ಜಯಾ ಗರಂ; ಅಣ್ಣ-ತಂಗಿ ಮೇಲೆ ಕೇಸು
ಅಂತೂ ತನ್ನ ಸೋದರಿ ಹಾಗೂ ಅಣ್ಣನ ಕೂಗು ತಮಿಳುನಾಡು ಸಿಎಂ....
ಬೆಂಗಳೂರು: ಅಂತೂ ತನ್ನ ಸೋದರಿ ಹಾಗೂ ಅಣ್ಣನ ಕೂಗು ತಮಿಳುನಾಡು ಸಿಎಂ ಜಯಲಲಿತಾ ಅವರ ಕಿವಿಗೆ ಬಿದ್ದಿದೆ. ಇದರ ಪರಿಣಾಮ ಅಣ್ಣ, ತಂಗಿ ಸಿಎಂ ಪಾಲಿಗೆ ಕ್ರಿಮಿನಲ್ಗಳಾಗಿದ್ದಾರೆ!
ಮುಖ್ಯಮಂತ್ರಿ ಜಯಲಲಿತಾ ಸ್ವಂತ ಸೋದರಿ ಶೈಲಜಾ ಹಾಗೂ ಅಣ್ಣ ವಾಸುದೇವನ್ ಅವರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಸಿಎಂ ಕುಟುಂಬದ ಬಗ್ಗೆ ವರದಿ ಮಾಡಿದ ತಮಿಳಿನ 'ಜ್ಯೂನಿಯರ್ ವಿಕಟನ್' ಪತ್ರಿಕೆಯ ವರದಿಗಾರ ಹಾಗೂ ಸಂಪಾದಕರ ಮೇಲೂ ಕ್ರಿಮಿನಲ್ ಕೇಸು ದಾಖಲಿಸಿರುವ ಅಮ್ಮ, ತಮ್ಮ ಕುಟುಂಬ ಸದಸ್ಯರನ್ನೇ ಕಟಕಟೆಯಲ್ಲಿ ನಿಲ್ಲಿಸಲು ಹೊರಟಿದ್ದಾರೆ.
ಸಂಚಲನ ಮೂಡಿಸಿದ ವರದಿ: ಜಯಲಲಿತಾರ ಸೋದರಿ ಶೈಲಜಾ, ಕಡುಬಡತನದಲ್ಲಿ ಬೆಂಗಳೂರಿನಲ್ಲೇ ವಾಸಿಸುತ್ತಿರುವ ಬಗ್ಗೆ 'ಕನ್ನಡಪ್ರಭ' ಮೊದಲು ಸುದ್ದಿ ಮಾಡಿತು. ನಂತರ ಖಾಸಗಿ ವಾಹಿನಿಗಳೂ ಸಿಎಂ ಸೋದರಿಯ ಕಥೆ ಅನಾವರಣಗೊಳಿಸಿದವು. 'ಅಮ್ಮ'ನ ಅಣ್ಣ ವಾಸುದೇವನ್ ಅವರೇ 'ಕನ್ನಡಪ್ರಭ' ಕಚೇರಿಗೆ ಕರೆ ಮಾಡಿ ತಮ್ಮ ನೋವು ತೋಡಿಕೊಂಡರು. ಪತ್ರಿಕೆಯ ವರದಿ ಶೈಲಜಾ ಹಾಗೂ ವಾಸುದೇವನ್ ಅವರನ್ನು ಒಂದು ಮಾಡಿತು. ವಾಸುದೇವನ್ ಅವರು ಜಯಲಲಿತಾರ ತಂದೆ ಜಯರಾಮನ್ರ ಮೊದಲ ಪತ್ನಿ ಜಯಮ್ಮಾಳ್ ಪುತ್ರ. ಜಯಲಲಿತಾ ತಾಯಿ ಸಂಧ್ಯಾ ಜಯರಾಮನ್ರಿಗೆ ಎರಡನೇ ಪತ್ನಿ. ಸಂಧ್ಯಾ ತಮ್ಮ ಪುತ್ರಿ ಜಯಲಲಿತಾ ಜೊತೆ ಚೆನ್ನೈಗೆ ತೆರಳುವ ಮುನ್ನ ಜಯಮ್ಮಾಳ್ರ ಆಸ್ತಿ ಮಾರಿಕೊಂಡು ಹೋದರು. ವಾಸುದೇವನ್ ಕೋರ್ಟ್ ಮೊರೆ ಹೋಗಿದ್ದು, ಕಾನೂನು ಸಮರ ಮಾಡುತ್ತಿದ್ದಾರೆ. ಈ ಮಾಹಿತಿಯನ್ನು ವಾಸುದೇವನ್ ಅವರೇ ಪತ್ರಿಕೆ ಜೊತೆ ಹೇಳಿಕೊಂಡಿದ್ದರು.
ವರದಿ ಕಂಡು ಸಿಟ್ಟಾದ ಅಮ್ಮ
ಪತ್ರಿಕೆಯಲ್ಲಿ ಸಿಎಂ ಜಯಲಲಿತಾ ಅವರ ಕುಟುಂಬದ ಬಗ್ಗೆ ಬಂದ ಸುದ್ದಿಯೇ ತಮಿಳಿನ ಜ್ಯೂನಿಯರ್ ವಿಕಟನ್ ಪತ್ರಿಕೆಯಲ್ಲಿ ಪ್ರತಿಧ್ವನಿಸಿದೆ. ಈ ಪತ್ರಿಕೆ ಶೈಲಜಾ ಹಾಗೂ ವಾಸುದೇವನ್ರ ಕುರಿತು ಮುಖಪುಟ ವರದಿ ಪ್ರಟಿಸಿತು. ಸುದ್ದಿ ಪ್ರಕಟಗೊಂಡ ಕೂಡಲೇ ಸಿಟ್ಟಾದ ಸಿಎಂ, ಜ್ಯೂನಿಯರ್ ವಿಕಟನ್ ಪತ್ರಿಕೆಯ ಸಂಪಾದಕ, ವರದಿಗಾರ, ಪ್ರಕಾಶಕ ಹಾಗೂ ಶೈಲಜಾ, ವಾಸುದೇವನ್ ಅವರ ಮೇಲೆ ಕ್ರಿಮಿನಲ್ ಕೇಸು ಹೂಡಿದ್ದಾರೆ.
'ತಮ್ಮ ಬಗ್ಗೆ ಬರೆದವರ ಮೇಲೆ ಕೇಸು ಹಾಕಿ ಜೈಲಿಗೆ ಕಳುಹಿಸುವುದು ಜಯಲಲಿತಾರಿಗೆ ಹೊಸದಲ್ಲ. ತುಂಬಾ ವರ್ಷ ಹಿಂದೆಯೇ ನಾನು ತಮಿಳುನಾಡಿನಲ್ಲೇ ಪತ್ರಿಕಾಗೋಷ್ಠಿ ಮಾಡಿ ನಮ್ಮ ಕುಟುಂಬದ ಮಾಹಿತಿ ನೀಡಿದೆ. ಅದನ್ನು ನಕ್ಕೀರನ್ ಪತ್ರಿಕೆ ಸುದ್ದಿ ಮಾಡಿತು. ಆಗ ಆ ಪತ್ರಿಕೆ ಕಚೇರಿ ಮೇಲೆ ದಾಳಿ ಅವರನ್ನೂ ಜೈಲಿಗೆ ಕಳುಹಿಸಿದ ಖ್ಯಾತಿ ತಮಿಳುನಾಡು ಸಿಎಂಗೆ ಸಲ್ಲುತ್ತದೆ. ಈಗ ನನ್ನ ಮತ್ತು ಶೈಲಜಾರ ಮೇಲೆ ಕೇಸು ಹಾಕಿದ್ದಾರೆ. ಈ ವಯಸ್ಸಿನಲ್ಲಿ ಅವರ ಎದುರು ನಿಂತು ಹೋರಾಡುವ ಶಕ್ತಿ ನನಗಿಲ್ಲ. ಆದರೂ ನನಗೆ ನ್ಯಾಯ ಬೇಕು. ಸಮನ್ಸ್ ಬಂದ ಮೇಲೆ ಈ ಬಗ್ಗೆ ನಿರ್ಧರಿಸುತ್ತೇನೆ' ಎಂದು ವಾಸುದೇವನ್ 'ಕನ್ನಡಪ್ರಭ' ಪತ್ರಿಕೆಗೆ ತಿಳಿಸಿದ್ದಾರೆ.
ನಾನು ಮತ್ತು ಜಯಲಲಿತಾ ಒಂದೇ ತಾಯಿ ಮಕ್ಕಳು ಅಲ್ಲದಿದ್ದರೂ ಒಂದೇ ತಂದೆಯ ಮಕ್ಕಳು. ನಮ್ಮ ಆಸ್ತಿ ಮಾರಿಕೊಂಡು ಚೆನ್ನೈಗೆ ಹೋಗಿದ್ದು ಜಯಲಲಿತಾರ ಅಮ್ಮ ಸಂಧ್ಯಾ. ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು. ಆದರೆ, ಅವರು ನನ್ನ ಮೇಲೆಯೇ ಕ್ರಿಮಿನಲ್ ಕೇಸು ಹಾಕಿದ್ದಾರೆ. ಕ್ರಿಮಿನಲ್ ಕೇಸು ಹಾಕಿಸಿಕೊಳ್ಳುವಂಥ ತಪ್ಪು ನಾನೇನು ಮಾಡಿದ್ದೇನೆ?
- ವಾಸುದೇವನ್
ನನ್ನ ವಿರುದ್ಧ ಏನಾದರೂ ಮಾಡಿಕೊಳ್ಳಲಿ. ಆದರೆ, ನನ್ನ ಅಣ್ಣ ಈ ವಯಸ್ಸಿನಲ್ಲಿ ಕ್ರಿಮಿನಲ್ ಅನ್ನಿಸಿಕೊಳ್ಳಬೇಕಾಯಿತು ನೋಡಿ. ನಾವು ಒಂದೇ ತಾಯಿ ಮಕ್ಕಳು ಅಲ್ಲದಿರಬಹುದು. ಆದರೆ, ತಂದೆ ಒಬ್ಬರೇ. ಇದನ್ನು ಅಕ್ಕ ಜಯಲಲಿತಾ ಅರ್ಥ ಮಾಡಿಕೊಳ್ಳಲಿ.
- ಶೈಲಜಾ
ನಮ್ಮ ಪತ್ರಿಕೆಯ ಮೇಲೆಯೂ ಕೇಸು ಹಾಕಿದ್ದಾರೆ. ಒಟ್ಟು ಐದು ಮಂದಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಎರಡೂ ಪ್ರಕರಣಗಳನ್ನು ಹಾಕಿದ್ದಾರೆ.
- ರಮೇಶ್, ಜ್ಯೂನಿಯರ್ ವಿಕಟನ್ ವರದಿಗಾರ
ಡಿಎನ್ಎ ಪರೀಕ್ಷೆ ಸಿದ್ಧ
ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ತಿಳಿದಿರಲಿಲ್ಲ. ಯಾವ ಕೇಸು ಹಾಕಿದ್ದಾರೆ ಎಂಬುದು ನನಗಿನ್ನೂ ಗೊತ್ತಿಲ್ಲ. ಆದರೆ, ಕೇಸು ಹಾಕಿರುವುದಂತೂ ಸತ್ಯ. ಇಷ್ಟಕ್ಕೂ ನಾವು ಮಾಡಿರುವ ತಪ್ಪಾದರೂ ಏನು ಎಂದು ಖಾರವಾಗಿಯೇ ಪ್ರಶ್ನಿಸಿರುವ ಸಿಎಂ ಸೋದರಿ ಶೈಲಜಾ, ಜಯಲಲಿತಾ ನಮ್ಮ ಅಕ್ಕ, ನಾನು ಅವರ ಸೋದರಿ. ವಾಸುದೇವನ್ ನಮ್ಮ ತಂದೆಯ ಮೊದಲ ಹೆಂಡತಿ ಮಗ. ಈ ಬಗ್ಗೆ ಎಲ್ಲಿ ಕೇಳಿದರೂ ಬಂದು ಹೇಳುತ್ತೇನೆ. ನಾನು ಅವರ ಸೋದರಿ ಎನ್ನುವುದಕ್ಕೆ ಸಾಕ್ಷಿ ಬೇಕಿದ್ದರೆ ಡಿಎನ್ಎ ಪರೀಕ್ಷೆಗೂ ಸಿದ್ಧ ಎಂದಿದ್ದಾರೆ.
-ಆರ್.ಕೇಶವಮೂರ್ತಿ