ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆ್ಯಂಬುಲೆನ್ಸ್ ಬರ್ತಿದೆ, ಈಗ್ಲಾದ್ರೂ ದಾರಿಬಿಡಿ

Vishwanath S
Updated On : 25 Jul 2014, 1:25 am

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಪ್ರವೇಶಕ್ಕೆ ಮುನ್ನ 'ಚೆಕ್‌ಪೋಸ್ಟ್‌' ಪಾಸ್ ಆಗುವುದು ಕಡ್ಡಾಯ. ತುರ್ತಾಗಿ ಆ್ಯಂಬುಲೆನ್ಸ್‌ನಲ್ಲಿ ಪ್ರಾಣಹಿಡಿದು ಹೋಗುವ ರೋಗಿಯೂ ಈ 'ಚೆಕ್‌ಪೋಸ್ಟ್‌'ನಲ್ಲಿ ಶುಲ್ಕ ಕಟ್ಟಲೇಬೇಕು. ಆತನ ಜೀವದ 'ಅಮೂಲ್ಯ ಸಮಯ'ವೇ ಇಲ್ಲಿ ಶುಲ್ಕ!
ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ತುರ್ತಾಗಿ ಸಾಗಿರುವ ಆ್ಯಂಬುಲೆನ್ಸ್‌ಗೆ ಆಸ್ಪತ್ರೆ ಸೇರುವುದೇ ಹರಸಾಹಸ ಎನಿಸಿದೆ. ಆಸ್ಪತ್ರೆ ಬಳಿಯ ಮಾರುಕಟ್ಟೆ ರಸ್ತೆಗೆ ಎಷ್ಟೇ ಬೇಗ ಬಂದರೂ, ಅಲ್ಲಿಂದ ಆಸ್ಪತ್ರೆ ಪ್ರವೇಶದ್ವಾರ ತಲುಪುವ ವೇಳೆಗೆ15-20 ನಿಮಿಷ ವ್ಯರ್ಥವಾಗಿರುತ್ತದೆ. ಇದಕ್ಕೆ ಕಾರಣ ವಾಹನ ದಟ್ಟಣೆ.
ಅಷ್ಟೇ ಅಲ್ಲ, ರೋಗಿಯನ್ನು ಮತ್ತೊಂದೆಡೆ ಸಾಗಿಸಲು ಹೊರಡುವ ಆ್ಯಂಬುಲೆನ್ಸ್‌ಗಳಿಗೂ   ವಾಹನಗಳ ದಟ್ಟಣೆ ಅಡ್ಡಿಯಾಗುತ್ತಿದೆ. ಇದು ನಿತ್ಯದ ಗೋಳು.
ಪ್ರವೇಶ ದ್ವಾರ: ಕೆ.ಆರ್. ಮಾರುಕಟ್ಟೆ ಕೋಟೆ ಬಳಿಯ ಪ್ರವೇಶದ್ವಾರ ಹಾಗೂ ವಾಣಿ ವಿಲಾಸ ಆಸ್ಪತ್ರೆ ಇರುವ ಪ್ರವೇಶದ್ವಾರದಲ್ಲಿ ಆಂಬುಲೆನ್ಸ್ ಪ್ರವೇಶಿಸುತ್ತದೆ. ಶವಾಗಾರದ ಬಳಿಯಲ್ಲೂ ದ್ವಾರವಿದ್ದು, ಇದು ಶವಗಳನ್ನು ಕೊಂಡೊಯ್ಯುವ ವಾಹನಗಳಿಗೆ ಮಾತ್ರ ಸೀಮಿತ.
ವಾಹನ ದಟ್ಟಣೆಗೆ ಕಾರಣ: ಆಸ್ಪತ್ರೆಗೆ ಪ್ರತ್ಯೇಕ ರಸ್ತೆಮಾರ್ಗ(ಸರ್ವಿಸ್ ರಸ್ತೆ) ಇಲ್ಲದಿರುವುದು ಆ್ಯಂಬುಲೆನ್ಸ್ ತಡವಾಗಿ ಸಾಗಲು ಕಾರಣ. ಜೊತೆಗೆ ಮಾರುಕಟ್ಟೆಗೆ ಬರುವ ಬಿಎಂಟಿಸಿ ಬಸ್ಸುಗಳು ಪ್ರಯಾಣಿಕರನ್ನು ಆಸ್ಪತ್ರೆ ಗೇಟ್ ಬಳಿಯಲ್ಲೇ ಹತ್ತಿಸಿಕೊಳ್ಳುವುದರಿಂದ ವಾಹನ ದಟ್ಟಣೆ ಸೃಷ್ಟಿಯಾಗುತ್ತಿದೆ. ಇದೇ ರಸ್ತೆ ಬದಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದೂ ತೊಂದರೆಗೆ ಮತ್ತೊಂದು ಕಾರಣ.
ಆಟೋ ನಿಲ್ದಾಣವೂ ಇಲ್ಲೇ:  'ನೋ ಪಾರ್ಕಿಂಗ್‌' ಫಲಕ ಇರುವಲ್ಲೇ ಆಟೋ ನಿಲ್ದಾಣ ಸೃಷ್ಟಿಯಾಗಿದೆ. ವಾಣಿ ವಿಲಾಸ ಆಸ್ಪತ್ರೆ ಭಾಗದಿಂದ ಬರುವ ಆಂಬುಲೆನ್ಸ್‌ಗಳಿಗೆ ಆಟೋಗಳು ಅಡ್ಡವಾಗಿ ನಿಲ್ಲುತ್ತಿವೆ. ಇದರಿಂದಲೂ ಆ್ಯಂಬುಲೆನ್ಸ್ ಸಾಗಿಹೋಗಲು ತೊಂದರೆಯಾಗುತ್ತಿದೆ.
ಬೀದಿ ವ್ಯಾಪಾರಿಗಳಿಂದ ತೊಂದರೆ
ವಿಕ್ಟೋರಿಯಾ ಆಸ್ಪತ್ರೆ ದ್ವಾರದ ಬಳಿ ಬೀದಿವ್ಯಾಪಾರಿಗಳನ್ನು ಬಿಬಿಎಂಪಿ ತೆರವುಗೊಳಿಸಿಲ್ಲ. ಹಣ್ಣು,ಎಳನೀರು, ಬೇಕರಿ ಮಳಿಗೆಗಳಿರುವುದರಿಂದ ಇಲ್ಲಿ ಜನರು ಸೇರುತ್ತಾರೆ. ಇದರಿಂದ ಆಂಬಲೆನ್ಸ್ ಪ್ರವೇಶಕ್ಕೆ ಅಡ್ಡಿಯಾಗುತ್ತಿದೆ. ಈಗಾಗಲೇ ಸರ್ಕಾರ ಸೂಚನೆ ನೀಡಿದ್ದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರನ್ನು ಪ್ರಶ್ನಿಸಿದಾಗ 'ಬೀದಿ ವ್ಯಾಪಾರಿಗಳನ್ನು 1 ತಿಂಗಳಲ್ಲಿ ವರ್ಗಾಯಿಸಲಾಗುವುದು' ಎಂಬ ಭರವಸೆ ನೀಡಿದ್ದಾರೆ.
ಮೂಲಸೌಕರ್ಯವೂ ಇಲ್ಲ
ಆಸ್ಪತ್ರೆ ಮೂಲಸೌಕರ್ಯದಲ್ಲೂ ಕೊರತೆ ಕಾಣುತ್ತಿದೆ. ತುರ್ತುಪರಿಸ್ಥಿತಿಯಲ್ಲಿ ವಿದ್ಯುತ್ ಹೋದರೆ ಜನರೇಟರ್ ವ್ಯವಸ್ಥೆ ಲಭ್ಯವಿಲ್ಲ. ಶಸ್ತ್ರಚಿಕಿತ್ಸೆ, ಎಕ್ಸ್-ರೇ, ತಪಾಸಣೆ ಸಮಯದಲ್ಲಿ ವಿದ್ಯುತ್ ಕೈ ಕೊಟ್ಟ ಸಾಕಷ್ಟು ಉದಾಹರಣೆಗಳಿವೆ. ಸರ್ಕಾರ ಈ ಬಗ್ಗೆ ಅಸಡ್ಡೆ ತೋರಿದೆ. ಕುಡಿಯುವ ನೀರಿಲ್ಲ. ಆವರಣದಲ್ಲಿ ಒಂದೇ ಶೌಚಾಲಯವಿದೆ.
ವಾಹನ ದಟ್ಟಣೆಯಿಂದ ರೋಗಿಯನ್ನು ಒಳಗೆ ಕೊಂಡೊಯ್ಯಲಾಗದೆ, ಕುಟುಂಬದವರ ಬಳಿ ಹೊಡೆತ ತಿಂದ ಘಟನೆಗಳೂ ಇವೆ. ಎಷ್ಟೋ ಬಾರಿ ಆಸ್ಪತ್ರೆ ದ್ವಾರದಲ್ಲಿ ವಾಹನ ದಟ್ಟಣೆಗೆ ಸಿಲುಕಿ ಭಯಗೊಂಡಿದ್ದೆ.
- ಭಾಷಾ, ಖಾಸಗಿ ಆಂಬುಲೆನ್ಸ್ ಚಾಲಕ
ಮಾರುಕಟ್ಟೆ ರಸ್ತೆಯಲ್ಲಿ ದಟ್ಟಣೆಗೆ ಸಿಲುಕಿದರೆ ದ್ವಾರದ ಬಳಿ ಬರಲು 20 ನಿಮಿಷಬೇಕು. ಪ್ರವೇಶದ್ವಾರದ ಬಳಿ ಬಂದರೆ ಬಿಎಂಟಿಸಿ ಬಸ್ಸುಗಳು ಅಡ್ಡವಾಗುತ್ತವೆ. ಆವರಣಕ್ಕೆ ಬಂದರೆ ಆಟೋಗಳು ಅಡ್ಡ ನಿಲ್ಲುತ್ತವೆ.
- ಶ್ರೀನಿವಾಸ್, ಆಸ್ಪತ್ರೆ ಆಂಬುಲೆನ್ಸ್ ಚಾಲಕ
ಮೆಟ್ರೋ ಕಾಮಗಾರಿಯಿಂದ ವಾಹನ ದಟ್ಟಣೆಯಾಗುತ್ತಿಲ್ಲ. ಕಳೆದ 5-6 ವರ್ಷಗಳಿಂದಿರುವ ಸಮಸ್ಯೆ ಬಗ್ಗೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
- ಡಾ.ಕಾಂತರಾಜ್, ಸ್ಥಾನೀಯ ವೈದ್ಯಾಧಿಕಾರಿ

-ಕಾರ್ತಿಕ್ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement