ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸದನದಲ್ಲಿ ರೈಲು ಬಿಡಬೇಡಿ

ವಿಧಾನಸಭೆಯಲ್ಲಿ ರೈಲು ಬಿಡೋದು ಬೇಡ. ನೀವು ಹೇಳುತ್ತಿರುವುದೇ ಒಂದು, ನಿಮ್ಮ ಸರ್ಕಾರವೇ ನೀಡಿರುವ...

Mainashree
Updated On : 23 Jul 2014, 10:04 am

ವಿಧಾನಸಭೆ: ವಿಧಾನಸಭೆಯಲ್ಲಿ ರೈಲು ಬಿಡೋದು ಬೇಡ. ನೀವು ಹೇಳುತ್ತಿರುವುದೇ ಒಂದು, ನಿಮ್ಮ ಸರ್ಕಾರವೇ ನೀಡಿರುವ ವಾರ್ಷಿಕ ವರದಿಯಲ್ಲಿ ಇರುವುದೇ ಒಂದು. ನೀವು ಇಷ್ಟೊಂದು ಸುಳ್ಳು ಹೇಳಬೇಡಿ. ರೈಲು ಬಿಡಬೇಡಿ ಎಂದು ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಅವರನ್ನು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಲೋಕೋಪಯೋಗಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಮೂರೂವರೆ ಸಾವಿರ ಕಿಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಹೇಳಿದರು. ಆದರೆ, ಸರ್ಕಾರ ಒದಗಿಸಿರುವ ಲೋಕೋಪಯೋಗಿ ಇಲಾಖೆಯ 2013-14ನೇ ಸಾಲಿನ ವಾರ್ಷಿಕ ವರದಿಯಲ್ಲಿ, ಇದು 571 ಕಿಮೀ ಮಾತ್ರ ಇದೆ. ಇಲ್ಲಿದೆ ನೋಡಿ ಸರ್ಕಾರದ ವರದಿ ಎಂದು ಬಿಜೆಪಿಯ ಸಿ.ಟಿ. ರವಿ ವರದಿ ಪುಸ್ತಕವನ್ನು ತೋರಿಸಿ, ನೀವು ಹೇಳಿದ್ದು ನಂಬಬೇಕಾ, ಸರ್ಕಾರವನ್ನು ನಂಬಬೇಕಾ? ಸುಮ್ಮನೆ ರೈಲು ಬಿಟ್ಟು, ಸುಳ್ಳು ಹೇಳೋದು ಬೇಡ ಎಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಸದಸ್ಯರು ದನಿಗೂಡಿಸಿದರು.
ಸಚಿವ ಎಚ್.ಸಿ. ಮಹದೇವಪ್ಪ ಮಧ್ಯಪ್ರವೇಶಿಸಿ, ಯುಪಿಎ ಸರ್ಕಾರ ಮಾ.4ಕ್ಕೆ ಸುಮಾರು 1688 ಕಿಮೀ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದೆ. ಅದನ್ನು ಸೇರಿಸಿಕೊಂಡರೆ ಇಷ್ಟಾಗುತ್ತದೆ ಎಂದು ಸಮಜಾಯಿಷಿ ನೀಡಿದರು. ರಸ್ತೆಯನ್ನು ಘೋಷಿಸಲಾಗಿದೆ ಅಷ್ಟೇ. ಪುಸ್ತಕದಲ್ಲಿದೆ, ಅದು ಆಗಿಲ್ಲ. ಸುಮ್ಮನೆ ಏಕೆ ಹೇಳುತ್ತೀರಿ ಎಂದು ಸಿ.ಟಿ. ರವಿ, ಚಂದ್ರಶೇಖರ್ ಮಾಮನಿ, ಸುರೇಶ್‌ಕುಮಾರ್, ಲಕ್ಷ್ಮಣ ಸವದಿ ತರಾಟೆಗೆ ತೆಗದುಕೊಂಡರು.
ವಿಪ್‌ಗೆ ಶಾಕ್ ಕೊಡಿ!
ನಿಮ್ಮ ಪಕ್ಷದ ವಿಪ್‌ಗೆ ಶಾಕ್ ಕೊಟ್ಟು ಎಲ್ಲರೂ, ಆಡಳಿತ ಪಕ್ಷದವರು ಸದನದಲ್ಲಿ ಇರುವಂತೆ, ಬರುವಂತೆ ಮಾಡಿ. ಇಲ್ಲಿ ಸದನ ನಡೆಯುತ್ತಿದೆ ಎಂದರೆ, ಜಗತ್ತಿನಲ್ಲಿ ಇನ್ನಾವುದೇ ಕೆಲಸ ಮುಖ್ಯ ಇರಲಾರದು. ದೇವರ ಪೂಜೆಗಿಂತ ಇದು ಮಿಗಿಲು. ಆದರೆ, ಆಡಳಿತ ಪಕ್ಷದ ಸದಸ್ಯರು, ಸಚಿವರೇ ಇಲ್ಲಿ ಬರುತ್ತಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತರಾಟೆಗೆ ತೆಗೆದುಕೊಂಡರು. ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆ ಮೇಲಿನ ಚರ್ಚೆ ಆರಂಭದಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಕಾಂಗ್ರೆಸ್‌ನ ಶಾಸಕರು ಸಭೆಯಲ್ಲಿ ಇರಲಿಲ್ಲ. ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸುನೀಲ್‌ಕುಮಾರ್, ನಾವು ಒಳಗೆ ಬರದಿದ್ದರೆ ಕೋರಂ ಮಾಡಲೂ ಆಡಳಿತ ಪಕ್ಷದಲ್ಲಿ ಸದಸ್ಯರಿಲ್ಲ ಎಂದರು. ಕ್ಯಾಬಿನೆಟ್ ಇತ್ತು, ಅದಕ್ಕೆ ತಡವಾಗಿದೆ ಎಂದು ಮಹದೇವಪ್ಪ ಸಮಜಾಯಿಷಿ ನೀಡಿದರು. ಇಲ್ಲಿರುವ ನಾಲ್ಕು ಸಚಿವರನ್ನು ಹೊರಗೆ ಹಾಕಿದ್ದಾರಾ? ಕ್ಯಾಬಿನೆಟ್ ಮುಗಿದು ಎಷ್ಟೊತ್ತಾಯಿತು. ಅಲ್ಲದೆ ಶಾಸಕರೂ ಕ್ಯಾಬಿನೆಟ್‌ಗೆ ಬರುತ್ತಾರೆ ಎಂದು ಬಿಜೆಪಿ ಸದಸ್ಯರು ಲೇವಡಿ ಮಾಡಿದರು. ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ ಕೂಡ ಜಲಸಂಪನ್ಮೂಲ ಖಾತೆ ಸಚಿವರಿಲ್ಲ ಎಂದಾಗ, ಸ್ಪೀಕರ್ ಕಾಗೋಡು ನಿಮ್ಮ ವಿಪ್‌ಗೆ ಹೇಳಿ. ಎಲ್ಲರನ್ನು ಕರೆಸುವಂತೆ ಶಾಕ್ ಕೊಡಿ ಎಂದು ರೇಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement