ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಶೋಭಾ ಬಂಧನ
ಶಿವಮೊಗ್ಗ: ಇಲ್ಲಿನ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ಪ್ರಕರಣದ ಪ್ರಮುಖ ಆರೋಪಿ ಶೋಭಾಳನ್ನು ಬಂಧಿಸಲಾಗಿದೆ.
ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಡಿಸಿಸಿ ಬ್ಯಾಂಕ್ ಶಿವಮೊಗ್ಗ ನಗರ ಶಾಖೆ ಬ್ರಾಂಚ್ ಮ್ಯಾನೇಜರ್ ಶೋಭಾರನ್ನು ಶುಕ್ರವಾರ ದಾವಣಗೆರೆಯಲ್ಲಿ ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಹೊರಜಗತ್ತಿಗೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಶೋಭಾ ಪ್ರಕರಣ ಮುಚ್ಚಿಹಾಕುವಲ್ಲಿ ಪ್ರಯತ್ನಿಸಿದ್ದಳು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಭಯಗೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ಸೇರಿ ನಂತರ ನ್ಯಾಯಾಲಯದಲ್ಲಿ ಜಾಮೀನು ಪಡೆಯುವುದು ಅವರ ಉದ್ದೇಶವಾಗಿತ್ತು. ಆದರೆ, ಪೊಲೀಸರು ಯಾವಾಗ ತನಿಖೆ ಚುರುಕುಗೊಳಿಸಿದರೋ ತಕ್ಷಣ ನಾಪತ್ತೆಯಾಗಿದ್ದಳು.
ಆಸ್ಪತ್ರೆಯಲ್ಲಿ ಶೋಭಾಳನ್ನು ವಿಚಾರಣೆಗೊಳಪಡಿಸಲು ಪೊಲೀಸರು ತೆರಳುತ್ತಿದ್ದಂತೆ ಮತ್ತೊಂದು ಬಾಗಿಲಿನಿಂದ ತಪ್ಪಿಸಿಕೊಂಡಾಕೆ ಬೇರೆ ಬೇರೆ ಊರುಗಳಲ್ಲಿ ಸಂಚರಿಸಿದ್ದಾಳೆ. ಶೋಭಾ ಮುಖ ಪರಿಚಯ ಇಲ್ಲದ್ದರಿಂದ ಪೊಲೀಸರಿಗೂ ಆಕೆಯನ್ನು ವಶಕ್ಕೆ ಪಡೆಯುವುದು ಕಷ್ಟವಾಗಿತ್ತು.
ಈ ಮಧ್ಯೆ ಆಕೆಯ ಪೋಷಕರು ಸುಮಾರು 1 ಕೋಟಿ ಡಿಸಿಸಿ ಬ್ಯಾಂಕ್‌ಗೆ ತಂದುಕೊಟ್ಟು ಬಂಧನವಾಗದಂತೆ ತಡೆಯುವ ಪ್ರಯತ್ನ ನಡೆಸಿದ್ದರು. ಆದರೆ, ಮೊಬೈಲ್ ನೆಟ್‌ವರ್ಕ್ ಸೇರಿದಂತೆ ಬೇರೆ ಬೇರೆ ಮಾರ್ಗಗಳ ಮೂಲಕ ಶೋಭಾ ದಾವಣಗೆರೆಯಲ್ಲಿ ಸಂಬಂಧಿಕರ ಮನೆಯಲ್ಲಿರುವುದನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಇವರ ಬಂಧನದ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೂ ಐವರನ್ನು ಬಂಧಿಸಿದಂತಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.