ಅಹಿಂದ ಮುಖ್ಯಮಂತ್ರಿ ಎನ್ನುವುದು ವಿರೋಧಿಗಳು ನಡೆಸಿರುವ ಅಪಪ್ರಚಾರ
'ನಾನು ಅಹಿಂದ ನಾಯಕ, ಅಹಿಂದ...
'ನಾನು ಅಹಿಂದ ನಾಯಕ, ಅಹಿಂದ ಮುಖ್ಯಮಂತ್ರಿ ಎನ್ನುವುದು ವಿರೋಧಿಗಳ ಅಪಪ್ರಚಾರ. ಸಾಮಾಜಿಕ ನ್ಯಾಯ ಸಹಿಸದವರ ಹಲುಬುವಿಕೆ. ಎಲ್ಲ ಜಾತಿಯ ಬಡವರ ಪರವೂ ಇದ್ದೇನೆ, ಇರುತ್ತೇನೆ.'
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪಷ್ಟ ನುಡಿಗಳಿವು. ನನ್ನ ಸಂಪುಟದಲ್ಲಿ ಬ್ರಾಹ್ಮಣರೂ ಇದ್ದಾರೆ. ಲಿಂಗಾಯತರು, ಒಕ್ಕಲಿಗರು, ಕುರುಬರಿದ್ದಾರೆ. ನಾನಾ ಜಾತಿ, ವರ್ಗದವರೂ ಇದ್ದಾರೆ. ಮಾತನಾಡುವವರು ಅದನ್ನು ಗಮನಿಸಬೇಕಷ್ಟೆ ಎಂದು ಅವರು 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಇನ್ನು, ಕಾಂಗ್ರೆಸ್ನಲ್ಲಿ ಜನತಾ ಪರಿವಾರದಿಂದ ಬಂದವರಿಗೆ ಆದ್ಯತೆ ಕೊಟ್ಟಿದ್ದೇನೆ, ಕೊಡುತ್ತಿದ್ದೇನೆ ಎಂಬುದು ತಪ್ಪು. ನನಗಿಂತ ಮೊದಲು ಜನತಾ ಪರಿವಾರದಿಂದ ಬಂದವರು ಸಾಕಷ್ಟು ಇದ್ದಾರೆ. ನನ್ನ ಜತೆ ಬಂದವರ ಪೈಕಿ ಐದು ಮಂದಿಗಷ್ಟೇ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದೇನೆ. ಹೀಗಾಗಿ ಮೂಲ ಕಾಂಗ್ರೆಸಿಗರು, ವಲಸಿಗರು ಎಂಬ ಭೇದ ಸಂಕುಚಿತ ಮನೋಭಾವದ್ದು. ನಾನು ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ, ಕಾಣುತ್ತೇನೆ ಎಂದರು.
ಸಂದರ್ಶನದಲ್ಲಿ ಸಿಎಂ ಹೇಳಿದ್ದಿಷ್ಟು
ನಾನು ಮುಖ್ಯಮಂತ್ರಿ ಅದ ನಂತರ ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ಸಾಧಿಸುವುದಾಗಿ, ಜನತಾ ದಳ ಒಡೆಯಲು ಪ್ರಯತ್ನಿಸುವುದಾಗಿ ಅನೇಕರು ಅಂದುಕೊಂಡಿದ್ದರು. ಆದರೆ ದಳ ವಿಭಜಿಸುವ, ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಹಗೆ ಸಾಧಿಸುವ ಅನಿವಾರ್ಯ ನನಗಿಲ್ಲ. ಗೌಡರು ನನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿರಬಹುದು. ಹಾಗೆಂದು ವೈರ ಸಾಧಿಸಬೇಕಿಲ್ಲ. ಹಾಗೆ ನೋಡಿದರೆ ನಾನು ಮುಖ್ಯಮಂತ್ರಿ ಆದ ನಂತರ ದಳದ ಹಲವರು 'ನೀವು ಕರೆದರೆ ಕಾಂಗ್ರೆಸ್ಗೆ ಬರುತ್ತೇವೆ' ಅಂದರು. ಆದರೆ, ನಾನು 'ಯಾರನ್ನೂ ಕರೆಯುವುದಿಲ್ಲ. ಯಾವುದೇ ಸ್ಥಾನಮಾನ ನೀಡುವುದಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದೆ. ಅವರಾಗೆ ಬಂದರೆ ಬರಬಹುದು. ಅದಕ್ಕಾಗಿ ನಾನು ಯಾರಿಗೂ ಯಾವುದೇ ಆಸೆ, ಆಮಿಷ ತೋರಿಸುವುದಿಲ್ಲ. ಭರವಸೆಯನ್ನೂ ನೀಡುವುದಿಲ್ಲ. ದಳ ವಿಭಜನೆ ಮಾಡಿ ನನಗೆ ಆಗಬೇಕಾದ್ದು ಏನೂ ಇಲ್ಲ. ಹಾಗೆ ನೋಡಿದರೆ, ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಸ್ನೇಹ ಬೇರೆ. ರಾಜಕೀಯ ಬೇರೆ. ಒಡೆದು ಆಳುವ ತತ್ವದಲ್ಲಿ ನಂಬಿಕೆ ಇಲ್ಲ. ಇತ್ತೀಚೆಗೆ ಗೌಡರು ಹಾಗೂ ಕುಮಾರಸ್ವಾಮಿ ನನ್ನ ಬಗ್ಗೆ, ಅದೇ ರೀತಿ ನಾನು ಅವರ ಬಗ್ಗೆ ಮೃದುಧೋರಣೆ ತೋರುತ್ತಿದ್ದೇವೆ ಎಂಬುದರಲ್ಲಿ ಯಾವುದೇ ವಿಶೇಷ ಇಲ್ಲ. ಅದಕ್ಕೆ ಕಾರಣಗಳೂ ಇಲ್ಲ. ಪ್ರತಿಪಕ್ಷ ಸ್ಥಾನದಿಂದ ಕುಮಾರಸ್ವಾಮಿ ತಮಗೆ ಸರಿ ಎನಿಸಿದ್ದನ್ನು ವಿಧಾನಸಭೆಯಲ್ಲಿ ಮಾತಾಡಿರಬಹುದು. ಆದರೆ ಅದು ನನ್ನ ಪರ, ನನ್ನ ಸರಕಾರದ ಪರ ಎಂದು ಭಾವಿಸುವ ಅಗತ್ಯವಿಲ್ಲ. ಕಾವೇರಿ ವಿಚಾರಕ್ಕೆ ಒಮ್ಮೆ ಗೌಡರ ಜತೆ ಮಾತಾಡಿದ್ದುಂಟು. ಆಗ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಮತ್ತಿತರರು ಜತೆಯಲ್ಲಿದ್ದರು. ಆ ಮಾತು ಕಾವೇರಿಗೆ ಸೀಮಿತ. ಒಂದು ವೇಳೆ ತಮ್ಮ ಜತೆ ಜೆಡಿಎಸ್ ಉತ್ತಮ ಸಂಬಂಧ ಹೊಂದಿದ್ದರೆ ವಿಧಾನ ಪರಿಷತ್ ಸಭಾಪತಿಯಾಗಿ ಬಿಜೆಪಿಯ ಶಂಕರಮೂರ್ತಿ ಮುಂದುವರಿಯುತ್ತಿರಲಿಲ್ಲ, ಉಪಸಭಾಪತಿಯಾಗಿ ಜೆಡಿಎಸ್ನ ಪುಟ್ಟಣ್ಣ ಆಯ್ಕೆ ಆಗುತ್ತಿರಲಿಲ್ಲ. ರಾಜ್ಯಸಭೆ ಚುನಾವಣೆಯಲ್ಲೂ ಇದು ವೇದ್ಯ. ವಿಷಯಾಧಾರಿತ ಸ್ನೇಹವೇ ಬೇರೆ. ರಾಜಕೀಯ ಸ್ನೇಹವೇ ಬೇರೆ. ನನಗೆ ಮೊದಲನೆಯದರಲ್ಲಿ ಮಾತ್ರ ನಂಬಿಕೆ.
ವಾಟ್ ಇಸ್ ರಾಂಗ್?
'ನಿಮ್ಮ ಕಾಲದಲ್ಲೂ ರಾಜ್ಯದಲ್ಲಿ ಅತ್ಯಾಚಾರ ನಡೆದಿದೆ' ಎಂದು ಬಿಜೆಪಿಯವರ ಮೇಲೆ ವಾಗ್ದಾಳಿ ನಡೆಸಿ ರಕ್ಷಣೆ ಪಡೆಯುವ ಜಾಯಮಾನ ನನ್ನದ್ದಲ್ಲ.
ಆದರೆ ಸದನದಲ್ಲಿ ಉತ್ತರ ಕೊಡುವಾಗ ತುಸು ಕೋಪ ಪ್ರದರ್ಶನ ಮಾಡಿದ್ದು ನಿಜ. 'ನಿಮ್ಮ ಕಾಲದಲ್ಲಿ ಸಚಿವರು ಸ್ನೇಹಿತನ ಹೆಂಡ್ತಿ ಮೇಲೆ ರೇಪ್ ಮಾಡಿದ್ದರು' ಎಂದೇ ಹೇಳಿದ್ದೆ. ವಾಟ್ ಇಸ್ ರಾಂಗ್ ಇನ್ ಇಟ್? ಅವರ ಕಾಲದಲ್ಲಿ ಇಂಥ ಘಟನೆಯಾಗಿಲ್ಲವೇ?
ನಾವು 5 ವಾರ ಯಶಸ್ವಿಯಾಗಿ ಅಧಿವೇಶನ ನಡೆಸುತ್ತಿದ್ದೇವೆ. ಎಲ್ಲ ಇಲಾಖೆ ಮೇಲೆ ಚರ್ಚೆ ನಡೆಸುವ, ಸರ್ಕಾರದ ವೈಫಲ್ಯವನ್ನು ಟೀಕಿಸುವ ಅವಕಾಶ ಬಿಜೆಪಿಗಿತ್ತು. ಆದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಎಸ್ಎಸ್, ಎಬಿವಿಪಿ, ಬಜರಂಗದಳದವರನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸುತ್ತಿದೆ.
ಎಲ್ಲರಿಗೆ ಅಕ್ಕಿ, ಹಾಲು
ಸರ್ಕಾರದ ಮೇಲೆ ಸಬ್ಸಿಡಿ ಹೊರೆ ಇದೆ. ಹಾಗಂತ ಸೌಲಭ್ಯ ನಿಲ್ಲಿಸಲು ಸಾಧ್ಯವಿಲ್ಲ. ಕಲ್ಯಾಣ ಯೋಜನೆಗಳ ಅನಿವಾರ್ಯವೂ ಇರುತ್ತದೆ. ಪ್ರತಿಪಕ್ಷದವರು, ನಾನು ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿಲ್ಲ. ಬರಿ ಅಕ್ಕಿ ಹಾಲು ಕೊಟ್ಟರು ಎನ್ನುತ್ತಾರೆ. ಇದರ ಹೊರತಾಗಿಯೂ ನಾವು ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನೀರಾವರಿ ಕ್ಷೇತ್ರಕ್ಕೆ ವಾರ್ಷಿಕ ರು. 10 ಸಾವಿರ ಕೋಟಿ ಹೂಡಿಕೆ ಮೂಲ ಸೌಕರ್ಯ ಅಭಿವೃದ್ಧಿಯಲ್ಲವೇ ? ರೈತರ ಬೆಳೆಯನ್ನು ಕೊಂಡುಕೊಳ್ಳುವುದು, ರಸ್ತೆ ನಿರ್ಮಾಣ, ರೈತರಿಗೆ ಸಹಾಯಧನ ಅಭಿವೃದ್ಧಿಯಲ್ಲವೇ ? ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು ಪ್ರತಿಪಕ್ಷದವರಿಗೆ ಕಾಣುವುದಿಲ್ಲ.
ಸರಕಾರ ಸಾಕಷ್ಟು ಕೆಲಸ ಮಾಡಿದೆ. ಆದರೆ ನಾವು ಪ್ರಚಾರ ಗಿಟ್ಟಿಸಲು ಹೋಗಿಲ್ಲ. ಹಿಂದೆ ಬಿಜೆಪಿಯವರು ಐದು ರುಪಾಯಿ ಕೆಲಸ ಮಾಡಿ ಐದು ಸಾವಿರ ರುಪಾಯಿಯಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರು. ನಾವು ಅದಕ್ಕೆ ಉಲ್ಟಾ.
ಅತ್ಯಾಚಾರ: ಸರ್ಕಾರ ಕೈ ಕಟ್ಟಿ ಕುಳಿತಿಲ್ಲ
ಅತ್ಯಾಚಾರ ನಾಚಿಕೆಗೇಡಿನ ಕೃತ್ಯ. ಅದನ್ನು ಸರ್ಕಾರ ಸಹಿಸುವುದಿಲ್ಲ. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಿರ್ಭಯಾ ಪ್ರಕರಣ ನಂತರ ಇಂಥ ವಿಚಾರದಲ್ಲಿ ಜನಜಾಗೃತಿ ಹೆಚ್ಚಿದೆ. ಹಿಂದೆಯೂ ಇದು ನಡೆಯುತ್ತಿತ್ತು. ಆದರೆ ನೊಂದವರು ಮರ್ಯಾದೆಗೆ ಹೆದರಿ ದೂರು ನೀಡಲು ಮುಂದೆ ಬರುತ್ತಿರಲಿಲ್ಲ. 1971ರಲ್ಲಿ ಇಡಿ ದೇಶದಲ್ಲಿ 2081 ಅತ್ಯಾಚಾರ ಪ್ರಕರಣ ನಡೆದಿವೆ. 2013ರಲ್ಲಿ 33700 ಪ್ರಕರಣ ದಾಖಲಾಗಿದೆ. ಸುಮಾರು ಹದಿನೈದು ಪಟ್ಟು ಹೆಚ್ಚಿದೆ. ರಾಜ್ಯದಲ್ಲಿ 2013ರಲ್ಲಿ 1030 ಪ್ರಕರಣ ದಾಖಲಾಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ 953, ಅಪರಿಚಿತರಿಂದ 77 ಅತ್ಯಾಚಾರ ನಡೆದಿದೆ. ಪರಿಚಿತರ ಕತ್ಯದ ತಡೆ ಕಷ್ಟ. ರಾಜ್ಯ ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. ದೂರು ದಾಖಲಾದ ತಕ್ಷಣ ತನಿಖೆ, ಮೂರು ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಕೆ, ಆರು ತಿಂಗಳೊಳಗಾಗಿ ತೀರ್ಪು ಬರುವ ವ್ಯವಸ್ಥೆ ಕಲ್ಪಿಸಿದ್ದೇವೆ. 10 ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಈ ಪೈಕಿ ಮೂರನ್ನು ತ್ವರಿತ ನ್ಯಾಯಾಲಯವಾಗಿ ಪರಿವರ್ತಿಸಿದ್ದೇವೆ. ಅತ್ಯಾಚಾರಿಗಳನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರಲು ಕಾನೂನು ತಿದ್ದುಪಡಿ ಮಾಡುತ್ತಿದ್ದೇವೆ. ಅಗತ್ಯ ಬಿದ್ದರೆ ಸಿಆರ್ಪಿಸಿ ಹಾಗೂ ಐಪಿಸಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.
ಸಂಪುಟ ಪುನಾರಚನೆ ಇಲ್ಲ
ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಅಧಿವೇಶನ ಮುಗಿದ ನಂತರ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಹೈಕಮಾಂಡ್ ಸಲಹೆ, ಸೂಚನೆ ಮೇರೆಗೆ ಮುಂದುವರಿಯುತ್ತೇನೆ. ಯಾವುದೇ ಕಾರಣಕ್ಕೂ ಪುನಾರಚನೆ ಮಾಡುವುದಿಲ್ಲ. ಯಾರನ್ನೂ ಕೈ ಬಿಡುವುದಿಲ್ಲ. ಸಂಪುಟದಲ್ಲಿ ಕೆಲವರು ವಯಸ್ಸಾದವರು, ಆರೋಗ್ಯ ಸರಿ ಇಲ್ಲದವರು ಇರಬಹುದು. ಆದರೆ ಕಾರ್ಯಭಾರಕ್ಕೆ ಅವರಿಂದ ಯಾವುದೇ ತೊಡಕಾಗಿಲ್ಲ.
ಸಂಸ್ಥೆ ಹೊಣೆ
ಮಕ್ಕಳ ಮೇಲಿನ ಅತ್ಯಾಚಾರ ಮೃಗೀಯ, ಅಮಾನವೀಯ. ವಿಬ್ಗ್ಯೊರ್ ಶಾಲೆಯ ಪ್ರಕರಣ ಸಂಬಂಧ ಆರೋಪಿ ಮಾತ್ರವಲ್ಲ, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥನನ್ನು ಬಂಧಿಸಿದ್ದೇವೆ. ಜತೆಗೆ ಆಯಾ ಶಾಲೆಯ ಆಡಳಿತ ಮಂಡಳಿಯನ್ನು ಹೊಣೆ ಮಾಡುತ್ತೇವೆ. ಮಕ್ಕಳು ಶಾಲೆಯಿಂದ ಮನೆಗೆ ಹೋಗುವವರೆಗೂ ಅವರ ರಕ್ಷಣೆ ಜವಾಬ್ದಾರಿ ಆಯಾ ಶಿಕ್ಷಣ ಸಂಸ್ಥೆಗಳದ್ದು. ತಪ್ಪಿದರೆ ಕ್ರಮ ತೆಗೆದುಕೊಳ್ಳುವುದಾಗಿ ಸುತ್ತೋಲೆ ಹೊರಡಿಸಿದ್ದೇವೆ. ಅದೇ ರೀತಿ ನೊಂದು ಬಂದವರಿಗೆ ರಕ್ಷಣೆ ನೀಡದ, ಕಾನೂನು ತಿಳಿವಳಿಕೆ ಇಲ್ಲ ಎಂದು ಸಬೂಬು ನೀಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 166 ಎ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತೇವೆ.