ಬೈನಾ: 'ಕನ್ನಡಪ್ರಭ' ವರದಿಗೆ ಪ್ರಶಂಸೆ
ಕಾರವಾರ: ಬೈನಾ ಕನ್ನಡಿಗ ನಿರಾಶ್ರಿತರ ಪರ ನಿರಂತರವಾಗಿ ವರದಿ ಪ್ರಕಟಿಸಿ ಕರ್ನಾಟಕ ಸರ್ಕಾರದ ಕಣ್ಣು ತೆರೆಸುವಲ್ಲಿ ಮಹತ್ತರ ಪಾತ್ರ ವಹಿಸಿದ 'ಕನ್ನಡಪ್ರಭ' ಪತ್ರಿಕೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜು. 11ರಂದು ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಲಾಗಿತ್ತು. ಅಂದಿನಿಂದ ಬೈನಾ ನಿರಾಶ್ರಿತರಿಗೆ ಕಾಯಂ ಪುನರ್ವಸತಿ ಕಲ್ಪಿಸುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬುಧವಾರ ಭರವಸೆ ನೀಡುವ ತನಕ 'ಕನ್ನಡಪ್ರಭ' ನಿರಾಶ್ರಿತರ ಧ್ವನಿಯಾಗಿ ನಿಂತಿತು. ಗೋವಾ ಪೊಲೀಸರ ದಬ್ಬಾಳಿಕೆ, ನಿರಾಶ್ರಿತರು ಎದುರಿಸುತ್ತಿರುವ ಸಂಕಷ್ಟವನ್ನು ಪ್ರತಿಬಿಂಬಿಸಿತು ಎಂದು ಗೋವಾ ಕನ್ನಡ ಸಂಘಟನೆಗಳ ಮುಖಂಡರು, ನಿರಾಶ್ರಿತರು 'ಕನ್ನಡಪ್ರಭ'ವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಬೈನಾ ನಿರಾಶ್ರಿತರ ಸಮಸ್ಯೆ ಬಗೆಹರಿಸುವಲ್ಲಿ 'ಕನ್ನಡಪ್ರಭ'ದ ಪಾತ್ರ ಮುಖ್ಯವಾದುದು. ಪ್ರತಿದಿನ ನಿರಾಶ್ರಿತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಪ್ರಕಟಿಸಿ ಕರ್ನಾಟಕ ಸರ್ಕಾರದ ಗಮನ ಸೆಳೆದು ನಿರಾಶ್ರಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಬಹು ದೊಡ್ಡ ಕೊಡುಗೆ ನೀಡಿದೆ. ಇದಕ್ಕಾಗಿ ನಿರಾಶ್ರಿತರು, ಮುಖಂಡರು 'ಕನ್ನಡಪ್ರಭ'ಕ್ಕೆ ಋಣಿಯಾಗಿದ್ದೇವೆ.
- ಸಿದ್ದಣ್ಣ ಮೇಟಿ, ಅಖಿಲ ಗೋವಾ ಕನ್ನಡ ಸಂಘದ ಅಧ್ಯಕ್ಷ
ಆರಂಭದಿಂದ ಕೊನೆ ತನಕ ನಮ್ಮೊಂದಿಗೆ ನಿಂತಿದ್ದು 'ಕನ್ನಡಪ್ರಭ'. ಕರ್ನಾಟಕ ಸರ್ಕಾರ ಪ್ರತಿನಿಧಿಯನ್ನು ಕಳುಹಿಸಿಕೊಡುವಂತಾಗಲು 'ಕನ್ನಡದಪ್ರಭ' ವರದಿಯೇ ಪ್ರಮುಖಪಾತ್ರ ವಹಿಸಿದೆ. ಪತ್ರಿಕೆಗೆ ಧನ್ಯವಾದಗಳು.
- ಯಮನಪ್ಪ, ನಿರಾಶ್ರಿತ
'ಕನ್ನಡಪ್ರಭ' ಮೂಲಕ ಗೋವಾ ಕನ್ನಡಿಗರು ಬೀದಿಗೆ ಬಿದ್ದಿರುವ ವಿಷಯ ತಿಳಿದುಬಂತು. ಬೈನಾ ಕನ್ನಡಿಗರ ಪರಿಸ್ಥಿತಿ ಬಗ್ಗೆ ಜಾಗೃತಿ ಮೂಡಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ತನಕ 'ಕನ್ನಡಪ್ರಭ' ನಿರಂತರವಾಗಿ ಹೋರಾಟ ನಡೆಸಿದ್ದು ಶ್ಲಾಘನೀಯ ಸಂಗತಿ.
- ಭೀಮಾಶಂಕರ ಪಾಟೀಲ್, ಅಧ್ಯಕ್ಷರು, ಕರ್ನಾಟಕ ನವ ನಿರ್ಮಾಣ ಸೇನೆ