ಮಹಿಳಾ ಎಸ್ಐ ಕೆನ್ನೆಗೆ ಬಿಗಿದ ಮಹಿಳೆ!
ಮಂಗಳೂರು: ಹಂಪನಕಟ್ಟೆ ಸಿಗ್ನಲ್ ಬಳಿ ಸಂಚಾರಿ ಮಹಿಳಾ ಎಸ್ಐಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಮಹಿಳೆ ಕಿಂಚಲ್ ಗಾಂಧಿ ಗುಜರಾತಿ ಮೂಲದವರಾಗಿದ್ದು, ಕೇರಳ ಪಯ್ಯನೂರು ಮಹಾತ್ಮ ಗಾಂಧಿ ಕಾಲೇಜ್ನಲ್ಲಿ ಉಪನ್ಯಾಸಕಿಯಾಗಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ವೇಳೆಗೆ ಹಂಪನಕಟ್ಟೆ ವೃತ್ತದಲ್ಲಿ ಹೆಲ್ಮೆಟ್ ಹಾಕದೆ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆಗೆ ವೃತ್ತದಲ್ಲಿ ಒಮ್ನಿ ವಾಹನ ಸವರಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಎರಡು ವಾಹನಗಳನ್ನು ನಿಲ್ಲಿಸಿದ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಎಸ್ಐ ಭವ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಒಮ್ನಿ ವಾಹನವನ್ನು ತೆರಳುವಂತೆ ಹೇಳಿ, ಕಿಂಚಲ್ ಗಾಂಧಿಯನ್ನು ನಿಲ್ಲಿಸಿ ಹೆಲ್ಮೆಟ್ ಹಾಕದಿರುವ ಕುರಿತು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಿಂಚಲ್ ಏರು ದನಿಯಲ್ಲಿ ಮಾತನಾಡಿದ್ದಾರೆ. ಅವರನ್ನು ಬಿಟ್ಟು ನನ್ನನ್ನು ನಿಲ್ಲಿಸಿದ್ದ್ಯಾಕೆ ಎಂದು ಕೇಳಿದ್ದಾರೆ. ದಂಡ ವಿಧಿಸಿದ್ದರಿಂದ ಸಿಟ್ಟಿಗೆದ್ದ ಕಿಂಚಲ್ ಎಸ್ಐ ಕೆನ್ನೆಗೆ ಬಾರಿಸಿದ್ದಾರೆ.
ಇದರಿಂದ ಅವಮಾನಿತರಾದ ಎಸ್ಐ ಪೊಲೀಸ್ ವಾಹನದಲ್ಲಿ ತೆರಳಿದ್ದಾರೆ. ಕಿಂಚಲ್ಳನ್ನು ಮಹಿಳಾ ಪೊಲೀಸರು ಬಂಧಿಸಿ ವಾಹನದೊಳಕ್ಕೆ ಒಯ್ಯುವ ವೇಳೆ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಈಕೆಯನ್ನು ಬೆಂಬಲಿಸಿದ್ದಾರೆ. 'ನನ್ನ ಗಂಡ ಬರುತ್ತಿದ್ದಾರೆ, ಅಲ್ಲಿವರೆಗೆ ನಾನು ಹೋಗುವುದಿಲ್ಲ' ಎಂದು ಕಿಂಚಲ್ ಗಾಂಧಿ ಬೊಬ್ಬೆ ಹೊಡೆದಿದ್ದಾಳೆ. ಬಳಿಕ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದೊಯ್ದು ಕೇಸ್ ಹಾಕಿದ ಬಳಿಕ ಬಿಟ್ಟಿದ್ದಾರೆ.