ರೆಹಮಾನ್ ರಂಜಾನ್ ಮ್ಯೂಸಿಕ್ ಡಾಕ್ಟರ್
ಭಾರತಕ್ಕೆ ಆಸ್ಕರ್ ತಂದಿತ್ತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ಗೆ ಇನ್ನು ಡಾಕ್ಟರ್ ರೆಹಮಾನ್ ಆಗಲಿದ್ದಾರೆ. ನಿಮ್ಮ ಊಹೆ ನಿಜ. ಅಮೆರಿಕದ ವಾಷಿಂಗ್ಟನ್ನಲ್ಲಿರುವ ಬರ್ಕ್ಲೀ ಸಂಗೀತ ಮಹಾವಿದ್ಯಾಲಯ, ಸಂಗೀತ ಲೋಕದಲ್ಲಿ ರೆಹಮಾನ್ ಅವರ 20 ವರ್ಷಗಳ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಲಂಡನ್ನಲ್ಲೇ ಇದ್ದ ರೆಹಮಾನ್, ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ಕುಟುಂಬ ಸದಸ್ಯರೊಂದಿಗೆ ಪವಿತ್ರ ಉಪವಾಸ ಮಾಡೋದು ಖುಷಿ ನೀಡುತ್ತೆ ಎನ್ನುವ ಅವರು, ಪವಿತ್ರ ಉಪವಾಸದಲ್ಲಿ ನಿರತರಾಗಿದ್ದಾರೆ. ಇಂಥ ದಿನಗಳಲ್ಲೇ ಅವರಿಗೆ ಡಾಕ್ಟರೇಟ್ ಸಿಗೋ ಸುದ್ದಿ ಬಂದಿದೆ. ಇದು ದೇವರು ಅವರಿಗೆ ಕೊಟ್ಟಿರೋ ರಂಜಾನ್ ಉಡುಗೊರೆ ಅಲ್ಲದೆ ಮತ್ತೇನು?
ರೆಕ್ಕೆಯಿರುವ ಡೈನೊಸಾರ್ ಪಳೆಯುಳಿಕೆ ಪತ್ತೆ
ಭೂಮಿಯಲ್ಲಿ ಡೈನೊಸಾರ್ಗಳು ತಮ್ಮ ಅಧಿಪತ್ಯವನ್ನು ಸ್ಥಾಪಿಸುವುದಕ್ಕೂ ಮುನ್ನ ಇದ್ದವೆಂದು ಹೇಳಲಾದ ರೆಕ್ಕೆಗಳುಳ್ಳ ಡೈನೋಸಾರ್ನ ಪಳೆಯುಳಿಕೆಯೊಂದು ಪತ್ತೆಯಾಗಿದೆ. ಚೀನಾದ ಜೆಹೊಲ್ ಬಯೊಟಾ ಎಂಬ ಪ್ರದೇಶದಲ್ಲಿ ಈ ಪಳೆಯುಳಿಕೆ ಪತ್ತೆಯಾಗಿರುವುದಾಗಿ ನೇಚರ್ ಡಾಟ್ ಕಾಮ್ ವರದಿ ಮಾಡಿದೆ. ಮೈಕ್ರೋ ರೆಪ್ಟೊರೈನ್ಸ್ ಎಂಬ ಡೈನೋಸಾರನದ್ದೇ ಜಾತಿಗೆ ಈ ಪಳೆಯುಳಿಕೆ ಹೋಲುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದರ ಪರೀಕ್ಷೆ ನಡೆಸಿರುವ ಸಂಶೋಧಕರು ಈ ಮಾದರಿಯ ಡೈನೊಸಾರ್ ಸಾಧಾರಣ ಗಾತ್ರವನ್ನು ಹೊಂದಿದ್ದು, ಸುಮಾರು 30 ಸೆಂ.ಮೀ. ಉದ್ದದ ರೆಕ್ಕೆಯನ್ನು ಹೊಂದಿತ್ತೆಂದು ಹೇಳಿದ್ದಾರೆ. ಈ ಬಗ್ಗೆ ಸಂಶೋಧನೆಗಳು ಸಾಗಿವೆ.
ಯಾರು ಮೊದ್ಲು ಕಾಲಿಡೋರು ?
45 ವರ್ಷಗಳ ಹಿಂದೆ ಚಂದ್ರನ ಅಂಗಳಕ್ಕೆ ಖಗೋಳ ಯಾತ್ರಿಕ ನೀಲ್ ಎ. ಆರ್ಮ್ಸ್ಟ್ರಾಂಗ್ ಕಾಲಿಡುವ ಮೂಲಕ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿ ಉಳಿಸಿದ್ದು ನಮಗೆಲ್ಲಾ ಗೊತ್ತು. ಚಂದ್ರಯಾನದಂಥ ಮಹಾನ್ ಯೋಜನೆಯನ್ನು ಹಮ್ಮಿಕೊಂಡಿದ್ದ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಈಗ ಮಂಗಳಯಾನಕ್ಕೆ ಸಿದ್ಧತೆ ನಡೆಸಿದೆ. ಅದಕ್ಕಾಗಿ, ಭೂಮಿಯಿಂದ ಸುಮಾರು 250 ಮೈಲುಗಳ ದೂರವಿರುವ ಸ್ಪೇಸ್ ಸ್ಟೇಷನ್ನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಮಾನವರನ್ನು ಯಶಸ್ವಿಯಾಗಿ ಮಂಗಳನ ಅಂಗಳಕ್ಕಿಳಿಸುವುದು ಮತ್ತು ಅಲ್ಲಿಂದ ಸುರಕ್ಷಿತವಾಗಿ ಕರೆತಂದು ಭೂಮಿಗೆ ಬಿಡುವುದು ಈ ಪ್ರಯೋಗಗಳ ಮುಖ್ಯ ಉದ್ದೇಶ. ಅತ್ತ, ಪ್ರಯೋಗಗಳು ನಡೀತಾ ಇದ್ದರೆ, ಇತ್ತ ಮಂಗಳಕ್ಕೆ ಮೊದಲು ನಾನು ಕಾಲಿಟ್ಟರೆ ಹೇಗೆ ಎಂದು ಖಗೋಳಯಾತ್ರಿಕರು ಸಖತ್ ಥ್ರಿಲ್ ಆಗಿದ್ದಾರಂತೆ!