟ್ಟಿದ್ದ ಚಿಮಣಿ ದೀಪ ಉರುಳಿಬಿದ್ದು ಅವಘಡ ಸಂಭವಿಸಿದೆ. ನೀಲಪ್ಪ ಗಾಢ ನಿದ್ರೆಯಲ್ಲಿದ್ದಾಗ ಬೆಂಕಿಯ ಝಳಕ್ಕೆ ಗುಡಿಸಲಿನಲ್ಲಿ ಕಟ್ಟಿದ್ದ ಜಾನುವಾರುಗಳು ಚೀರಾಡಲಾರಂಭಿಸಿವೆ. ಇದನ್ನು ಕೇಳಿ ಗಡಬಡಿಸಿ ಎದ್ದ ಲಮಾಣಿ 2 ಎತ್ತು, 1 ಎಮ್ಮೆ ಹಾಗೂ ಒಂದು ಆಕಳನ್ನು ಹೊರಗೆ ಬಿಟ್ಟಿದ್ದಾರೆ. ಉಳಿದ ಜಾನುವಾರುಗಳನ್ನು ರಕ್ಷಿಸಲು ಹೋದಾಗ ಬೆಂಕಿಗೆ ಬೆದರಿದ ಎಮ್ಮೆ ಈತನ ಮೇಲೆ ಜಿಗಿದಿದೆ. ಮೇಲೇಳಲಾಗದೇ ಬೆಂಕಿಗೆ ಸಿಲುಕಿದ್ದಾರೆ.