ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯೋಧಗೀತೆಗೆ ಪಠ್ಯ ಯೋಗ

ಕಳೆದ ವರ್ಷ ಜು.26ಕ್ಕೆ 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿದ್ದ ಮೈಸೂರಿನ ಟಿ. ವಿಜಯಕುಮಾರ್ ಅವರ 'ಯೋಧಗೀತೆ'..

Vishwanath S
Updated On : 26 Jul 2014, 2:40 am

ಮೈಸೂರು: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕಳೆದ ವರ್ಷ ಜು.26ಕ್ಕೆ 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿದ್ದ ಮೈಸೂರಿನ ಟಿ. ವಿಜಯಕುಮಾರ್ ಅವರ 'ಯೋಧಗೀತೆ' ಈ ವರ್ಷದಿಂದ 7ನೇ ತರಗತಿಯ ಸಿರಿ ಕನ್ನಡ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕಕ್ಕೆ ಸೇರ್ಪಡೆಯಾಗಿದೆ.
ಯೋಧಗೀತೆಯೊಂದಿಗೆ ಕವಿಯ ಪರಿಚಯವನ್ನೂ (ಪುಟ 58-59) ನೀಡಲಾಗಿದೆ. ಇದೇ ಯೋಧ ಗೀತೆಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಳೆದ ವರ್ಷ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಹೊರತಂದಿದ್ದ ಸ್ಮರಣ ಸಂಚಿಕೆಯ 32ನೇ ಪುಟದಲ್ಲಿ ಪ್ರಕಟಿಸಿತ್ತು. ಆಗ ಅದಕ್ಕೆ ಭಾರಿ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷದ ಸ್ಮರಣ ಸಂಚಿಕೆಯ ಮೊದಲ ಪುಟದಲ್ಲೇ ಪ್ರಕಟಿಸಲಾಗಿದೆ.
ಯೋಧರ ಗೌರವಾರ್ಥ: ಕನಿಷ್ಠ ವರ್ಷಕ್ಕೊಮ್ಮೆಯಾದರೂ ಅಂದರೆ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸುವ ಜು.26 ರಂದಾದರೂ ಯೋಧರ ತ್ಯಾಗ, ಬಲಿದಾನ ಸ್ಮರಿಸಿ  ನಾಡಿನ ಪ್ರತಿಯೊಬ್ಬರೂ ಯೋಧಗೀತೆ ಹಾಡಬೇಕು. ಎಂಬ ಉದ್ದೇಶದಿಂದ ಮೈಸೂರಿನ ರೂಪನಗರ ನಿವಾಸಿ ಟಿ. ವಿಜಯಕುಮಾರ್ ಈ ಯೋಧಗೀತೆ ರಚಿಸಿದ್ದಾರೆ. ಕಾರ್ಗಿಲ್ ಹೋರಾಟದಲ್ಲಿ ಮಡಿದ ವೀರರಿಗೆ ಗೌರವ ಸೂಚಿಸುವ ಸಲುವಾಗಿ ಎರಡು ತಿಂಗಳ ಕಾಲ ಯೋಚಿಸಿ, ತಿದ್ದಿತೀಡಿ ಈ ಗೀತೆ ರಚಿಸಿದ್ದಾರೆ.
ಹಿಂದೆ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಸೇರಿ ಅನೇಕ ಹಿರಿಯ ವಿದ್ವಾಂಸರು, ಸಾಹಿತಿಗಳು ವಿಜಯ್‌ಕುಮಾರ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಗೀತೆಗೆ ರಾಗ ಸಂಯೋಜಿಸುತ್ತಿದ್ದು, ಸಿಡಿಯನ್ನು ಎಲ್ಲ ಶಾಲೆಗಳಿಗೂ ತಲುಪಿಸುವ ಉದ್ದೇಶ ಹೊಂದಿದ್ದಾರೆ. ಅವರನ್ನು (ಮೊ.99860 35559) ಅಭಿನಂದಿಸೋಣವೇ?
21 ಸಾಲಿನ ಗೀತೆ!
ಗೀತೆಯ ಪ್ರತಿ ಪ್ಯಾರಾದಲ್ಲಿ 5 ಸಾಲು. 4 ಪ್ಯಾರಾದ ಈ ಪದ್ಯ 20 ಸಾಲುಗಳಿಗೆ ಮುಕ್ತಾಯವಾಗಬೇಕಿತ್ತು. ಆದರೆ, ಹುತಾತ್ಮರಿಗೆ ಗೌರವ ಸಲ್ಲಿಸುವಾಗ 21 ಕುಶಾಲ ತೋಪು ಸಿಡಿಸುವುದು ಸಂಪ್ರದಾಯ. ಅದೇ ರೀತಿ ಯೋಧಗೀತೆಯೂ 21 ಸಾಲುಗಳಿಂದ ಕೂಡಿದೆ.
ಟಿ. ವಿಜಯಕುಮಾರ್ ಅವರ ಯೋಧಗೀತೆ ಸ್ವಾರಸ್ಯ ಮತ್ತು ಔಚಿತ್ಯಪೂರ್ಣವಾಗಿದೆ. ಇದನ್ನು ಯೋಧಗೀತೆಯಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಬಹುದು.
- ದೇಜಗೌ, ಹಿರಿಯ ಸಾಹಿತಿ

ಯೋಧಗೀತೆ
ಜನ್ಮ ಭೂಮಿಗೆ ವಚನ ಕೊಟ್ಟು
ಹೋರಾಡುವ ಪಣವತೊಟ್ಟು
ದೇಶಕ್ಕಾಗಿ ಪ್ರಾಣಬಿಟ್ಟ ವೀರರೇ
ನಿಮ್ಮ ಜೀವವನ್ನೇ ಬಲಿಕೊಟ್ಟ ಶೂರರೇ
ವಂದನೆ ವಂದನೆ ವಂದನೆ- ಭಾರತಾಂಬೆ ಯೋಧರಿಗೆ ವಂದನೆ
ಹಗಲು ಇರುಳು ಎನ್ನದೆ
ಗುಡುಗು ಸಿಡಿಲಿಗಂಜದೆ
ಭಯ ಭೀತಿ ಅರಿಯದ ಯುವಕರೇ
ಧೈರ್ಯದಿಂದ ಹೋರಾಡುವ ಧೀರರೇ
ವಂದನೆ ವಂದನೆ ವಂದನೆ- ಭಾರತಾಂಬೆ ಕುವರರಿಗೆ ವಂದನೆ
ಮಡದಿ ಮಕ್ಕಳ ಮನೆಯಲಿಟ್ಟು
ತಂದೆತಾಯ ಮನದಲ್ಲಿಟ್ಟು
ಬಂಧು ಬಳಗ ಮರೆತುಬಿಟ್ಟು
ನಮ್ಮ ನಾಡಿಗಾಗಿ ದುಡಿಯುತಿರುವ ಯೋಧರೇ
ವಂದನೆ ವಂದನೆ ವಂದನೆ- ಭಾರತಾಂಬೆ ಶೂರರಿಗೆ ವಂದನೆ
ಬಿಸಿಲು ಮಳೆಗೆ ಜಗ್ಗದ
ಚಳಿಗಾಳಿಗೆ ಕುಗ್ಗದ
ಬೆದರಿಕೆಗೆ ಬಗ್ಗದ ಧೀರರೇ
ಸ್ಥೈರ್ಯದಿಂದ ಮುನ್ನುಗ್ಗುವ ವೀರರೇ
ನಮ್ಮ ದೇಶವನ್ನು ಕಾಯುತಿರುವ ತರುಣರೇ
ವಂದನೆ ವಂದನೆ ವಂದನೆ- ಭಾರತಾಂಬೆ ಯೋಧರಿಗೆ ವಂದನೆ


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement