ಪಕ್ಷ, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುವ ಜಾತಿ ಸಭೆ ಸಹಿಸುವುದಿಲ್ಲ
ಹೆಚ್ಚಿನ ಸ್ಥಾನಮಾನಕ್ಕೆ ಜಾತಿ ಸಭೆಗಳನ್ನು ನಡೆಸುವುದು ತಪ್ಪಲ್ಲ..
ಹೆಚ್ಚಿನ ಸ್ಥಾನಮಾನಕ್ಕೆ ಜಾತಿ ಸಭೆಗಳನ್ನು ನಡೆಸುವುದು ತಪ್ಪಲ್ಲ. ಅದು ಮೊದಲೂ ಇತ್ತು. ಈಗಲೂ ಇದೆ. ಆದರೆ ಸರಕಾರ ಅಥವಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.
ಅಧಿಕಾರ ಪ್ರಮಾಣಕ್ಕೂ ಒಂದು ಮಿತಿ ಇದೆ. ಅದರ ವ್ಯಾಪ್ತಿಯಲ್ಲಷ್ಟೇ ಹಂಚಿಕೆ ಮಾಡಲು ಸಾಧ್ಯ. ಸಭೆ ನಡೆಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಸರಕಾರ, ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂಥ ಯಾವುದೇ ಚಟುವಟಿಕೆ ನಡೆಸಿದರೆ, ಅದನ್ನು ನೋಡಿ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಅವರು 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅಹಿಂದ ವರ್ಗದ ಕಲ್ಯಾಣಕ್ಕೆ ಸೀಮಿತ. ಸಂಪುಟದಲ್ಲಿ ಹಿಂದುಳಿದ ವರ್ಗದವರಿಗೆ ಮಾತ್ರ ಹೆಚ್ಚಿನ ಪ್ರಾತಿನಿಧ್ಯ. ಸರಕಾರದ ಕಾರ್ಯಕ್ರಮಗಳೂ ಹಿಂದುಳಿದವರ ಕೇಂದ್ರಿತವಾಗುತ್ತಿದೆ. ಇದು ಪಕ್ಷದೊಳಗಿನ ಮೇಲ್ವರ್ಗದ ಮುಖಂಡರಿಗೆ ಸಿಟ್ಟು ತರಿಸಿದೆ. ಹೀಗಾಗಿ ಅವರು ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬ ಆರೋಪಗಳ ಕುರಿತ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಒಟ್ಟಾರೆ ಹೇಳಿದ್ದಿಷ್ಟು: 'ನಾನು ಅಹಿಂದ ನಾಯಕ, ಅಹಿಂದ ಮುಖ್ಯಮಂತ್ರಿ ಎನ್ನುವುದು ವಿರೋಧಿಗಳ ಅಪಪ್ರಚಾರ. ಸಾಮಾಜಿಕ ನ್ಯಾಯ ಸಹಿಸದವರ ಹಲುಬುವಿಕೆ. ಎಲ್ಲ ಜಾತಿಯ ಬಡವರ ಪರ ಇದ್ದೇನೆ. ಮುಂದೆಯೂ ಇರುತ್ತೇನೆ. ನನ್ನ ಸಂಪುಟದಲ್ಲಿ ಬ್ರಾಹ್ಮಣರೂ ಇದ್ದಾರೆ. ಲಿಂಗಾಯತರು, ಒಕ್ಕಲಿಗರು, ಕುರುಬರಿದ್ದಾರೆ. ನಾನಾ ಜಾತಿ, ವರ್ಗದವರೂ ಇದ್ದಾರೆ. ಮಾತನಾಡುವವರು ಅದನ್ನು ಗಮನಿಸಿದರೆ ಆಯಿತು. ಇನ್ನು, ಕಾಂಗ್ರೆಸ್ನ ಜನತಾ ಪರಿವಾರದವರಿಗೆ ಆದ್ಯತೆ ಕೊಟ್ಟಿದ್ದೇನೆ, ಕೊಡುತ್ತಿದ್ದೇನೆ ಎಂಬುದು ತಪ್ಪು. ನನಗಿಂತ ಮೊದಲು ಜನತಾ ಪರಿವಾರದಿಂದ ಇಲ್ಲಿಗೆ ಬಂದವರು ಸಾಕಷ್ಟು ಇದ್ದಾರೆ.
ನನ್ನ ಜತೆ ಬಂದವರ ಪೈಕಿ ಐದು ಮಂದಿಗಷ್ಟೇ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದೇನೆ. ಹೀಗಾಗಿ ಮೂಲ ಕಾಂಗ್ರೆಸಿಗರು, ವಲಸಿಗರು ಎಂಬ ಭೇದ ಸಂಕುಚಿತ ಮನೋಭಾವದ್ದು. ನಾನು ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಮುಂದೆಯೂ ಕಾಣುತ್ತೇನೆ.
ನಾನು ಮುಖ್ಯಮಂತ್ರಿ ಅದ ನಂತರ ದೇವೇಗೌಡರ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತೇನೆ. ಜನತಾ ದಳ ಒಡೆಯಲು ಪ್ರಯತ್ಲಿಸುತ್ತೇನೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ದಳ ವಿಭಜಿಸುವ, ನಿರ್ದಿಷ್ಟ ವ್ಯಕ್ತಿಗಳ ವಿರುದ್ಧ ಹಗೆ ಸಾಧಿಸುವ ಅನಿವಾರ್ಯತೆ ನನಗೇನೂ ಇಲ್ಲ. ದೇವೇಗೌಡರು ನನಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿರಬಹುದು. ಹಾಗೆಂದು ವೈರ ಸಾಧಿಸಬೇಕು ಎಂದೇನೂ ಇಲ್ಲ. ಹಾಗೆ ನೋಡಿದರೆ ನಾನು ಮುಖ್ಯಮಂತ್ರಿ ಆದ ನಂತರ ದಳದ ಹಲವರು ನೀವು ಕರೆದರೆ ಕಾಂಗ್ರೆಸ್ಗೆ ಬಂದು ಬಿಡುತ್ತೇವೆ ಅಂದರು. ಆಗ ನಾನು ಯಾರನ್ನೂ ಕರೆಯುವುದಿಲ್ಲ. ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಅವರಾಗೆ ಬಂದರೆ ಬರಬಹುದು. ಆದರೆ ಅದಕ್ಕಾಗಿ ನಾನು ಯಾರಿಗೂ ಯಾವುದೇ ಆಸೆ, ಆಕಾಂಕ್ಷೆ ತೋರಿಸುವುದಿಲ್ಲ. ಭರವಸೆಯನ್ನೂ ನೀಡುವುದಿಲ್ಲ. ಜನತಾ ದಳ ವಿಭಜನೆ ಮಾಡಿ ನನಗೆ ಆಗಬೇಕಾದ್ದು ಏನೂ ಇಲ್ಲ.
ಹಾಗೆ ನೋಡಿದರೆ ನನಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ದಳದಲ್ಲೂ ಇದ್ದಾರೆ. ಸ್ನೇಹ ಬೇರೆ. ರಾಜಕೀಯ ಬೇರೆ. ಒಡೆದು ಆಳುವ ತತ್ವದಲ್ಲಿ ನನಗೆ ನಂಬಿಕೆ ಇಲ್ಲ. ಇತ್ತೀಚೆಗೆ ದೇನೇಗೌಡರು ಹಾಗೂ ಕುಮಾರಸ್ವಾಮಿ ನನ್ನ ಬಗ್ಗೆ ಹಾಗೂ ಅದೇ ರೀತಿ ನಾನು ಅವರ ಬಗ್ಗೆ ಮೃದುಧೋರಣೆ ತೋರುತ್ತಿದ್ದೇವೆ ಎಂಬುದರಲ್ಲಿ ಯಾವುದೇ ವಿಶೇಷವೂ ಇಲ್ಲ. ಅದಕ್ಕೆ ಕಾರಣಗಳೂ ಇಲ್ಲ. ಪ್ರತಿಪಕ್ಷ ಸ್ಥಾನದಿಂದ ಕುಮಾರಸ್ವಾಮಿ ತಮಗೆ ಸರಿ ಎನಿಸಿದ್ದನ್ನು ವಿಧಾನಸಭೆಯಲ್ಲಿ ಮಾತಾಡಿರಬಹುದು. ಆದರೆ ಅದು ನನ್ನ ಪರ, ನನ್ನ ಸರಕಾರದ ಪರ ಎಂದು ಭಾವಿಸುವ ಅಗತ್ಯವಿಲ್ಲ. ಕಾವೇರಿ ವಿಚಾರಕ್ಕೆ ಒಮ್ಮೆ ದೇವೇಗೌಡರ ಜತೆ ಮಾತಾಡಿದ್ದು ಉಂಟು. ಆಗ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್ ಮತ್ತಿತರರು ಜತೆಯಲ್ಲಿದ್ದರು. ಆ ಮಾತು ಕಾವೇರಿಗೆ ಮಾತ್ರ ಸೀಮಿತ. ಒಂದು ವೇಳೆ ತಮ್ಮ ಜತೆ ಜೆಡಿಎಸ್ ಉತ್ತಮ ಸಂಬಂಧ ಹೊಂದಿದ್ದರೆ ವಿಧಾನ ಪರಿಷತ್ ಸಭಾಪತಿಯಾಗಿ ಬಿಜೆಪಿಯ ಶಂಕರಮೂರ್ತಿ ಮುಂದುವರಿಯುತ್ತಿರಲಿಲ್ಲ, ಉಪಸಭಾಪತಿಯಾಗಿ ಜೆಡಿಎಸ್ನ ಪುಟ್ಟಣ್ಣ ಆಯ್ಕೆ ಆಗುತ್ತಿರಲಿಲ್ಲ. ರಾಜ್ಯಸಭೆ ಚುನಾವಣೆಯಲ್ಲೂ ಇದು ವೇದ್ಯವಾಗಿದೆ. ವಿಷಯಾಧಾರಿತ ಸ್ನೇಹವೇ ಬೇರೆ. ರಾಜಕೀಯ ಸ್ನೇಹವೇ ಬೇರೆ. ನನಗೆ ಮೊದಲನೆಯದರಲ್ಲಿ ಮಾತ್ರ ನಂಬಿಕೆ.
ನಿಮ್ಮ ಕಾಲದಲ್ಲೂ ರಾಜ್ಯದಲ್ಲಿ ಅತ್ಯಾಚಾರ ನಡೆದಿದೆ ಎಂದು ಬಿಜೆಪಿಯವರ ಮೇಲೆ ವಾಗ್ದಾಳಿ ನಡೆಸಿ ರಕ್ಷಣೆ ಪಡೆಯುವ ಜಾಯಮಾನ ನನ್ನದ್ದಲ್ಲ. ಆದರೆ ಸದನದಲ್ಲಿ ಉತ್ತರ ಕೊಡುವಾಗ ನಾನು ತುಸು ಕೋಪ ಪ್ರದರ್ಶನ ಮಾಡಿದ್ದು ನಿಜ. 'ನಿಮ್ಮ ಕಾಲದಲ್ಲಿ ಸಚಿವರು ಸ್ನೇಹಿತನ ಹೆಂಡ್ತಿ ಮೇಲೆ ರೇಪ್ ಮಾಡಿದ್ದರು ಎಂದೇ ಹೇಳಿದ್ದೆ. ವಾಟ್ ಇಸ್ ರಾಂಗ್ ಇನ್ ಇಟ್? ಅವರ ಕಾಲದಲ್ಲಿ ಇಂಥ ಘಟನೆಯಾಗಿಲ್ಲವೇ?
ಈ ಬಿಜೆಪಿಯವರಿಗೆ ಸರ್ಕಾರವನ್ನು ಟೀಕಿಸುವುದಕ್ಕೆ ಬೇರೆ ಯಾವುದೇ ವಿಷಯ ಇಲ್ಲ. ನಾವು 5 ವಾರ ಕಾಲ ಯಶಸ್ವಿಯಾಗಿ ಅಧಿವೇಶನ ನಡೆಸುತ್ತಿದ್ದೇವೆ. ಎಲ್ಲ ಇಲಾಖೆ ಮೇಲೆ ಚರ್ಚೆ ನಡೆಸುವ, ಸರ್ಕಾರದ ವೈಫಲ್ಯವನ್ನು ಟೀಕಿಸುವ ಅವಕಾಶ ಅವರಿಗಿತ್ತು. ಆದರೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿಯವರು ಆರ್ಎಸ್ಎಸ್, ಎಬಿವಿಪಿ, ಭಜರಂಗದಳದವರನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.
ಅತ್ಯಾಚಾರ ನಾಚಿಕೆಗೇಡಿನ ಕೃತ್ಯ. ಅದನ್ನು ಸರ್ಕಾರ ಸಹಿಸುವುದಿಲ್ಲ. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಿರ್ಭಯಾ ಪ್ರಕರಣ ನಂತರ ಇಂಥ ವಿಚಾರದಲ್ಲಿ ಜನಜಾಗೃತಿ ಹೆಚ್ಚಿದೆ. ಹಿಂದೆಯೂ ಇದು ನಡೆಯುತ್ತಿತ್ತು. ಆದರೆ ನೊಂದವರು ಮರ್ಯಾದೆಗೆ ಹೆದರಿ ದೂರು ನೀಡಲು ಮುಂದೆ ಬರುತ್ತಿರಲಿಲ್ಲ. 1971ರಲ್ಲಿ ಇಡಿ ದೇಶದಲ್ಲಿ 2081 ಅತ್ಯಾಚಾರ ಪ್ರಕರಣ ನಡೆದಿದ್ದರೆ, 2013ರಲ್ಲಿ 33700 ಪ್ರಕರಣ ದಾಖಲಾಗಿದೆ. ಸುಮಾರು ಹದಿನೈದು ಪಟ್ಟು ಹೆಚ್ಚಿದೆ. ರಾಜ್ಯದಲ್ಲಿ 2013ರಲ್ಲಿ 1030 ಪ್ರಕರಣ ದಾಖಲಾಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ 953, ಅಪರಿಚಿತರಿಂದ 77 ಅತ್ಯಾಚಾರ ನಡೆದಿದೆ. ಪರಿಚಿತರಿಂದ ನಡೆಯುವ ಇಂಥ ಕತ್ಯ ತಡೆಗಟ್ಟುವುದು ಕಷ್ಟ. ಆದರೆ ರಾಜ್ಯ ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. ದೂರು ದಾಖಲಾದ ತಕ್ಷಣ ತನಿಖೆ ನಡೆಸಬೇಕು, ಮೂರು ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕು. ಆರು ತಿಂಗಳೊಳಗಾಗಿ ತೀರ್ಪು ಬರುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದೇವೆ. 10 ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಈ ಪೈಕಿ ಮೂರನ್ನು ತ್ವರಿತ ನ್ಯಾಯಾಲಯವಾಗಿ ಪರಿವರ್ತಿಸಿದ್ದೇವೆ. ಅಷ್ಟು ಮಾತ್ರವಲ್ಲ ಅತ್ಯಾಚಾರಿಗಳನ್ನು ಗೂಂಡಾ ಕಾಯ್ದೆ ವ್ಯಾಪ್ತಿಗೆ ತರಲು ಕಾನೂನು ತಿದ್ದುಪಡಿ ಮಾಡುತ್ತಿದ್ದೇವೆ. ಅಗತ್ಯ ಬಿದ್ದರೆ ಸಿಆರ್ಪಿಸಿ ಹಾಗೂ ಐಪಿಸಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.
ಸಂಸ್ಥೆ ಹೊಣೆ: ಇನ್ನು ಚಿಕ್ಕಮಕ್ಕಳ ಮೇಲೆ ಅತ್ಯಾಚಾರ ನಡೆಸುವುದು ಮೃಗೀಯ, ಅಮಾನವೀಯ. ವಿಬ್ಗ್ಯೊರ್ ಶಾಲೆಯಲ್ಲಿ ನಡೆದ ಪ್ರಕರಣ ಸಂಬಂಧ ಆರೋಪಿ ಮಾತ್ರವಲ್ಲ, ಶಾಲಾ ಆಡಳಿತ ಮಂಡಳಿ ಮುಖ್ಯಸ್ಥನನ್ನು ಬಂಧಿಸಿದ್ದೇವೆ. ಇದರ ಜತೆಗೆ ಶಾಲೆಯಲ್ಲಿ ನಡೆಯುವ ಪ್ರಕರಣಗಳಲ್ಲಿ ಆಯಾ ಆಡಳಿತ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಮಕ್ಕಳು ಶಾಲೆಯಿಂದ ಮನೆಗೆ ಹೋಗುವವರೆಗೂ ಅವರ ರಕ್ಷಣೆ ಜವಾಬ್ದಾರಿ ಆಯಾ ಶಿಕ್ಷಣ ಸಂಸ್ಥೆಗಳ ಮೇಲೆ ಇರುತ್ತದೆ. ತಪ್ಪಿದರೆ ಕ್ರಮ ತೆಗೆದುಕೊಳ್ಳುವುದಾಗಿ ಸುತ್ತೋಲೆ ಹೊರಡಿಸಿದ್ದೇವೆ. ಅದೇ ರೀತಿ ನೊಂದು ಬಂದವರಿಗೆ ರಕ್ಷಣೆ ನೀಡದ, ಕಾನೂನು ತಿಳುವಳಿಕೆ ಇಲ್ಲ ಎಂದು ಸಬೂಬು ನೀಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 166 ಎ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತೇವೆ.
ನಾನು ತೂಕಡಿಸುವುದು ದೊಡ್ಡ ಅಪರಾಧವೇ ?
ಈ ಬಿಜೆಪಿಯವರು ನಾನು ಆಗಾಗ ತೂಕಡಿಸುವುದನ್ನೇ ದೊಡ್ಡ ಅಪರಾಧ ಎಂದು ಬಿಂಬಿಸಲು ಹೊರಟಿದ್ದಾರೆ. ನಾನು ಆಗಾಗ ತೂಕಡಿಸುವುದರಿಂದ ರಾಜ್ಯದ ಆಡಳಿತಕ್ಕೆ ಏನಾದರೂ ಹಾನಿಯಾಗುತ್ತದೆಯೇ ? ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಅಬಸ್ಟ್ರಕ್ಟಿವ್ ಸ್ಲೀಪ್ ಅಪ್ನೀಯಾ ಎಂಬ ಉಸಿರಾಟದ ಸಮಸ್ಯೆ ಇದೆ. ಆಮ್ಲಜನಕದ ಕೊರತೆಯಿಂದ ನನಗೆ ರಾತ್ರಿ ನಿದ್ದೆ ಮಾಡುವುದಕ್ಕೆ ಸ್ವಲ್ಪ ತೊಂದರೆಯಾಗುತ್ತದೆ. ಹೀಗಾಗಿ ಹಗಲು ಸ್ವಲ್ಪ ತೂಕಡಿಕೆ ಬರುತ್ತದೆ. ಇದರರ್ಥ ನಾನು ದಿನಕ್ಕೆ 24 ಗಂಟೆ ನಿದ್ದೆ ಮಾಡುತ್ತೇನೆ ಎಂದೇ ? ನಾನು ದಿನಕ್ಕೆ 12ರಿಂದ 15 ಗಂಟೆ ಕೆಲಸ ಮಾಡುತ್ತೇನೆ. ಬೆಳಗ್ಗೆ 6ರಿಂದ ರಾತ್ರಿ 11ರ ವರೆಗೂ ನನಗೆ ಬಿಡುವಿಲ್ಲದ ಕೆಲಸವಿದೆ. ಟಿವಿ ನೋಡುವುದಕ್ಕೂ ಬಿಡುವಿಲ್ಲ. ಬೆಳಗ್ಗೆ ಅರ್ಧ ಗಂಟೆ ಪತ್ರಿಕೆ ಓದುತ್ತೇನೆ. ಅದಾದ ನಂತರ ಸರ್ಕಾರಿ ಕೆಲಸಕ್ಕೆ ಸಮಯ ಮೀಸಲಿಟ್ಟಿದ್ದೇನೆ. ನಾನು ತೂಕಡಿಸುವುದೇನು ದೊಡ್ಡ ಅಪರಾಧವಾ?
ಎಲ್ಲ ಬಡವರಿಗೆ ಅಕ್ಕಿ, ಹಾಲು ಕೊಟ್ಟಿದ್ದೇನೆ.
ಸರ್ಕಾರದ ಮೇಲೆ ಸಬ್ಸಿಡಿ ಹೊರೆ ಇದೆ. ಹಾಗಂತ ಅದನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಕಲ್ಯಾಣ ಯೋಜನೆಗಳ ಅನಿವಾರ್ಯತೆಯೂ ಇರುತ್ತದೆ. ಪ್ರತಿಪಕ್ಷದವರು, ನಾನು ಅಧಿಕಾರಕ್ಕೆ ಬಂದ ಮೇಲೆ ಏನು ಮಾಡಿಲ್ಲ. ಬರಿ ಅಕ್ಕಿ ಹಾಲು ಕೊಟ್ಟರು ಎನ್ನುತ್ತಾರೆ. ಇದರ ಹೊರತಾಗಿಯೂ ನಾವು ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿಯವರ ರೀತಿ ನಮಗೆ ಪ್ರಚಾರ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ನೀರಾವರಿ ಕ್ಷೇತ್ರಕ್ಕೆ ವಾರ್ಷಿಕ ರು. 10 ಸಾವಿರ ಕೋಟಿ ಹೂಡಿಕೆ ಮಾಡುವುದು ಮೂಲ ಸೌಕರ್ಯ ಅಭಿವೃದ್ಧಿಯಲ್ಲವೇ ? ರೈತರ ಬೆಳೆಯನ್ನು ಕೊಂಡುಕೊಳ್ಳುವುದು, ರಸ್ತೆ ನಿರ್ಮಾಣ, ರೈತರಿಗೆ ಸಹಾಯಧನ ನೀಡುವಿಕೆ ಅಭಿವೃದ್ಧಿಯಲ್ಲವೇ ? ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು ಪ್ರತಿಪಕ್ಷದವರಿಗೆ ಕಾಣುವುದಿಲ್ಲ.
ಅತ್ಯಾಚಾರ ನಾಚಿಕೆಗೇಡಿನ ಕೃತ್ಯ. ಅದನ್ನು ಸರ್ಕಾರ ಸಹಿಸುವುದಿಲ್ಲ. ಇತ್ತೀಚೆಗೆ ಇಂಥ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಿರ್ಭಯಾ ಪ್ರಕರಣ ನಂತರ ಇಂಥ ವಿಚಾರದಲ್ಲಿ ಜನಜಾಗೃತಿ ಹೆಚ್ಚಿದೆ. ಹಿಂದೆಯೂ ಇದು ನಡೆಯುತ್ತಿತ್ತು. ಆದರೆ ನೊಂದವರು ಮರ್ಯಾದೆಗೆ ಹೆದರಿ ದೂರು ನೀಡಲು ಮುಂದೆ ಬರುತ್ತಿರಲಿಲ್ಲ. ರಾಜ್ಯದಲ್ಲಿ 2013ರಲ್ಲಿ 1030 ಪ್ರಕರಣ ದಾಖಲಾಗಿದ್ದು, ಸಂಬಂಧಿಕರು ಹಾಗೂ ಪರಿಚಿತರಿಂದ 953, ಅಪರಿಚಿತರಿಂದ 77 ಅತ್ಯಾಚಾರ ನಡೆದಿದೆ.
-ಪಿ. ತ್ಯಾಗರಾಜ್/ರಾಘವೇಂದ್ರ ಭಟ್