ನೈಸ್ ತನಿಖೆಗೆ ಸದನ ಸಮಿತಿ
ನೈಸ್ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಬಿಜೆಪಿ ಹಾಗೂ ಜೆಡಿಎಸ್ ...
ವಿಧಾನಸಭೆ: ನೈಸ್ ಯೋಜನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂಬ ಬಿಜೆಪಿ ಹಾಗೂ ಜೆಡಿಎಸ್ ಒತ್ತಾಸೆಯಂತೆ ವಿಧಾನಸಭೆ ಸದನ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.
ಮೂಲಸೌಕರ್ಯ ಅಭಿವೃದ್ಧಿಯ ಮಹತ್ವಾಕಾಂಕ್ಷೆ ಇರಿಸಿಕೊಂಡು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈಸ್ ಯೋಜನೆಗೆ ಅನುವು ಮಾಡಿಕೊಡಲಾಗಿತ್ತು. ನಂತರ 1997ರಲ್ಲಿ ಒಪ್ಪಂದವೂ ಆಗಿತ್ತು. ಆದರೆ ಈವರೆಗೆ ಕೇವಲ 45-50 ಕಿ.ಮೀ. ಮಾತ್ರ ರಸ್ತೆ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದನದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಅಭಿಪ್ರಾಯದಂತೆ ಸಮಗ್ರ ತನಿಖೆಗೆ ಸದನ ಸಮಿತಿ ರಚಿಸಲಾಗುತ್ತದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿಧಾನಸಭೆಯಲ್ಲಿ ಗುರುವಾರ ತಿಳಿಸಿದರು.
ಸರ್ಕಾರ ಯಾರ ಕೈಗೊಂಬೆಯೂ ಅಲ್ಲ. ಆದ್ದರಿಂದ ನೈಸ್ ಯೋಜನೆಯನ್ನು ಸದನ ಸಮಿತಿಗೆ ಒಪ್ಪಿಸಲಾಗುತ್ತದೆ ಎಂದರು.
ನಾವು ಖಾಸಗಿ ಹೂಡಿಕೆದಾರರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಅಗತ್ಯ. ಅವರಿಗೆ ಎಲ್ಲ ರೀತಿಯಲ್ಲೂ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ. ಆದರೆ ಕೆಲಸ ಆಗಬೇಕು ಅಷ್ಟೇ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.