ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

5 ವರ್ಷದಲ್ಲಿ ಅಪಘಾತಕ್ಕೆ ರಾಜ್ಯದಲ್ಲಿ 23 ಚಿರತೆ ಬಲಿ

ಬಂಡೀಪುರ ಅಭಯಾರಣ್ಯ ನಡುವೆ ಹೆದ್ದಾರಿ ಹಾದು ಹೋಗಿರುವುದರಿಂದ ಆಗಾಗ ವನ್ಯಜೀವಿಗಳು...

Mainashree
Updated On : 27 Jul 2014, 10:51 am

ಮೈಸೂರು: ಬಂಡೀಪುರ ಅಭಯಾರಣ್ಯ ನಡುವೆ ಹೆದ್ದಾರಿ ಹಾದು ಹೋಗಿರುವುದರಿಂದ ಆಗಾಗ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾವಿಗೀಡಾಗುವುದು ಸುದ್ದಿಯಾಗುತ್ತದೆ. ಆದರೆ ರಾಜ್ಯದ ಇತರೆಡೆಯೂ ವನ್ಯಪ್ರಾಣಿಗಳ ಪಾಲಿಗೆ ರಸ್ತೆಗಳು ಯಮಸ್ವರೂಪಿಯಾಗಿವೆ ಎಂಬುದಕ್ಕೆ ಕಳೆದೈದು ವರ್ಷಗಳಲ್ಲಿ ಅಪಘಾತದಲ್ಲಿ 23 ಚಿರತೆಗಳು ಬಲಿಯಾಗಿರುವುದೇ ಸಾಕ್ಷಿ.
23 ಚಿರತೆಗಳ ಪೈಕಿ 4 ಮಾತ್ರ ರಕ್ಷಿತಾರಣ್ಯದೊಳಗೆ ವಾಹನಗಳಿಗೆ ಸಿಲುಕಿ ಮೃತಪಟ್ಟಿದ್ದರೆ ಉಳಿದ 19 ರಕ್ಷಿತಾರಣ್ಯದ ಹೊರಗೆ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿವೆ. ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದಲ್ಲಿ ಎಚ್.ಸಿ. ಪೂರ್ಣೇಶ್, ಅನ್ನಪೂರ್ಣ ದೈತೋಟ, ಹರೀಶ್ ನಾಗಶೆಟ್ಟಿಹಳ್ಳಿ ಅವರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಿಂದ ಇದು ದೃಢಪಟ್ಟಿದೆ. ಈ ಸಂಬಂಧ ಅವರ ಲೇಖನ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆ 'ಕ್ಯಾಟ್ ನ್ಯೂಸ್‌'ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.
2009ರಲ್ಲಿ ದಾವಣಗೆರೆಯಲ್ಲಿ 3 ಹಾಗು ಮೂಕಾಂಬಿಕಾ ವನ್ಯಜೀವಿಧಾಮದಲ್ಲಿ ಒಂದು ಚಿರತೆ ಬಲಿಯಾಗಿದೆ. 2011ರಲ್ಲಿ ಹೊನ್ನಾವರದ ಕಾರ್ಗಲ್, ಕಾರವಾರದ ಅಂಕೋಲಾ, ಬೆಂಗಳೂರು ಗ್ರಾಮಾಂತರದ ನೆಲಮಂಗಲ, ದಾಂಡೇಲಿ - ಅಣಶಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಲಾ 1, ಬೆಂಗಳೂರು ನಗರದ ಕಗ್ಗಲೀಪುರದಲ್ಲಿ 2 ಚಿರತೆಗಳು, 2012ರಲ್ಲಿ ರಾಮನಗರ ಜಿಲ್ಲೆಯ ಮಾಗಡಿ, ಬಿಳಿರಂಗನಬೆಟ್ಟ ಹುಲಿ ಯೋಜನೆಯ ಪುಣಜನೂರು ಬಳಿ ತಲಾ 1 ಚಿರತೆಗಳು ಸಾವಿಗೀಡಾಗಿವೆ.
2013ರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಬಳಿ 2, ಕೊಳ್ಳೇಗಾಲದ ಮಹದೇಶ್ವರಬೆಟ್ಟ, ರಾಮನಗರ ಜಿಲ್ಲೆಯ ಮಾಗಡಿ, ದಾವಣಗೆರೆಯ ಹೊನ್ನಾಳಿ, ತುಮಕೂರು ಜಿಲ್ಲೆಯ ತಿಪಟೂರು ಬಳಿ ತಲಾ 1 ಚಿರತೆಗಳು ಮೃತಪಟ್ಟಿವೆ. 2014ರ ಜೂನ್ ಅಂತ್ಯದವರೆಗೆ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರದಲ್ಲಿ ತಲಾ 1, ಹೊನ್ನಾವರದ ಕಾರ್ಗಲ್, ಬಿಳಿಗಿರಿರಂಗನಬೆಟ್ಟದ ಪುಣಜನೂರು, ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿ ತಲಾ 1 ಚಿರತೆ ಬಲಿಯಾಗಿವೆ. ಇದಲ್ಲದೆ ರೈಲಿಗೆ ಸಿಕ್ಕಿಯೂ 2 ಚಿರತೆಗಳು ಮೃತಪಟ್ಟಿವೆ. ರಾಜ್ಯದ 5 ವರ್ಷಗಳ ಅಂಕಿಅಂಶ ಗಮನಿಸಿದಾಗ ಪ್ರತಿ 3 ತಿಂಗಳಿಗೊಂದು ಚಿರತೆ ರಸ್ತೆ ಅಪಘಾತಕ್ಕೆ ಬಲಿಯಾಗಿದೆ. ವನ್ಯಜೀವಿ ಕಳ್ಳರ ಕಾಟದೊಂದಿಗೆ ರಸ್ತೆ ಅಪಘಾತಗಳಲ್ಲೂ ಚಿರತೆಗಳು ಮೃತಪಡುತ್ತಿವೆ.
ಚಿರತೆಗಳು ನಾಡಿಗೇಕೆ ಬರುತ್ತವೆ?: ಆವಾಸ ಸ್ಥಾನಗಳ ನಾಶ, ಇತರೆ ಪ್ರಾಣಿಗಳೊಡನೆ ಸಂಘರ್ಷದಿಂದ ಚಿರತೆಗಳು ನಾಡಿಗೆ ಬಂದು, ತಮ್ಮ ಸಾವಿಗೇ ತಾವೇ ಕಾರಣವಾಗುತ್ತವೆ. ಚಿರತೆ- ಮಾನವ ಸಂಘರ್ಷ ಹೆಚ್ಚಾಗಿರುವ ರಾಜ್ಯದ 5 ಜಿಲ್ಲೆಗಳಲ್ಲಿ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಚಿರತೆಗಳಿಗೆ ಜಿಪಿಎಸ್ ರೇಡಿಯೋ ಕಾಲರ್ ಅಳವಡಿಸಲು ಮುಂದಾಗಿದೆ. ಚಿರತೆಗಳು ಹೆಚ್ಚಾಗಿರುವ ಭದ್ರಾವತಿ ಮತ್ತು ಕೊಳ್ಳೇಗಾಲದಲ್ಲಿ ತಲಾ 170 ಕ್ಯಾಮೆರಾಅಳವಡಿಸಲಾಗಿದ್ದು, ಚಲನವಲನ ಗಮನಿಸಲಾಗುತ್ತಿದೆ. ಮೈಸೂರು, ಕೊಳ್ಳೇಗಾಲ, ಚಾಮರಾಜನಗರ ಮತ್ತು ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ಕ್ಷೇತ್ರ ವಿಸ್ತರಣಾ ಕಾರ್ಯ ಮುಗಿದಿದೆ. ರಾಮನಗರ, ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಈ ಕಾರ್ಯ ನಡೆಯಬೇಕಿದೆ.
ರಾಜ್ಯದ 214 ಗ್ರಾಮಗಳಲ್ಲಿ ಮಾನವ- ಚಿರತೆ ಸಂಘರ್ಷ ಪ್ರಕರಣಗಳು ವರದಿಯಾಗಿದ್ದರೂ ತೀವ್ರವಾಗಿರುವುದು ಮೈಸೂರು(54), ಹಾಸನ(31), ತುಮಕೂರು(21), ರಾಮನಗರ(18), ಉಡುಪಿ(24)ಯಲ್ಲಿ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು-20, ಹುಣಸೂರು-8, ಮೈಸೂರು-18, ನಂಜನಗೂಡು- 6, ಪಿರಿಯಾಪಟ್ಟಣ-2, ಹಾಸನ ಜಿಲ್ಲೆಯ ಆಲೂರು-2, ಅರಕಲಗೂಡು-10, ಅರಸೀಕೆರೆ-5, ಚನ್ನರಾಯಪಟ್ಟಣ-7, ಹಾಸನ-5, ಹೊಳೆನರಸೀಪುರ-2, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ-3, ಗುಬ್ಬಿ-1, ಕೊರಟಗೆರೆ-3,ಕುಣಿಗಲ್-6, ತಿಪಟೂರು-3, ತುಮಕೂರು-2, ತುರವೇಕೆರೆ-3, ರಾಮನಗರ ಜಿಲ್ಲೆಯ ಚನ್ನಪಟ್ಟಣ-5, ಕನಕಪುರ-2, ಮಾಗಡಿ-6, ರಾಮನಗರ-5,  ಉಡುಪಿ ಜಿಲ್ಲೆಯ ಕಾರ್ಕಳ-13, ಕುಂದಾಪುರ-5, ಉಡುಪಿ-6 ಗ್ರಾಮಗಳನ್ನು ಚಿರತೆ ಹಾವಳಿ ಗ್ರಾಮಗಳೆಂದು ಗುರುತಿಸಲಾಗಿದೆ.
ವನ್ಯಜೀವಿಗಳು ರಸ್ತೆ ಅಪಘಾತಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕಾದರೆ ರಕ್ಷಿತಾರಣ್ಯದ ನಡುವೆ ಹಾದು ಹೋಗಿರುವ ಹೆದ್ದಾರಿಗಳನ್ನು ಮರು ವಿನ್ಯಾಸಗೊಳಿಸಬೇಕು. ಚಿರತೆ ಹಾವಳಿ ಹೆಚ್ಚಿರುವ ಜಿಲ್ಲೆಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸುವಾಗ ಕೆಳ ಸೇತುವೆ ನಿರ್ಮಿಸಬೇಕು.
-ಸಂಜಯ್ ಗುಬ್ಬಿ, ವನ್ಯಜೀವಿತಜ್ಞರು


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement