ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸೀಬರ್ಡ್ ಪುನರ್ವಸತಿ ಕೇಂದ್ರಗಳಲ್ಲಿ ಹೆಚ್ಚಿನ ಸವಲತ್ತು ನೀಡಲು ಸರ್ಕಾರ ಬದ್ಧ

ರಾಷ್ಟ್ರ ರಕ್ಷಣೆಯ ಸೀಬರ್ಡ್ ನೌಕಾನೆಲೆಯ ಯೋಜನೆಯಲ್ಲಿ...

Vishwanath S
Updated On : 26 Jul 2014, 2:01 am

ಬೆಂಗಳೂರು: ರಾಷ್ಟ್ರ ರಕ್ಷಣೆಯ ಸೀಬರ್ಡ್ ನೌಕಾನೆಲೆಯ ಯೋಜನೆಯಲ್ಲಿ ಸ್ಥಾಪಿಸಲಾದ ಪುನರ್ವಸತಿ ಕೇಂದ್ರಗಳಲ್ಲಿ ಹೆಚ್ಚಿನ ಸವಲತ್ತು ನೀಡಲು ಸರ್ಕಾರ ಬದ್ಧವಾಗಿದೆ. ಹಾಗೆಯೇ ಉದ್ಯೋಗ ಹಾಗೂ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಪುನರ್ ಪರಿಶೀಲಿಸಿ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭರವಸೆ ನೀಡಿದರು.
ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾರವಾರ-ಅಂಕೋಲಾದ ನೌಕಾನೆಲೆ ನಿರಾಶ್ರಿತರ ಮತ್ತು ಸ್ಥಳೀಯರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಅವರು ಮಾತನಾಡಿದರು.
ಸೀಬರ್ಡ್ ಯೋಜನೆಯಿಂದ ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಸುಪ್ರೀಂ ಆದೇಶದಂತೆ ಹೆಚ್ಚಿನ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದರು.
ಹೆಚ್ಚಿನ ಪರಿಹಾರ ನೀಡುವಂತೆ ಸುಮಾರು 289 ಕುಟುಂಬಗಳು ಸುಪ್ರೀಂಗೆ ಮನವಿ ಮಾಡಿದ್ದು, ಅದರ ಆದೇಶದಂತೆ ಅರ್ಜಿದಾರ ಕುಟುಂಬಗಳಿಗೆ ಪರಿಹಾರ ದೊರೆಯಲಿದೆ. ಉಳಿದ ಸಾವಿರಾರು ಕುಟುಂಬಗಳಿಗೆ ಸುಪ್ರೀಂ ಆದೇಶದಂತೆ ಪರಿಹಾರ ದೊರೆಯಬೇಕು. ಅದಕ್ಕಾಗಿ ಕಾನೂನು ತಜ್ಞರು ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ನಿರಾಶ್ರಿತ ಕುಟುಂಬಗಳ ಸದಸ್ಯರಿಗೆ ಉದ್ಯೋಗಾವಕಾಶ ನೀಡಲು ಕಾನೂನು ಸಲಹೆ ಪಡೆದು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಉಪವಾಸ ಸತ್ಯಾಗ್ರಹದಲ್ಲಿ ನಟ ನಾಗತಿಹಳ್ಳಿ ಚಂದ್ರಶೇಖರ್, ಮಾಜಿ ಶಾಸಕ ಉಮೇಶ್ ಭಟ್, ಪ್ರವೀಣ ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಭಾಗವಹಿಸಿ ನೆರೆದಿದ್ದ ನೂರಾರು ನಿರಾಶ್ರಿತರಿಗೆ ಬೆಂಬಲ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement