ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

8 ವರ್ಷದಲ್ಲಿ 4337 ಶಿಶು ಸಾವು

Vishwanath S
Updated On : 25 Jul 2014, 1:20 am

ಹುಬ್ಬಳ್ಳಿ: 'ಬಡವರ ಪಾಲಿನ ಸಂಜೀವಿನಿ' ಎನಿಸಿಕೊಂಡ ಕಿಮ್ಸ್‌ನಲ್ಲಿ ಕಳೆದೆಂಟು ವರ್ಷದಲ್ಲಿ 4,337 ಶಿಶುಗಳು ಮೃತಪಟ್ಟರೆ, 257 ಬಾಣಂತಿಯರು ಕೊನೆಯುಸಿರೆಳೆದಿದ್ದಾರೆ!
ಹೌದು. ಕಿಮ್ಸ್‌ನ ಕಳೆದ ಎಂಟು ವರ್ಷಗಳ ವೈದ್ಯಕೀಯ ದಾಖಲೆಗಳೇ ಇದನ್ನು ಬಹಿರಂಗಪಡಿಸಿದೆ. ತೀವ್ರ ಅನಾರೋಗ್ಯ ಪೀಡಿತರು, ಸಾವಿನಂಚಿನಲ್ಲಿರುವವರು ಸಾಯುವುದಕ್ಕೆ ಸಾವಿರ ಕಾರಣಗಳಿರುತ್ತವೆ. ಆದರೆ, ತಾಯಿ-ಮಗು ಸಾವಿಗೆ ಪ್ರಮುಖವಾಗಿ ಆಸ್ಪತ್ರೆಯ ವ್ಯವಸ್ಥೆ ಹಾಗೂ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಹೆರಿಗೆ ವೇಳೆಯೇ ಸಾವು: 2007ರಿಂದ 2014ರ ಜೂನ್‌ವರೆಗೆ ಬರೊಬ್ಬರಿ 4,337 ಶಿಶುಗಳು ಹೆರಿಗೆ ಸಮಯದಲ್ಲಿ ಮರಣ ಹೊಂದಿವೆ. 2007ರಲ್ಲಿ 462 ಶಿಶುಗಳು, 2008ರಲ್ಲಿ 579, 2009ರಲ್ಲಿ ಅತಿ ಹೆಚ್ಚು 728 ಶಿಶುಗಳು ಮೃತಪಟ್ಟರೆ, 2010ರಲ್ಲಿ 576, 2011ರಲ್ಲಿ 524, 2012ರಲ್ಲಿ 510, 2013ರಲ್ಲಿ 663 ಶಿಶುಗಳು ಕೊನೆಯುಸಿರೆಳೆದಿವೆ. 2014ರ ಜೂನ್‌ವರೆಗೆ 295 ಶಿಶುಗಳು ಮೃತಪಟ್ಟಿವೆ.
ಇನ್ನು ಹೆರಿಗೆ ಸಮಯದಲ್ಲಿ 2010ರಿಂದ 2014 ಜುಲೈವರೆಗೆ 257 ಬಾಣಂತಿಯರು ಮೃತಪಟ್ಟಿದ್ದಾರೆ. 2010ರಲ್ಲಿ 48, 2011ರಲ್ಲಿ 49, 2012ರಲ್ಲಿ ಅತಿ ಹೆಚ್ಚು ಅಂದರೆ 72 ಬಾಣಂತಿಯರು ಮೃತಪಟ್ಟಿದ್ದಾರೆ. 2013ರಲ್ಲಿ 58 ಹಾಗೂ 2014ರ ಜುಲೈವರೆಗೆ 40 ಬಾಣಂತಿಯರು ಮೃತಪಟ್ಟಿರುವುದು ಬೆಚ್ಚಿಬೀಳಿಸುವ ಸಂಗತಿ.
ಕಾರಣವೇನು?: ಇಷ್ಟು ಪ್ರಮಾಣದಲ್ಲಿ ಶಿಶು, ಬಾಣಂತಿಯರು ಮೃತಪಡುತ್ತಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಸಕಾಲಕ್ಕೆ ಬಾಣಂತಿಯರಿಗೆ ಆರೈಕೆ ಮಾಡುವುದಿಲ್ಲ. ಇನ್ನೇನು ಹೆರಿಗೆಯಾಗುತ್ತಿದೆ ಎನ್ನುವಾಗ ಬಾಣಂತಿಯರನ್ನು ಬಿಪಿ, ರಕ್ತ ತಪಾಸಣೆಗೊಳಪಡಿಸಲಾಗುತ್ತದೆ.
ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗುವುದರಿಂದ ತಾಯಿ, ಜೊತೆಗೆ ಮಗುವೂ ಕೊನೆಯುಸಿರೆಳೆದಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement