ಶೋಭಾ ಹೆಸರಲ್ಲಿ 785 ಖಾತೆ!
ಶಿವಮೊಗ್ಗ: ಒಬ್ಬರೇ ವ್ಯಕ್ತಿ, 785 ಖಾತೆ! ಬಹುತೇಕ ಎಲ್ಲಾ ಖಾತೆಗೂ ಸಾಲ. ಈ ಸಾಲದ ಮೊತ್ತ್ತ ರು. 62 ಕೋಟಿ!
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಗಾಂಧಿ ಬಜಾರ್ ಶಾಖೆ ವ್ಯವಸ್ಥಾಪಕಿ ಶೋಭಾ ನಡೆಸಿದ ಬಾನಗಡಿ ಇದು. ಈ ಎಲ್ಲಾ ಖಾತೆಗಳನ್ನೂ ಬೇನಾಮಿ ಹೆಸರಲ್ಲಿ ಸೃಷ್ಟಿಸಲಾಗಿದೆ.
ಬಹುತೇಕ ಖಾತೆ ಮೂಲಕ 5ರಿಂದ 10 ಲಕ್ಷ ಸಾಲ ಪಡೆಯಲಾಗಿದೆ. ಸಂಬಂಧಿಗಳು, ಅಪ್ರಾಪ್ತ ಮಗ, ಪರಿಚಯಸ್ಥರು ಸೇರಿದಂತೆ ಮನಸಿಗೆ ಬಂದ ಹೆಸರಿನಲ್ಲೆಲ್ಲಾ ಖಾತೆಗಳಿವೆ. ಆಶ್ಚರ್ಯವೆಂದರೆ ಯಾವ ಸಾಲವೂ ಸುಸ್ತಿಯಾಗಿಲ್ಲ. ಕಾಲಕಾಲಕ್ಕೆ ಮರುಪಾವತಿ ಮಾಡುತ್ತಾ, ದಾಖಲೆಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತಾ, ಯಾರಿಗೂ ಅನುಮಾನ ಬಾರದಂತೆ ವ್ಯವಹರಿಸಲಾಗಿದೆ.
ವರ್ಷಕ್ಕೊಮ್ಮೆ ಲೆಕ್ಕಪತ್ರ ವರದಿ, ತಿಂಗಳಿಗೊಮ್ಮೆ ಅಡಿಟ್ ರಿಪೋರ್ಟ್‌ಗಳನ್ನು ನಿಭಾಯಿಸಲಾಗಿದೆ. ಈ ಅವ್ಯವಹಾರವನ್ನು ಕಂಡು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ದಂಗಾಗಿ ಕುಳಿತಿದೆ.
ಪಿಗ್ಮಿ ಗೋಲ್ ಮಾಲ್: ಇಲ್ಲಿ ಪಿಗ್ಮಿ ಏಜೆಂಟರೇ ಗ್ರಾಹಕರಿಗೆ ಕಮಿಷನ್ ಕೊಡುತ್ತಿದ್ದರು! ಇಂಥ ವಿಚಿತ್ರ ವ್ಯವಹಾರವೂ ಬೆಳಕಿಗೆ ಬಂದಿದೆ. ಗಾಂಧಿ ಬಜಾರ್ ಶಾಖೆಯ ಪಿಗ್ಮಿ ಏಜೆಂಟರೇ ಗ್ರಾಹಕರಿಗೆ ಶೇ. 2.5ರಷ್ಟು ಕಮಿಷನ್ ನೀಡುತ್ತಿದ್ದರು. ಅವ್ಯವಹಾರ ಬೆಳಕಿಗೆ ಬಂದು ಕೇಸ್ ದಾಖಲಾಗುತ್ತಿದ್ದಂತೆ ಪಿಗ್ಮಿ ಸಂಗ್ರಾಹಕರೊಬ್ಬರು ಶನಿವಾರ ಗಾಂಧಿ ಬಜಾರಿನ ಶಾಖೆಗೆ ತಾವು ಬಳಸಿಕೊಂಡಿದ್ದ 42 ಲಕ್ಷದಲ್ಲಿ 38 ಲಕ್ಷ ಪಾವತಿಸಿದ್ದಾರೆ.
ಎಲ್ಲಿಗೆ ಹಣ?
ಹಣವನ್ನು ಶೋಭಾ ಖಾಸಗಿ ಬಡ್ಡಿ ವ್ಯವಹಾರ, ಆನ್‌ಲೈನ್ ಗೋಲ್ಡ್ ಬಿಡ್ಡಿಂಗ್‌ಕ್ಕೆ ಬಳಸಿರಬಹುದು ಎಂಬುದು ತನಿಖಾಧಿಕಾರಿಗಳ ಅನುಮಾನ. ಆಸ್ತಿಯನ್ನು ಅಟ್ಯಾಚ್‌ಮೆಂಟ್ ಮಾಡಬೇಕು ಎಂಬುದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಮನವಿ.
-ಹೊನ್ನಾಳಿ ಚಂದ್ರಶೇಖರ್