ಕಸಬ್ನಿಂದ ಕಚೇರಿಗಳು ಮುಕ್ತ
ಕಾರವಾರ; ಈವರೆಗೆ ಗೋದಾಮಿನಂತಿದ್ದ ಕೇಂದ್ರ ಸರ್ಕಾರಿ ಕಚೇರಿಗಳು ಮೈ ಕೊಡವಿಕೊಳ್ಳುತ್ತಿವೆ. ಹರಕು ಮುರುಕು ವಸ್ತುಗಳು, ಕಸ ಮಸ ಮಾಯವಾಗುತ್ತಿವೆ, ಜನ ಸ್ನೇಹಿಯಾಗಿ ಪರಿವರ್ತನೆಗೊಳ್ಳುತ್ತಿವೆ.
ಹೌದು. ಇದು ನಮೋ ಎಫೆಕ್ಟ್!
ಪ್ರಧಾನಿ ನರೇಂದ್ರ ಮೋದಿ ಕಟ್ಟಪ್ಪಣೆಯಂತೆ ಕೇಂದ್ರ ಸರ್ಕಾರಿ ಕಚೇರಿಗಳ ಆಧುನೀಕರಣಕ್ಕೆ ಈಗ ಚಾಲನೆ ದೊರೆತಿದೆ. ಸರ್ಕಾರಿ ಕಚೇರಿಗಳಲ್ಲಿ 'ಕ್ಲೀನ್ ಅಪ್ ಡ್ರೈವ್' ಹಮ್ಮಿಕೊಳ್ಳುವಂತೆ ಮೋದಿ ನೀಡಿರುವ ಆದೇಶ ದೇಶದಾದ್ಯಂತ ಇರುವ ಕೇಂದ್ರದ ಎಲ್ಲ ಕಚೇರಿಗಳಲ್ಲಿ ಗೋಚರಿಸಲಾರಂಭಿಸಿದೆ.
ಈವರೆಗೆ ಸಾವುದೇ ಸರಕಾರಿ ಕಚೇರಿಗೆ ಕಾಲಿಟ್ಟರೆ ಗೋದಾಮಿನಂತೆ ಭಾಸವಾಗುತ್ತಿತ್ತು. ದೆಹಲಿಯ ಸಚಿವಾಲಯಗಳೂ ಇದಕ್ಕೆ ಹೊರತಾಗಿರಲಿಲ್ಲ. ಅಧಿಕಾರ ಸ್ವೀಕರಿಸುತ್ತದ್ದಂತೆ ಈ ಸಂಬಂಧ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದ ಮೋದಿ, 'ಕ್ಲೀನ್ ಅಪ್' ಅಭಿಯಾನ ಆರಂಭಿಸುವಂತೆ ಕಟ್ಟಪ್ಪಣೆ ಮಾಡಿದ್ದರು. ಪರಿಣಾಮ ಈಗ ವಾಣಿಜ್ಯ ತೆರಿಗೆ ಇಲಾಖೆ, ಅಂಚೆ ಕಚೇರಿ, ಕಸ್ಟಮ್ಸ್, ಕೇಂದ್ರೀಯ ಸಾಗರ ಮತ್ಸ್ಯ ಸಂಶೋಧನಾ ಸಂಸ್ಥೆ... ಹೀಗೆ ಕೇಂದ್ರ ಸರ್ಕಾರಿ ಕಚೇರಿಗಳು ಆಧುನೀಕರಣದತ್ತ ವಾಲುತ್ತಿವೆ.
ಕಡತ ವಿಲೇವಾರಿ: ಶತಮಾನದ ಕಡತಗಳು ಈಗ ಗಣಕೀಕೃತಗೊಳ್ಳಲಾರಂಭಿಸಿವೆ. ಅನವಶ್ಯಕ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಕಚೇರಿ ಎದುರು ಜೀರ್ಣಾವಸ್ಥೆಯಲ್ಲಿ ನಿಂತಿರುವ ವಾಹನಗಳನ್ನು ಗುಜರಿಗೆ ಹಾಕಲು ಸಿದ್ಧತೆ ನಡೆದಿದೆ. ಹರಿದ ಭಿತ್ತಿಪತ್ರಗಳು ಹಾಗೂ ಪೋಸ್ಟರ್ಗಳನ್ನು ಕಿತ್ತು ಹಾಕಲಾಗುತ್ತಿದೆ. ಹರುಕು-ಮುರುಕು ಕುರ್ಚಿ ಹಾಗೂ ಟೇಬಲ್ಗಳನ್ನು ಬದಲಾಯಿಸುವ ಸಿದ್ಧತೆ ನಡೆದಿದೆ. ಆವರಣಗಳಲ್ಲಿ ತುಂಬಿರುವ ಕಸ, ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದೆ.
ಹಳೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಯಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಆಸನಗಳನ್ನು ಒದಗಿಸುವುದು, ಫಲಕಗಳನ್ನು ಅಳವಡಿಸುವುದು, ಕುಡಿಯುವ ನೀರು ಲಭ್ಯವಾಗುವಂತೆ ಮಾಡಲು ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.
ಸ್ವಚ್ಛತಾ ಅಭಿಯಾನ: ಪ್ರತಿ ಕಚೇರಿಗೂ ಮೇಲಧಿಕಾರಿಗಳಿಂದ ಸುತ್ತೋಲೆ ಬಂದಿದೆ. ಅಲ್ಲದೆ, ತಿಂಗಳಿಗೊಮ್ಮೆ ಪರಿಶೀಲನೆಗೆ ಮೇಲಧಿಕಾರಿಗಳು ಆಗಮಿಸಲಿದ್ದಾರೆ. ಕಚೇರಿಯನ್ನು ಸ್ವಚ್ಛಗೊಳಿಸಲು ಕೈಗೊಂಡ ಕ್ರಮದ ಬಗ್ಗೆ ಪ್ರತಿ ಕಚೇರಿ ಛಾಯಾಯಾಚಿತ್ರ ಹಾಗೂ ವಿವರ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಇದರಿಂದಾಗಿ ಜಿಲ್ಲಾ ಮಟ್ಟದಲ್ಲಿರುವ ಅಧಿಕಾರಿಗಳು ಗಡಿಬಿಡಿಯಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಪ್ರಧಾನಿ ಮೋದಿ ಸೂಚನೆ ಹಿನ್ನೆಲೆಯಲ್ಲಿ ಕಚೇರಿ ಸ್ವಚ್ಛಗೊಳಿಸುವಿಕೆಯೂ ಆರಂಭವಾಗಿದ್ದು, ಈಗಾಗಲೆ ಶೇ. 90 ಕೆಲಸ ಮುಕ್ತಾಯವಾಗಿದೆ. ಸದ್ಯದಲ್ಲೇ ಕಚೇರಿಗೆ ಹೊಸ ಕಳೆ ಬರಲಿದೆ. ಕಚೇರಿ ನಮ್ಮ ಮನೆಯಂತೆ ಸ್ವಚ್ಛವಾಗಿ ಗ್ರಾಹಕ ಸ್ನೇಹಿಯಾಗಿ ಪರಿವರ್ತನೆಗೊಳ್ಳಲಿದೆ.
- ಬಿ.ವಿ. ಕುರಳೇಕರ,
ಸೂಪರಿಟೆಂಡ್ ಆಫ್ ಪೋಸ್ಟ್
-ವಸಂತಕುಮಾರ್ ಕತಗಾಲ