ಜಪ್ತಿ ಮಾಡಿದ್ದ ಅದಿರು ಸಾಗಾಟ: 6 ಲಾರಿ ವಶ
ಬಳ್ಳಾರಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದ ಅದಿರನ್ನು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಕಾರಿಗನೂರು ಗ್ರಾಮದ ರೈಲ್ವೆ ಟ್ರ್ಯಾಕ್ ಸಮೀಪ ಮಂಗಳವಾರ ಮಧ್ಯರಾತ್ರಿ ದಾಳಿ ನಡೆಸಿ, 6 ಲಾರಿ ಮತ್ತು ಒಂದು ಲೋಡರ್ ವಶಪಡಿಸಿಕೊಂಡಿದ್ದಾರೆ.
ಕಾರಿಗನೂರು ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ ಜಪ್ತಿ ಮಾಡಿದ ಕಬ್ಬಿಣದ ಅದಿರನ್ನು ಆಂಧ್ರಪ್ರದೇಶ ನೋಂದಣಿಯ ಲಾರಿಗಳು ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಹೊಸಪೇಟೆ ವಲಯದ ಅರಣ್ಯಾಧಿಕಾರಿ ಶ್ರೀಧರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಾಧಿಕ್, ಮಲ್ಲೇಶ್ ಮತ್ತು ಹೊಸಪೇಟೆ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವ ತಂಡ ದಾಳಿ ಮಾಡಿದೆ.
ದಾಳಿ ವೇಳೆ ಲಾರಿ ಚಾಲಕ, ಕ್ಲೀನರ್ ಪರಾರಿಯಾಗಿದ್ದಾರೆ. ಅಧಿಕಾರಿಗಳು ಆರು ಲಾರಿ, 120 ಟನ್ ಅದಿರು, ಲೋಡರ್ ಸೇರಿ ರು. 53.23 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.