ಜಲಾಶಯ ಪ್ರದೇಶ ಇನ್ನು ಪ್ರವಾಸಿ ತಾಣ
ವಿಧಾನಪರಿಷತ್ತು: ರಾಜ್ಯದ ಜಲಾಶಯ ಪಕ್ಕದ ಪ್ರದೇಶಗಳು ಇನ್ನು ಮುಂದೆ ಪ್ರವಾಸಿ ತಾಣಗಳಾಗಲಿವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಾಜ್ಯದ ಅನೇಕ ಪ್ರಮುಖ ಜಲಾಶಯಗಳ ಪ್ರದೇಶಗಳತ್ತ ಪ್ರವಾಸಿಗರನ್ನು ಆಕರ್ಷಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರವಾಸೋದ್ಯಮ, ಅರಣ್ಯ ಹಾಗೂ ಜಲಸಂಪನ್ಮೂಲ ಇಲಾಖೆಗಳು ಒಗ್ಗೂಡಿ ಯೋಜನೆ ರೂಪಿಸಿವೆ ಎಂದು ಅವರು ಜೆಡಿಎಸ್ನ ಸಂದೇಶ್ ನಾಗರಾಜು ಪ್ರಶ್ನೆಗೆ ಉತ್ತರಿಸಿದರು. ಅನೇಕ ಜಲಾಶಯ ಪ್ರದೇಶಗಳು ಪ್ರವಾಸಯೋಗ್ಯ ಜಾಗವಾಗಿವೆ. ಅಂಥವುಗಳನ್ನು ಈಗಾಗಲೇ ಗುರುತಿಸಲಾಗಿದೆ. ಸದ್ಯಕ್ಕೆ ಆಲಮಟ್ಟಿ, ನಾರಾಯಣಪುರ ಸೇರಿದಂತೆ ಅನೇಕ ಜಲಾಶಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಉದ್ಯಾನಗಳು, ಈಜುಕೊಳ ಹಾಗೂ ಕಾರಂಜಿಗಳನ್ನು ನಿಮಿಸಲು ಕ್ರಮಕೈಗೊಳ್ಳಲಾಗಿದೆ. ಇದಲ್ಲದೆ, ಈ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸಂರಕ್ಷಿತ ಪ್ರದೇಶಗಳನ್ನಾಗಿ ಮಾಡಲು ತಜ್ಞರನ್ನೂ ಸಂಪರ್ಕಿಸಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.