ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜನಗಣಮನದಲ್ಲಿ ಸದಾ ತಾಜಾ ಮಾಲ್

ಕೆಲವು ಸುದ್ದಿಗಳಿರುತ್ತವೆ. ಗಣೇಶ ಹಾಲು ಕುಡಿದ ಎಂಬಂಥ ಸುದ್ದಿಗಳು. ಅವು ಪದೇ ಪದೇ...

Vishwanath S
Updated On : 27 Jul 2014, 1:54 am

ಕೆಲವು ಸುದ್ದಿಗಳಿರುತ್ತವೆ. ಗಣೇಶ ಹಾಲು ಕುಡಿದ ಎಂಬಂಥ ಸುದ್ದಿಗಳು. ಅವು ಪದೇ ಪದೇ ಹುಟ್ಟಿ ಚಿಕ್ಕದೊಂದು ಸೆನ್ಸೇಷನ್ ಸೃಷ್ಟಿಸಿ ಸಾಯುತ್ತಿರುತ್ತವೆ. ಮತ್ತೆ ಇನ್ನೊಂದು ರೂಪದಲ್ಲಿ ಮರುಹುಟ್ಟು ಪಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಹೀಗೆಯೇ! ಕೆಲವು ಸುದ್ದಿಗಳು ಆಗಾಗ ಮರುಹುಟ್ಟುಪಡೆದು ಬರೋದು, ಒಂದಷ್ಟು ಆವೇಶದ ಚರ್ಚೆಗಳಾಗೋದು. ಅಲ್ಲಿಗಲ್ಲಿಗೇ ಮುಗಿದು ಕಳೆದುಹೋಗೋದು. ಮತ್ತೆ ಇನ್ಯಾವತ್ತೋ ದಿಢೀರ್ ಪ್ರತ್ಯಕ್ಷವಾಗೋದು ಮಾಮೂಲಿ. ಅಂಥ ಎರಡು ಸುದ್ದಿಗಳು ಇಲ್ಲಿವೆ.
ಒಂದು ತಾಜ್‌ಮಹಲ್‌ಗೆ ಸಂಬಂಧಿಸಿದ್ದು
ತಾಜ್‌ಮಹಲ್ ಎಂಬ ವಿಶ್ವಾದ್ಭುತವನ್ನು  ಮುಘಲ್‌ದೊರೆ ಷಹಜಹಾನ್ ತನ್ನ ಪ್ರೀತಿಯ ಹೆಂಡತಿ ಮುಮ್ತಾಜ್‌ಳ ಸಾವಿನ ನೆನಪಿಗಾಗಿ ಕಟ್ಟಿಸಿದ್ದು ಎಂಬುದು ನಾವೆಲ್ಲಾ ಪಠ್ಯದಲ್ಲಿ ಓದಿರೋ ಇತಿಹಾಸ.
ಆದರೆ ಅಸಲೀ ವಿಷಯ ಏನಂದ್ರೆ..
ತಾಜ್ ಮಹಲ್ ಕಟ್ಟಿಸಿದ್ದು ಷಹಜಹಾನ್ ಅಲ್ಲ, ಅದು ರಜಪೂತ ದೊರೆ ಕಟ್ಟಿಸಿದ್ದ ಶಿವನ ದೇವಾಲಯ. ಅದರ ಮೂಲ ಹೆಸರು ತೇಜೋಮಹಾಲಯ. ಅದನ್ನು ಷಹಜಹಾನ್ ವಶಪಡಿಸಿಕೊಂಡು ತಾಜ್‌ಮಹಲ್ ಎಂಬ ಗೋರಿಯಾಗಿ ಮಾರ್ಪಡಿಸಿದ. ಅವನು ತುಂಬಾ ಕ್ರೂರಿಯಾಗಿದ್ದ. ಅವನಿಗೆ ಅದೆಷ್ಟೋ ಹೆಂಡತಿಯರಿದ್ದರು, ಮುಮ್ತಾಜಳನ್ನು ಆತ ಹಿಂಸಿಸಿ ಸಾಯಿಸಿದ್ದ.    
ಇದು ಸುಳ್ಳೋ ನಿಜವೋ ಇನ್ನೂ ನಿಗೂಢ. ಆದರೆ ಓದಿದ ಕೂಡಲೇ ಒಮ್ಮೆ  ತಲೆ ಗಿಮ್ಮೆನ್ನುವುದಿಲ್ಲವೇ..?
ಇನ್ನೊಂದು ನಮ್ಮ ರಾಷ್ಟ್ರಗೀತೆಗೆ ಸಂಬಂಧಿಸಿದ್ದು
ಟಾಗೋರರು ಬರೆದ ಜನಗಣಮನ ನಾವು ನಮ್ಮ ಹಿರಿಯರು ಎಲ್ಲರೂ ಒಪ್ಪಿಕೊಂಡು ಸ್ಕೂಲು ದಿನಗಳಿಂದ ಹಾಡಿಕೊಂಡು ಬಂದ ರಾಷ್ಟ್ರಗೀತೆ. ಆದರೆ ಒಂದು ವಾದ ಹೀಗೆ ಹೇಳುತ್ತದೆ.  ಇದು ರಾಷ್ಟ್ರಗೀತೆ ಅಲ್ಲವೇ ಅಲ್ಲ. ಇದನ್ನು ಟಾಗೋರರು ಬರೆದದ್ದು 1911ರಲ್ಲಿ ಇಂಗ್ಲೆಂಡಿನ ರಾಜ ಕಿಂಗ್ ಜಾರ್ಜ್‌ಗ ಹಾಗೂ ರಾಣಿಯನ್ನು ಸ್ವಾಗತಿಸಿ ಓಲೈಸಲಿಕ್ಕಾಗಿ. ಮೋತಿಲಾಲ್ ನೆಹರು ಅವರ ಅಣತಿಯ ಮೇರೆಗೆ ಬ್ರಿಟಿಷ್ ದೊರೆಯನ್ನು ಮೆಚ್ಚಿಸುವ, ಪೋರ್ಚುಗೀಸರನ್ನು ಕಡೆಗಣಿಸೋ ಸಲುವಾಗಿ ಈ ಹಾಡು ಬರೆದದ್ದಾಗಿತ್ತು. ಅದನ್ನೇ ರಾಷ್ಟ್ರಗೀತೆ ಮಾಡಿದ್ದು ನೆಹರು ಕುಟುಂಬ. ಹಾಗಾಗಿ ಇಂಥ ಪರದೇಶೀಯರನ್ನು ಸ್ತುತಿಸುವ ಗೀತೆ ರಾಷ್ಟ್ರಗೀತೆ ಆಗಕೂಡದು. ವಂದೇ ಮಾತರಂ ಅಥವಾ ಸಾರೇ ಜಹಾಂ ಸೆ ಅಚ್ಚಾ  ನಮ್ಮ ರಾಷ್ಟ್ರಗೀತೆ ಆಗಬೇಕು.
ಏನಂತೀರಿ?
ಮೇಲಿನ ಎರಡೂ ಕಥೆಗಳ ಬಗ್ಗೆಯೂ ಗಂಭೀರ ಚರ್ಚೆ ನಡೆದು ಸತ್ಯದ ಅನಾವರಣ ಆಗುವುದೇ ಇಲ್ಲ. ಆಗುವುದು ಬೇಕಾಗೂ ಇಲ್ಲ. ಹರಟೆಗೆ, ಬಿಸಿ ಮಾತಿಗೆ ಒಂದು ಸುದ್ದಿ ಬೇಕು. ಪರ ವಿರೋಧ ಮಾತನಾಡುವವರು ರಾಜಕೀಯ ಪಕ್ಷಗಳ ಹೆಸರಿನಲ್ಲಿ ಇಬ್ಭಾಗವಾಗಿ ಹೋಗತ್ತಾರೆ. ಅಲ್ಲಿಗೆ ಚರ್ಚೆ ಹಳ್ಳ ಹಿಡಿದು ಹೋಗುತ್ತದೆ. ಸ್ವಲ್ಪದಿನಗಳ ನಂತರ ಮತ್ತೆ ಎದ್ದು ಬರೋದಕ್ಕೋಸ್ಕರ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement