ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೈನಾ ಕನ್ನಡಿಗರ ಮನೆ ಬಿದ್ಮೇಲೆ ಎಚ್ಚೆತ್ತ ಸಿದ್ದು

Lingaraj Badiger
Updated On : 24 Jul 2014, 11:40 am

ಕನ್ನಡಪ್ರಭ ವಾರ್ತೆ, ವಾಸ್ಕೋ, ಜು. 23
ಊರು ಕೊಳ್ಳೆಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಗೋವಾ ಸರ್ಕಾರದ ಕನ್ನಡಿಗರ ಮನೆ ನೆಲಸಮ ಮಾಡುವ ಮೊದಲ ಹಂತದ ಕಾರ್ಯಾಚರಣೆ ಸಾಂಗವಾಗಿ ನೇರವೇರಿದ ಮೇಲೆ ಕರ್ನಾಟಕ ಸರ್ಕಾರ ಎಚ್ಚೆತ್ತು ಸಚಿವರನ್ನು ಕಳುಹಿಸಿದೆ.
ಕರ್ನಾಟಕ ಸರ್ಕಾರದ ಸಚಿವರು ಬರುವ ವೇಳೆಗೆ ಬೈನಾದಲ್ಲಿ ಕನ್ನಡಿಗರ ಮನೆ ಇತ್ತು ಎನ್ನುವ ಕುರುಹೂ ಇಲ್ಲದಂತೆ ಗೋವಾ ಸರ್ಕಾರ ಎಲ್ಲ ಅವಶೇಷಗಳನ್ನೂ ಗುಡಿಸಿ ಹಾಕಿದೆ. ಬೈನಾ ಬೀಚ್ ಈಗ ಬಟಾಬಯಲು. ಕರ್ನಾಟಕ ಸರ್ಕಾರದ ಸಚಿವರಿಗೆ ವಿವರಣೆ ನೀಡಲು ಮನೆಗಳ ಅವಶೇಷಗಳೂ ಉಳಿದಿಲ್ಲ. ಕೇವಲ ಖಾಲಿ ಜಾಗವನ್ನು ತೋರಿಸಿ ಹೇಳಬೇಕು.
ಕೆಡವಿದ ಮೇಲೆ ಕಣ್ಣು ಬಿಟ್ಟಿತು: ಜು. 11ರಂದು ಅರೆ ನಿದ್ದೆಯಲ್ಲಿದ್ದ ಕನ್ನಡಿಗರನ್ನು ಮನೆಯಿಂದ ಹೊರಗೆಳೆದು, ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆಗಳ ಮೇಲೆ ಜೆಸಿಬಿ ಓಡಿಸಿ ಧ್ವಂಸ ಮಾಡಿದಾಗ ಇಡಿ ಕನ್ನಡ ನಾಡು ಮರುಗಿದರೂ ಆಳುವ ದೊರೆಗಳಿಗೆ ಕೇಳಿಸಲೇ ಇಲ್ಲ. ಅದಾದ ಮೇಲೆ ಜು. 21ರಂದು ಮತ್ತೆ ಕನ್ನಡಿಗರ 8 ಮನೆಗಳನ್ನು ಉರುಳಿಸಲಾಯಿತು. ಗೋವಾ ಸರ್ಕಾರ ಪ್ರಥಮ ಹಂತದಲ್ಲಿ ಮನೆಗಳನ್ನೆಲ್ಲ ಕೆಡವಿದ ಮೇಲೆ ಕರ್ನಾಟಕ ಸರ್ಕಾರ ಕಣ್ಣು ಬಿಟ್ಟಿದೆ.
ಆದರೆ ಮನೆ ಕಳೆದುಕೊಂಡ ಕನ್ನಡಿಗರು ಇನ್ನೂ ಅದೇ ಬಯಲಿನಲ್ಲಿ ನಿಂತಿದ್ದಾರೆ. ಬಿರುಮಳೆ, ಬಿರುಗಾಳಿ ನಡುವೆ ನಡುಗುತ್ತ ಇದ್ದಾರೆ. ಪ್ಲಾಸ್ಟಿಕ್ ಶೀಟ್‌ನ್ನು ಎತ್ತಿ ಹಿಡಿದು ಒಪ್ಪೊತ್ತಿನ ಅಡುಗೆ ತಯಾರಿಸುತ್ತಿದ್ದಾರೆ. ಇವರ ಸ್ಥಿತಿ ಕಂಡರೆ ಯಾರಿಗಾದರೂ ಮರುಕ ಬಾರದೆ ಇರದು.
ಕನ್ನಡಿಗರು ಕೇವಲ ಮನೆಯೊಂದನ್ನೇ ಕಳೆದುಕೊಂಡಿಲ್ಲ. ಬಟ್ಟೆ, ಪಾತ್ರೆ, ಪೀಠೋಪಕರಣಗಳು, ಧವಸ ಧಾನ್ಯಗಳು ಹೀಗೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇವುಗಳಿಗೆಲ್ಲ ಪರಿಹಾರ ಬೇಕಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ನೈತಿಕ ಸ್ಥೈರ್ಯವನ್ನು ಕಳೆದುಕೊಂಡಿದ್ದಾರೆ. ಗೋವಾದಲ್ಲಿ ನೆಲೆಸಿರುವ ಇವರಿಗೆ ಗೋವಾ ಸರ್ಕಾರದ ದಬ್ಬಾಳಿಕೆಯಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ಈಗ ಕರ್ನಾಟಕ ಸರ್ಕಾರ ಆ ಕೆಲಸವನ್ನು ಮಾಡಬೇಕಿದೆ.
ಇಷ್ಟು ದಿನಗಳ ಮೇಲಾದರೂ ತಮ್ಮ ಅಳಲನ್ನು ಆಲಿಸಲು ಕರ್ನಾಟಕ ಸರ್ಕಾರ ಬಂದ ಬಗ್ಗೆ ಇಲ್ಲಿನ ಕನ್ನಡಿಗರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈ ಭೇಟಿ ಕೇವಲ ಕಣ್ಣೊರೆಸುವ ತಂತ್ರವಾಗಬಾರದು. ಕನ್ನಡಿಗರ ಬದುಕಿಗೆ ಭದ್ರವಾದ ಅಡಿಪಾಯ ಹಾಕುವಂತಾಗಬೇಕು ಎಂದು ಕನ್ನಡಿಗರು ಅಭಿಪ್ರಾಯಪಡುತ್ತಿದ್ದಾರೆ.


ಕೂಲಿಕಾರರ ಕುಟುಂಬಗಳು...
ಗೋವಾದ ಹಲವೆಡೆ ಇನ್ನೂ ಕನ್ನಡಿಗರ ಸಾವಿರಾರು ಕುಟುಂಬಗಳಿವೆ. ಅವರಿನ್ನೂ ಕೂಲಿಯಾಳುಗಳಾಗೇ ಇದ್ದಾರೆ. ಮಡಗಾಂವ ಸಮೀಪದ ಮೋತಿ ಡೊಂಗರ, ಕಾಟೆಬೈನಾ, ಜುವಾರಿ ನಗರ, ಮಂಗೂರ ಹಿಲ್, ಸಡಾ, ಸಾವರ್ಡೆ ಮತ್ತಿತರ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಬೈನಾದ ಭಯಾನಕ ಅನುಭವ ಅಲ್ಲೆಲ್ಲೂ ಆಗದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ಮೋತಿ ಡೊಂಗರದಲ್ಲಿ ನೆಲೆಸಿರುವ 200ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ತೆರವುಗೊಳಿಸುವಂತೆ ಸರ್ಕಾರ ನೋಟಿಸ್ ನೀಡಿದೆ. ಆ ಮನೆಗಳನ್ನೂ ತೆರವುಗೊಳಿಸದಂತೆ ಇಲ್ಲಿನ ಸರ್ಕಾರದ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರಬೇಕು. ಭವಿಷ್ಯದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಮನೆ ತೆರವು ಇಂಥ ಕಾರ್ಯಾಚರಣೆ ನಡೆಯದಂತೆ ರಕ್ಷಣೆ ನೀಡಬೇಕು. ಕರ್ನಾಟಕ ಸರ್ಕಾರದ ಮೇಲೆ ಈಗ ಬೆಟ್ಟದಷ್ಟು ನಿರೀಕ್ಷೆಗಳಿವೆ. ಕನ್ನಡಿಗರ ಸ್ಥಿತಿಗತಿ ಕಣ್ಣಾರೆ ಕಂಡ ಕರ್ನಾಟಕ ಸಚಿವರು ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ.

ಭರವಸೆ ಸಾಲದು...
ಈಗ ಕೇವಲ ಭರವಸೆ ಕೊಟ್ಟರೆ ಸಾಲದು. ಗೋವಾ ಸರ್ಕಾರದೊಂದಿಗೆ ಸತತ ಮಾತುಕತೆ, ಒತ್ತಡ ಹೇರಿ ಕನ್ನಡಿಗ ನಿರಾಶ್ರಿತರಿಗೆ ಕಾಯಂ ಪುನರ್ವಸತಿಯ ವ್ಯವಸ್ಥೆಯಾಗಬೇಕು. 2004ರಲ್ಲಿ ಮನೆ ಕಳೆದುಕೊಂಡ 400ಕ್ಕೂ ಹೆಚ್ಚು ಕುಟುಂಬಗಳು ಸೂರಿಗಾಗಿ ಪರದಾಡುತ್ತಿವೆ. ಈಚೆಗೆ ಮನೆ ಕಳೆದುಕೊಂಡ ಕುಟುಂಬಗಳೂ ಸೇರಿ ಒಟ್ಟು 500 ಕುಟುಂಬಗಳಿಗೆ ಕಾಯಂ ಪುನರ್ವಸತಿಗಾಗಿ ಕರ್ನಾಟಕ ಸರ್ಕಾರ ಗೋವಾ ಸರ್ಕಾರದ ಎದುರು ಹಕ್ಕೊತ್ತಾಯ ಮಂಡಿಸಿ, ಅದನ್ನು ಈಡೇರಿಸಬೇಕು.
-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement