ಹಾಸ್ಯಚಕ್ರವರ್ತಿಗೆ ಗೌರವ ಸಿಗಲಿಲ್ಲ
ತಿಪಟೂರು: ಹಾಸ್ಯ ಚಕ್ರವರ್ತಿ, ಕನ್ನಡದ ಚಾರ್ಲಿಚಾಂಪಿಯನ್ ನರಸಿಂಹರಾಜು ಅವರಿಗೆ ಸಂಘ ಸಂಸ್ಥೆಗಳಿಂದ ನೂರಾರು ಅತ್ಯುತ್ತಮ ಪ್ರಶಸ್ತಿಗಳು ಲಭ್ಯವಾಗಿದ್ದರೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಶಸ್ತಿ ದೊರೆಯದಿರುವುದು ಬೇಸರ ತಂದಿದೆ ಎಂದು ದಿ. ನರಸಿಂಹರಾಜು ಅವರ ಪುತ್ರಿ, ಕಲಾವಿದೆ ಸುಧಾ ನರಸಿಂಹರಾಜು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ನರಸಿಂಹರಾಜು ಅವರ 91ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಂದೆಗೆ ಸರ್ಕಾರ ಈಗಲಾದರೂ ಮರಣೋತ್ತರ ಪ್ರಶಸ್ತಿ ನೀಡಬಹುದು ಎಂದು ನಿರೀಕ್ಷೆ ನಮ್ಮೆಲ್ಲರಲ್ಲಿದೆ. ತಂದೆಯ ಹುಟ್ಟೂರಾದ ತಿಪಟೂರಿನಲ್ಲಿ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣವಾಗಿರುವುದು ಸಮಾಧಾನದ ಸಂಗತಿ. ಈ ಪಟ್ಟಣದ ಒಂದು ಪ್ರಮುಖ ರಸ್ತೆಗೆ ಅವರ ಹೆಸರಿಟ್ಟರೆ ನರಸಂಹ ರಾಜು ಹೆಸರು ಜನಮಾನಸದಲ್ಲಿ ಸದಾಕಾಲವಿರುತ್ತದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ ಮಾತನಾಡಿ, ನಮ್ಮ ಸ್ಥಳೀಯರ ಸಾಧನೆ ನಮ್ಮೂರಿನಲ್ಲಿ ನಮಗೆ ಕಾಣುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನರಸಿಂಹರಾಜು ಜತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದ ಕಥಾ ಕೀರ್ತನಕಾರ ಡಾ.ಲಕ್ಷ್ಮಣ್ ದಾಸ್ ಮಾತನಾಡಿ, ಕಲಾವಿದರಿಗೆ ಸಾವಿಲ್ಲ ಎಂದರು. ಕಸಾಪ ತಾಲೂಕು ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ, ನರಸಿಂಹರಾಜು ಅವರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆಯುವ ತಾಲೂಕಿನ ಪ್ರಥಮ ವಿದ್ಯಾರ್ಥಿಗೆ ಕಸಾಪ ವತಿಯಿಂದ 10 ಸಾವಿರ ನಗದು ಪ್ರೋತ್ಸಾಹ ಧನ ನೀಡಲಾಗುವುದು ಎಂದರು. ಪ್ರಾಂಶುಪಾಲ ಡಾ.ಜಯದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಕಸಾಪ ಪದಾಧಿಕಾರಿಗಳಾದ ಎಸ್.ಆರ್.ಮಂಜುನಾಥ್, ದಿವಾಕರ್, ಸೋಮಶೇಖರ್, ಮಾಕಳ್ಳಿ ಶಿವಕುಮಾರ್, ಶಾರದಮ್ಮ, ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರಿದ್ದರು.