ಮಳೆಯಬ್ಬರಕ್ಕೆ ಇಬ್ಬರ ಸಾವು ಏಳು ಸೇತುವೆ ಜಲಾವೃತ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ರಾಜ್ಯದ ಬಹುತೇಕ...
ಬೆಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ರಾಜ್ಯದ ಬಹುತೇಕ ಕಡೆ ಬುಧವಾರವೂ ಮಳೆ ಅಬ್ಬರ ಮುಂದುವರಿದಿದೆ.
ಚಿಕ್ಕೋಡಿ ತಾಲೂಕಿನ ಏಳು ಸೇತುವೆಗಳು ಮುಳುಗಡೆಯಾಗಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹಾರಾಡಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಅಣ್ಣ-ತಮ್ಮಂದಿರಿಬ್ಬರು ದೋಣಿ ಮಗುಚಿ ಮುಳುಗಿ ಮೃತಪಟ್ಟಿದ್ದಾರೆ. ಸುರೇಶ (36) ಮತ್ತು ಜಯಕರ (32) ಮೃತರು. ದೋಣಿಯಲ್ಲಿದ್ದ ಅವಿನಾಶ ಎಂಬಾತನನ್ನು ರಕ್ಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಬೀಸನಗದ್ದೆ ಗ್ರಾಮ ಜಲಾವೃತವಾಗಿದ್ದು, ಸಂಪರ್ಕ ಕಲ್ಪಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ. ತೀರ್ಥಹಳ್ಳಿಯಲ್ಲಿ ತುಂಗೆ ತುಂಬಿದ್ದು, ಮಂಡಗದ್ದೆ ಪಕ್ಷಿಧಾಮ ಜಲಾವೃತವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
7 ಸೇತುವೆ ಜಲಾವೃತ: ಮಹಾರಾಷ್ಟ್ರದ ಕೃಷ್ಣಾ ನದಿ ಜಲಾನಯನ ಹಾಗೂ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಸುಮಾರು ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ 7 ಕೆಳಮಟ್ಟದ ಸೇತುವೆಗಳಾದ ಕಲ್ಲೋಳ-ಯಡೂರ, ಸದಲಗಾ-ಬೋರಗಾಂವ, ಕಾರದಗಾ-ಭೋಜ್, ಭೋಜ-ಕುನ್ನೂರ, ಸಿದ್ನ್ನಾಳ-ಅಕ್ಕೋಳ, ಜತ್ರಾಟ-ಭೀವಸಿ ಮಲಿಕವಾಡ-ದತ್ತವಾಡ ಮತ್ತೆ ಜಲಾವೃತವಾಗಿವೆ.
ಮಳೆ ಹೀಗೆ ಮುಂದುವರಿದಲ್ಲಿ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಸಹ ಮುಳುಗಳಿದೆ. ಈ ಸೇತುವೆ ಜಲಾವೃತವಾದರೆ ಉತ್ತರ ಕರ್ನಾಟಕ, ಮಹಾರಾಷ್ಟ್ರ ನಡುವಿನ ಸಂಪರ್ಕ ಕಡಿತವಾಗಲಿದ್ದು, ಜಮಖಂಡಿ ಮೂಲಕ ಪ್ರಯಾಣಿಸಬೇಕಾಗುತ್ತದೆ. ಮಲಪ್ರಭೆಯಲ್ಲೂ ಪ್ರವಾಹದ ಭೀತಿ ಎದುರಾಗಿದೆ. ಆಲಮಟ್ಟಿಗೆ 60 ಸಾವಿರ ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಠ ಮಟ್ಟ 519 ಮೀ. ಇದ್ದು, ಸದ್ಯ 514 ಮೀ. ಸಂಗ್ರಹವಾಗಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯವೂ ಭರ್ತಿಯಾಗಿದೆ.
ಸಂಪರ್ಕ ಕಡಿತ
ಕೊಡಗು ಜಿಲ್ಲೆಯಾದ್ಯಂತ ಬಿರುಗಾಳಿ ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಿಸಲಾಗಿದೆ. ಭಾಗಮಂಡಲದಲ್ಲಿ ಕಾವೇರಿ ಪ್ರವಾಹೋಪಾದಿಯಲ್ಲಿ ಹರಿಯುತ್ತಿರುವುದರಿಂದ ಭಾಗಮಂಡಲ-ತಲಕಾವೇರಿ ನಡುವಿನ ರಸ್ತೆ ಸಂಪರ್ಕ ಸತತ ಐದನೇ ದಿನವೂ ಕಡಿತಗೊಂಡಿದೆ.
ಶವಪತ್ತೆ
ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪ ಕಾಲುವೆಯಲ್ಲಿ ಕೈ ತೊಳೆಯಲು ಹೋಗಿದ್ದ ಕಾರ್ಮಿಕ ಭಾಸ್ಕರ್ (40) ಎಂಬಾತ ಸೋಮವಾರ ವರದಾ ನದಿಯಲ್ಲಿ ಕೊಚ್ಚಿಹೋಗಿದ್ದು, ಆತನ ಶವ ಬುಧವಾರ ಸಿರಿವಾರ ಸೇತುವೆ ಬಳಿ ಪತ್ತೆಯಾಗಿದೆ.
ಪ್ರವಾಹ ಸ್ಥಿತಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಶಿನಿ, ವರದಾ, ಶಾಲ್ಮಲಾ, ಕಾಳಿ ನದಿಗಳಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾಗಿದೆ. ಪ್ರವಾಹ ಸ್ಥಿತಿ ತಲೆದೋರಿದೆ. ಕೊಡಸಳ್ಳಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಹುಬ್ಬಳ್ಳಿ ಸೇರಿ ಧಾರವಾಡ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಬೆಳಗಾವಿ, ಖಾನಾಪುರ ಸೇರಿದಂತೆ ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ವೇದಗಂಗಾ, ದೂಧಗಂಗಾ, ಪಂಚಗಂಗಾ ನದಿಗಳು ಮೈದುಂಬಿವೆ. ಹಾಸನ ಜಿಲ್ಲಾದ್ಯಂತ ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.