ಸತ್ತವರ ಹೆಸರಲ್ಲಿ 56,000 ಪಡಿತರ ಚೀಟಿ!
ಬೆಂಗಳೂರು: ಒಂದೇ ಬಯೋವುಟ್ರಿಕ್ಸ್ನಲ್ಲಿ 79 ಪಡಿತರ ಚೀಟಿ! ಸತ್ತವರ ಹೆಸರಲ್ಲಿದ್ದ ಪಡಿತರ ಚೀಟಿಗಳ ಸಂಖ್ಯೆ 56,586!
ಇದು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮಾಡಿರುವ ಅನ್ಯಾಯ!
ಅಗೆದಷ್ಟೂ ಹುತ್ತ ಎಂಬಂತೆ ಪಡಿತರ ಚೀಟಿ ಪರಿಶೀಲಿಸುತ್ತಿದ್ದಂತೆ ಅಕ್ರಮಗಳ ಭಂಡಾರವೇ ತೆರೆದುಕೊಳ್ಳುತ್ತಿದೆ. ರಾಜ್ಯದಲ್ಲಿರುವ ಶೇ.20ಕ್ಕೂ ಅಧಿಕ ಪಡಿತರ ಚೀಟಿಗಳು ಅಕ್ರಮವಾಗಿರಬಹುದು ಎಂಬ ಅಂದಾಜಿಗೆ ಪೂರಕವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಾಥಮಿಕ ತನಿಖೆಯಿಂದ ದಾಖಲೆಗಳು ಲಭ್ಯವಾಗಿವೆ.
ಆಧಾರ್ ಗುರುತಿನ ಸಂಖ್ಯೆ ಹಾಗೂ ಚುನಾವಣೆ ಗುರುತಿನ ಚೀಟಿಯ ದಾಖಲೆ ಆಧರಿಸಿ ಇಲಾಖೆ ನಡೆಸಿದ ವಿಶೇಷ ತನಿಖೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಅಕ್ರಮ ಪಡಿತರ ಚೀಟಿಯ ನಾನಾ ಮುಖಗಳು ತೆರೆದುಕೊಂಡಿವೆ. ಬಯೋವುಟ್ರಿಕ್ ದಾಖಲೆ ಆಧರಿಸಿ 34 ಸಾವಿರ ಹಾಗೂ ಚುನಾವಣೆ ಗುರುತಿನ ಚೀಟಿಯ ದಾಖಲೆಗಳ ಮೇಲೆ 56,586 ಅಕ್ರಮ ಪಡಿತರ ಚೀಟಿ ಪತ್ತೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನ 21 ಪಡಿತರ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಹಾಗೆಯೇ 90 ಸಾವಿರಕ್ಕೂ ಅಧಿಕ ಚೀಟಿ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಅಕ್ರಮ ಹೇಗೆ?: ಗ್ರಾಮ ಪಂಚಾಯಿತಿ ಅಥವಾ ಪಡಿತರ ಅಂಗಡಿ ಮಟ್ಟದಲ್ಲಿ ವಿಶೇಷ ಕೇಂದ್ರದ ಮೂಲಕ ಪಡಿತರ ಚೀಟಿಗೆ ಅರ್ಜಿ ಹಾಕಿಸಿಕೊಳ್ಳಲಾಗಿದೆ. ಪ್ರತಿ ಅಂಗಡಿ ವ್ಯಾಪ್ತಿಯಲ್ಲಿ 150ರಿಂದ 500ಕ್ಕೂ ಅಧಿಕ ಚೀಟಿಗಳಿರುತ್ತವೆ. ಅರ್ಜಿದಾರರು ಎಲ್ಲ ಮಾಹಿತಿ ಕೊಟ್ಟ ಬಳಿಕ ಒಂದು ರಾತ್ರಿ ಕುಳಿತುಕೊಂಡು ಪ್ರತಿ ಚೀಟಿಯಲ್ಲಿಯೂ ಪಡಿತರ ವಿತರಣಾ ಅಂಗಡಿ ಮಾಲೀಕರು ಒಂದು ಹೆಸರನ್ನು ಸೇರಿಸಿದ್ದಾರೆ. ಎಲ್ಲ ಹೆಸರಿಗೂ ತಮ್ಮದೇ ಬಯೋವುಟ್ರಿಕ್ಸ್ ಬಳಸಿದ್ದಾರೆ.
ಪಡಿತರ ಪಡೆಯಲು ಬಯೋವುಟ್ರಿಕ್ಸ್ ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅಕ್ರಮ ಎಸಗಲಾಗಿದೆ. ಮಾಲೀಕರು ತಮ್ಮ ಬಯೋವುಟ್ರಿಕ್ಸ್ ಬಳಸಿ ಎಲ್ಲ ಆಹಾರ ಪದಾರ್ಥ ಪಡೆಯುವ ಹುನ್ನಾರ ಇದಾಗಿತ್ತು.
ಇದಲ್ಲದೇ ಇಂತಹ ಬಹುತೇಕ ಚೀಟಿಗಳು ಕೂಡ ನಕಲಿಯಾಗಿದೆ.
ಕಳೆದ 45 ದಿನಗಳಿಂದ 1 ಕೋಟಿಗೂ ಅಧಿಕ ಪಡಿತರ ಚೀಟಿದಾರರ ಆಧಾರ್ ಗುರುತಿನ ಸಂಖ್ಯೆ ಪಡೆಯಲಾಗಿದೆ. ಇದರಲ್ಲಿ ಬೆಂಗಳೂರಿನ ಪಡಿತರ ಚೀಟಿದಾರರ ಮಾಹಿತಿ ಪರಿಶೀಲಿಸಲಾಗಿದೆ. ಬೆಂಗಳೂರಿನಲ್ಲಿರುವ 3 ಲಕ್ಷ ಕಾರ್ಡ್ಗಳಲ್ಲಿ 34 ಸಾವಿರ ಕಾರ್ಡ್ಗಳು ಈ ರೀತಿ ಅಕ್ರಮದ್ದಾಗಿದೆ ಎಂದು ಕೇವಲ ಆಧಾರ ಗುರುತಿನ ಸಂಖ್ಯೆ ಮೂಲಕ ತಿಳಿದುಬಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮಾಹಿತಿ ಪರಿಶೀಲಿಸಿದರೆ 10 ಲಕ್ಷಕ್ಕೂ ಅಧಿಕ ಚೀಟಿಗಳು ಈ ಮೂಲಕ ರದ್ದಾಗುವ ಸಾಧ್ಯತೆಯಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಅಂದಾಜಿಸುತ್ತಾರೆ.
ಇದೇ ರೀತಿ ಚುನಾವಣೆ ಆಯೋಗದಿಂದ ಕಳೆದ 6 ತಿಂಗಳ ಗುರುತಿನ ಚೀಟಿ ಮಾಹಿತಿ ಪಡೆಯಲಾಗಿದೆ. ಇದರಲ್ಲಿ ಕೇವಲ ಸತ್ತವರ ಚುನಾವಣೆ ಗುರುತಿನ ಚೀಟಿ ಸಂಖ್ಯೆಯನ್ನು ವಿಶೇಷ ಸಾಫ್ಟ್ವೇರ್ ಮೂಲಕ ಪರೀಕ್ಷಿಸಲಾಗಿದೆ. ಇದರಲ್ಲಿ 56,586 ಅಕ್ರಮ ಚೀಟಿಗಳು ಪತ್ತೆಯಾಗಿವೆ. ಆ ವ್ಯಕ್ತಿ ಸತ್ತಿದ್ದರೂ ಪಡಿತರ ಚೀಟಿ ವಿತರಣೆಯಾಗಿದೆ. ಕಳೆದ 5 ವರ್ಷದ ಸಂಪೂರ್ಣ ಮಾಹಿತಿ ತರಿಸಿಕೊಂಡರೆ ಭಾರಿ ಅವ್ಯವಹಾರ ಬಯಲಾಗುವ ಸಾಧ್ಯತೆಯಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳ ಶಾಮೀಲಿನಿಂದ ಇಂತಹ ಅಕ್ರಮ ನಡೆದಿದೆ. ಸತ್ತವರ ಹೆಸರಲ್ಲಿ ಚೀಟಿ ಪಡೆದುಕೊಂಡು ಕಾಳಸಂತೆಗೆ ನೇರವಾಗಿ ಅಕ್ಕಿ ರವಾನಿಸಲಾಗುತ್ತಿದೆ.
ಅಕ್ರಮ ಪಡಿತರ ಚೀಟಿಗಾಗಿ ಹೊಸ ಮಾರ್ಗಗಳು
* ಒಂದೇ ಬಯೋವುಟ್ರಿಕ್ ಬಳಸಿ ಅಸಂಖ್ಯಾತ ಪಡಿತರ ಚೀಟಿ.
* ಸತ್ತವರ ಹೆಸರಲ್ಲಿ ಪಡಿತರ.
* ಯಾರದ್ದೋ ವಿಳಾಸ ಹಾಗೂ ಗುರುತಿನ ಚೀಟಿ ಎದುರಿಗೆ ತಮ್ಮ ಫೋಟೋ ಇರಿಸಿ ನಕಲಿ ಗುರುತಿನ ಚೀಟಿ ತಯಾರಿಸಿ ಕಾರ್ಡ್ ಪಡೆಯುತ್ತಿರುವ ಅಂಗಡಿ ಮಾಲೀಕರು.
ಹೆಚ್ಚು ಅಕ್ರಮ ಎಸಗಿದ ಪಡಿತರ ವಿತರಕರು
* ಶ್ರೀರಂಗಾ ಸ್ಟೋರ್ಸ್(ಬಿಎಲ್ಡಬ್ಲ್ಯೂ-101) 79
* ಗಾಯತ್ರಿ ಸ್ಟೋರ್ಸ್(ಬಿಎಲ್ಡಬ್ಲ್ಯೂ-99) 77
* ಪೆದ್ದರಾಜು ಸ್ಟೋರ್ಸ್(ಬಿಎಲ್ಡಬ್ಲ್ಯೂ-378) 45
* ನಂದಿನಿ ಸ್ಟೋರ್ಸ್(ಬಿಎಲ್ಡಬ್ಲ್ಯೂ-234) 44
* ಶಿವಾನಂದ ಸ್ಟೋರ್ಸ್(ಬಿಎಲ್ಡಬ್ಲ್ಯೂ-93) 38
- ರಾಜೀವ ಹೆಗಡೆ