ಅಲೆಗೆ ಕೊಚ್ಚಿಹೋದ ಬೆಂಗ್ಳೂರಿನ 5 ಪ್ರವಾಸಿಗರು
ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಎರಡು ಕುಟುಂಬಗಳ ಐವರು ಪ್ರವಾಸಿಗರು ಶನಿವಾರ ಸಂಜೆ ಸಮುದ್ರ ಪಾಲಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸಾವಿತ್ರಿ ರವಿಕುಮಾರ (37), ಸೌಮ್ಯಾ ರವಿಕುಮಾರ (16), ಭೂಮಿಕಾ ಪ್ರಕಾಶ (16) ಹಾಗೂ ಇತರ ಇಬ್ಬರು ನೀರು ಪಾಲಾದವರು. ಬೆಂಗಳೂರಿನ ರವಿಕುಮಾರ ಹಾಗೂ ಸ್ನೇಹಿತರಿದ್ದ ಒಟ್ಟು 18 ಜನರಿದ್ದ ತಂಡ ಪ್ರತ್ಯೇಕ ಟೆಂಪೋದಲ್ಲಿ ಮುರ್ಡೇಶ್ವರ ಪ್ರವಾಸಕ್ಕೆ ಆಗಮಿಸಿತ್ತು. ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಳಿಕ ಸಮುದ್ರಕ್ಕೆ ಇಳಿದಾಗ ಬೃಹತ್ ಗಾತ್ರದ ಅಲೆ ಅಪ್ಪಳಿಸಿದೆ. ಆಗ ಎಲ್ಲರೂ ನೀರಿನಲ್ಲಿ ಮುಳುಗಿದ್ದಾರೆ. ಅದರಲ್ಲಿ ಸಾವಿತ್ರಿ ರವಿಕುಮಾರ, ಸೌಮ್ಯಾ ರವಿಕುಮಾರ, ಭೂಮಿಕಾ ರಮೇಶ ಸೇರಿ ಐವರು ಅಲೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಉಳಿದವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅವರಲ್ಲಿ ಸಾವಿತ್ರಿ ರವಿಕುಮಾರ ಹಾಗೂ ಸೌಮ್ಯಾ ಶವ ದೊರೆತಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಭೂಮಿಕಾ ಪ್ರಕಾಶ ಹಾಗೂ ಉಳಿದಿಬ್ಬರ ಶವ ಪತ್ತೆಗಾಗಿ ಮೀನುಗಾರರು ಹಾಗೂ ಮುಳುಗುಗಾರರು ಹುಡುಕಾಟ ನಡೆಸಿದ್ದಾರೆ.