ದೇವರ ಹೊತ್ತವರು ಮಸಣ ಸೇರಿದರು!
ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಹಳ್ಳಿಯಲ್ಲಿ ಶ್ರೀಗಂಗಮಾಂಭ ದೇವಿಯ ವಿಗ್ರಹ ಹೊತ್ತು ಮೆರವಣಿಗೆ ತೆರಳುತ್ತಿದ್ದ ಭಕ್ತರ ಮೇಲೆ ಮಂಗಳವಾರ ರಾತ್ರಿ ಲಾರಿ ಹರಿದು ಒಂದೇ ಕುಟುಂಬದ ಐವರು ಮೃತಪಟ್ಟು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರೀಗಂಗಮಾಂಭ ದೇವಿಯ ಮೂಲ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಪೂಜೆ ಸಲ್ಲಿಸಿ ದೇವರ ಉತ್ಸವ ವಿಗ್ರಹ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ಘಟನೆ ನಡೆದಿದೆ.
ಒಂದೇ ಕುಟುಂಬದ ಶ್ರೀರಾಮಪ್ಪ (65), ಶ್ರೀನಾಥ್ (17), ಮಂಜುನಾಥರೆಡ್ಡಿ (30), ಕಿಶೋರ್ (17), ಪ್ರಭಾಕರರೆಡ್ಡಿ (35) ಮೃತಪಟ್ಟರು. ಗಾಯಗೊಂಡ 15 ಮಂದಿಯನ್ನು ಕೋಲಾರ, ಬೆಂಗಳೂರು ಮತ್ತು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.