ಸದನದ ಅರ್ಜಿ ಸಮಿತಿಯಿಂದ ಬತ್ತಿರುವ ಕೆರೆಗಳ ಪರಿಶೀಲನೆ
ವಿಧಾನಪರಿಷತ್ತು: ಅರಸೀಕೆರೆ, ಬೇಲೂರು ಹಾಗೂ ಕಡೂರಿನಲ್ಲಿ ಬತ್ತಿರುವ ಕೆರೆಗಳನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿ ರಚನೆ ಅಗತ್ಯವಿಲ್ಲ. ಇದನ್ನು ಸದನದ ಅರ್ಜಿ ಸಮಿತಿಗೆ ವಹಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಬಿಜೆಪಿಯ ಸಿ.ಎಚ್.ವಿಜಯಶಂಕರ್ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಅರಸೀಕೆರೆ, ಬೇಲೂರು ಹಾಗೂ ಕಡೂರು ತಾಲೂಕುಗಳಲ್ಲಿ ಬತ್ತಿರುವ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುವುದು. ರಾಜ್ಯದಲ್ಲಿರುವ ಕೆರೆಗಳ ಪರಿಶೀಲನೆಯನ್ನು ಅರ್ಜಿ ಸಮಿತಿಗೆ ವಹಿಸಿ ಅಗತ್ಯವಿರುವ ತಜ್ಞರನ್ನು ನೀಡಲಾಗುವುದು. ಅರಸೀಕೆರೆಯಲ್ಲಿ 376, ಬೇಲೂರಿನಲ್ಲಿ 1,030 ಹಾಗೂ ಕಡೂರಿನಲ್ಲಿ 340 ಕೆರೆಗಳಿದ್ದು, ಬಹುತೇಕ ಕೆರೆಗಳಲ್ಲಿ ನೀರಿಲ್ಲ ಎಂದರು. ಶುದ್ಧ ಕುಡಿಯುವ ನೀರು ಯೋಜನೆಗೆ 1,300 ಕೋಟಿಯ ಯೋಜನೆ ತಯಾರಿಸಿದ್ದು, ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಯೋಜನೆಯ ಮೊದಲ ಹಂತವಾಗಿ ಗದಗ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ಕೊಳವೆ ಬಾವಿ ಕೊರೆಯುವ ಬದಲು ನದಿಮೂಲಗಳಿಂದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಮರುಪೂರಣ: ಇಲಾಖೆಯಿಂದ 3 ಲಕ್ಷ ಕೊಳವೆ ಬಾವಿ ಕೊರೆಸಿದ್ದು, ಶೇ.20 ರಷ್ಟು ಕೊಳವೆ ಬಾವಿ ಹಾಳಾಗಿದೆ. ಕೊಳವೆ ಬಾವಿ ಪುನಶ್ಚೇತನಕ್ಕೆ ಮರುಪೂರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಪಂಚಾಯಿತಿಗಳಲ್ಲಿ 2 ಕೊಳವೆ ಬಾವಿಗಳ ಮರುಪೂರಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.