ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖಾಸಗಿ ದೇವರ ಆಟ!

ರಾಜ್ಯದಲ್ಲಿ ಒತ್ತುವರಿ ಮಾಡಿದ ಸರ್ಕಾರಿ ಜಾಗಗಳ ಸಕ್ರಮಕ್ಕೆ ಪ್ರಾರ್ಥನಾ ಮಂದಿರಗಳು...

Mainashree
Updated On : 27 Jul 2014, 11:22 am

-ರು.50,000 ತಿಂಗಳಿಗೆ ಸಂಗ್ರಹವಾಗುವ ಕಾಣಿಕೆ

ಬೆಂಗಳೂರು:
ರಾಜ್ಯದಲ್ಲಿ ಒತ್ತುವರಿ ಮಾಡಿದ ಸರ್ಕಾರಿ ಜಾಗಗಳ ಸಕ್ರಮಕ್ಕೆ ಪ್ರಾರ್ಥನಾ ಮಂದಿರಗಳು ಪರಿಹಾರ ಸೂತ್ರವಾಗುತ್ತಿವೆ!
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ, ಅದನ್ನು ಯಾರೂ ಪ್ರಶ್ನಿಸದಂತೆ ಮಾಡಲು ಅನೇಕ ಕಡೆ ಪ್ರಾರ್ಥನಾ ಮಂದಿರ ಸ್ಥಾಪಿಸಲಾಗುತ್ತಿದೆ. ಈ ಮೂಲಕ ಸರ್ಕಾರಿ ಜಾಗವನ್ನೂ ಕಬಳಿಸಿ, ಪ್ರಾರ್ಥನಾ ಮಂದಿರದ ಆದಾಯವನ್ನೂ ನುಂಗುತ್ತಿದ್ದಾರೆ. ಹೀಗಾಗಿ ಮೈಸೂರು, ಬೆಂಗಳೂರು, ಮಂಡ್ಯ, ದಾವಣಗೆರೆ, ಗುಲ್ಬರ್ಗ, ಬಿಜಾಪುರ ಸೇರಿದಂತೆ ಅನೇಕ ಕಡೆ ಒತ್ತುವರಿಯಾದ ಸರ್ಕಾರಿ ಜಾಗಗಳಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಂಥ ಪ್ರಾರ್ಥನಾ ಮಂದಿರ ತಲೆ ಎತ್ತುತ್ತಿವೆ. ಅದರಲ್ಲೂ ಖಾಸಗಿ ದೇವಸ್ಥಾನಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಆದರೆ ಇವುಗಳನ್ನು ಯಾರೂ ಪ್ರಶ್ನಿಸುವುದಕ್ಕೆ ಅವಕಾಶ ಇಲ್ಲದಂತಾಗಿದೆ.
ಏಕೆಂದರೆ, ದೇವಸ್ಥಾನ, ಮಸೀದಿ, ಚರ್ಚ್‌ಗಳಂಥ ಪ್ರಾರ್ಥನಾ ಮಂದಿರಗಳನ್ನು ಆರಂಭಿಸುವವರು ಸರ್ಕಾರದ ಯಾವ ಇಲಾಖೆಗೂ ಅರ್ಜಿ ಸಲ್ಲಿಸಿ ಅನುಮತಿ ಕೇಳಬೇಕಿಲ್ಲ.
ಅಷ್ಟೇ ಏಕೆ, ಪ್ರಾರ್ಥನಾ ಮಂದಿರಗಳಲ್ಲಿ ನಡೆಸುವ ವ್ಯವಹಾರಗಳ ಬಗ್ಗೆಯೂ ಮಾಹಿತಿ ನೀಡಬೇಕಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಖಾಸಗಿ ಪ್ರಾರ್ಥನಾ ಮಂದಿರಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಅವುಗಳು ಎಷ್ಟಿವೆ, ಏನೆಲ್ಲಾ ವ್ಯವಹಾರಗಳು ನಡೆಯುತ್ತಿವೆ ಎನ್ನುವುದನ್ನು ಸರ್ಕಾರ ಕೇಳದಂತಾಗಿದೆ. ಹೀಗಾಗಿ ರಾಜ್ಯದಲ್ಲಿ ಪ್ರಾರ್ಥನಾ ಮಂದಿರಗಳು ಪ್ರಶ್ನಾತೀತವಾಗಿವೆ.
ಸರ್ಕಾರದ ಬಳಿ ಕಾನೂನೇ ಇಲ್ಲ: ಸೌಲಭ್ಯ ವಂಚಿತರು ಸರ್ಕಾರದ ಮುಂದೆ ಸಮಸ್ಯೆ ಹೇಳಿಕೊಳ್ಳಲು ಕೆಲಕಾಲ ಸಾಂಕೇತಿಕ ಪ್ರತಿಭಟನೆ ನಡೆಸಬೇಕಾದರೆ ವಾರದ ಮೊದಲೇ ಪೊಲೀಸ್ ಅನುಮತಿ ಕೇಳಬೇಕಿದೆ. ಆದರೆ ಪ್ರಾರ್ಥನಾ ಮಂದಿರ ಸ್ಥಾಪಿಸುವವರು ಯಾರಿಂದಲೂ ಯಾವುದೇ ಅನುಮತಿ ಕೇಳಬೇಕಿಲ್ಲ. ಸರ್ಕಾರಿ ಜಾಗ ಬಳಸುವುದಕ್ಕೂ ಮನವಿ ಸಲ್ಲಿಸುತ್ತಿಲ್ಲ. ಇನ್ನು ಪ್ರಾರ್ಥನಾ ಮಂದಿರ ಸ್ಥಾಪಿಸಿ ನಡೆಸುವ ಲಕ್ಷಾಂತರ ರುಪಾಯಿಗಳ ವ್ಯವಹಾರದ ಬಗ್ಗೆ ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ.
ಏಕೆಂದರೆ, ರಾಜ್ಯದಲ್ಲಿ ಪ್ರಾರ್ಥನಾ ಮಂದಿರಗಳ ಸ್ಥಾಪನೆಗೆ ಮುಜರಾಯಿ ಇಲಾಖೆಯಲ್ಲಾಗಲಿ, ಅಲ್ಲಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಾಗಲಿ ಯಾವುದೇ ನೀತಿ, ನಿಯಮಗಳೇ ಇಲ್ಲ. ಈ ಬಗ್ಗೆ ಸರ್ಕಾರ ಸಾಂದರ್ಭಿಕವಾಗಿಯಾದರೂ ಒಂದು ಮಾರ್ಗಸೂಚಿ ಹೊರಡಿಸಿಲ್ಲ. ಹೀಗಾಗಿ ರಾಜ್ಯದಲ್ಲಿ ಸರ್ಕಾರಿ ದೇವಸ್ಥಾನಗಳಿಗಿಂತ ಖಾಸಗಿ ದೇವಸ್ಥಾನಗಳು ಹೆಚ್ಚಾಗಿವೆ. ಅದೇರೀತಿ ಮಸೀದಿ, ಚರ್ಚ್‌ಗಳು ಗಣನೀಯವಾಗಿ ತಲೆ ಎತ್ತಿವೆ.
ಖಾಸಗಿ ದೇಗಲು ಆರಂಭ ಹೇಗೆ?: ಕೆಲವು ಶ್ರೀಮಂತ ಭಕ್ತರು ಹರಕೆ ತೀರಿಸಲು ದೇವಸ್ಥಾನ ನಿರ್ಮಿಸುತ್ತಾರೆ. ಅನೇಕ ಕಡೆ ಮಂಗ ತೀರಿಕೊಂಡರೆ ಅಲ್ಲಿ ಸಮಾಧಿ ಮಾಡಿ, ನಂತರ ದೇವಸ್ಥಾನ ಸ್ಥಾಪಿಸಲಾಗುತ್ತದೆ. ಆದರೆ, ಇಂಥ ದೇವಸ್ಥಾನಗಳು ಬಹುತೇಕ ಸರ್ಕಾರಿ ಜಾಗಗಳಲ್ಲಿ ಆರಂಭವಾಗುತ್ತವೆ. ಕೆಲವೊಮ್ಮೆ ವಿವಾದಾತ್ಮಕ ಜಾಗದಲ್ಲೂ ದೇವಸ್ಥಾನ ನಿರ್ಮಿಸಿ  ವಿವಾದ ಪರಿಹರಿಸಿರುವುದುಂಟು. ಹೀಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ದೇವಸ್ಥಾನಗಳು ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಇವೆ. ಇವುಗಳಲ್ಲಿ ಕೆಲವು ಭಾರೀ ಶ್ರೀಮಂತವಾಗಿದ್ದು, ತಿಂಗಳಿಗೆ 30,000ರಿಂದ 50,000 ವರೆಗೂ ಆದಾಯ ಗಳಿಸುತ್ತಿವೆ.
ಮಸೀದಿ, ಚರ್ಚ್ ಆರಂಭ ಹೇಗೆ?: ಮಸೀದಿ ಮತ್ತು ಚರ್ಚ್‌ಗಳ ಸ್ಥಾಪನೆ ಕೂಡ ಸರ್ಕಾರಿ ಜಾಗಗಳಲ್ಲೇ ನಡೆಯುತ್ತಿದ್ದು, ಇದಕ್ಕೆ ರಾಜಕೀಯ ಶಕ್ತಿಗಳನ್ನು ಬಳಸಿಕೊಳ್ಳುವುದು ಹೆಚ್ಚಾಗಿದೆ. ಸಾಮಾನ್ಯವಾಗಿ ವಿಶಾಲ ಸರ್ಕಾರಿ ಮೈದಾನದಲ್ಲಿ ಮಸೀದಿ ಸ್ಥಾಪಿಸಲಾಗುತ್ತದೆ. ಇದಕ್ಕೆ ವಿರೋಧ ಎದುರಾಗದಿದ್ದರೆ ಅಲ್ಲಿನ ಚಟುವಟಿಕೆ ಮುಂದುವರಿಸಿ, ಆ ಜಾಗವನ್ನು ಮಸೀದಿಗೆ ಮುಂಜೂರು ಮಾಡಿಸಿಕೊಳ್ಳಲಾಗುತ್ತದೆ. ಅದರಲ್ಲೂ ನಗರ, ಪಟ್ಟಣಗಳಲ್ಲಿ ಬರೀ ಸರ್ಕಾರಿ ಜಾಗ ಮಾತ್ರವಲ್ಲ, ಮುಖ್ಯರಸ್ತೆಗಳ ಪಕ್ಕದ ಸರ್ಕಾರಿ ಜಾಗಗಳನ್ನೂ ಒತ್ತುವರಿ ಮಸೀದಿ ನಿರ್ಮಿಸಿರುವುದುಂಟು. ಇದು ಬೆಂಗಳೂರು, ಮೈಸೂರು ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಹೆಚ್ಚು.

 ಚರ್ಚ್‌ನಿಂದಲೂ ಒತ್ತುವರಿ
ಇನ್ನು ಚರ್ಚ್‌ಗಳ ಆರಂಭ ಕೂಡ ವಿಶೇಷವಾಗಿದೆ. ಚರ್ಚ್ ಆರಂಭಿಸುವವರು ನಗರ ಪಟ್ಟಣಗಳ ಹೊರ ಭಾಗವನ್ನು ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಅನ್ಯಭಾಷಿಗರು, ಬಡವರು ಮತ್ತು ದಲಿತರು ಹೆಚ್ಚಾಗಿರುವ ಪ್ರದೇಶದಲ್ಲಿ ಚರ್ಚ್ ಆರಂಭಿಸಲು ಯತ್ನಿಸುತ್ತಾರೆ. ಆರಂಭದಲ್ಲಿ ಪುಟ್ಟ ಶೆಡ್ ಹಾಕಿ, ನಂತರದಲ್ಲಿ ಸ್ಥಳೀಯ ಆಡಳಿತ ಸಹಕಾರ ಪಡೆದು ಕಟ್ಟಡ ನಿರ್ಮಿಸಲಾಗುತ್ತದೆ. ಅನೇಕ ಕಡೆ ಒತ್ತುವರಿಯನ್ನೂ ಮಾಡಲಾಗಿದೆ. ಹೀಗಾಗಿ ಚರ್ಚ್‌ಗಳು ಪಟ್ಟಣದ ಹೊರಗಿನ ಸರ್ಕಾರಿ ಜಾಗಗಳಲ್ಲಿ ಹೆಚ್ಚು ತಲೆ ಎತ್ತುತ್ತಿದ್ದು, ಇಲ್ಲಿನ ಚಟುವಟಿಕೆಗಳು ನಗರದ ಒಳಗಿನ ಆಡಳಿತಕ್ಕೆ ತಿಳಿಯುತ್ತಿಲ್ಲ. ಇಷ್ಟೆಲ್ಲಾ ಆದರೂ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಈ ಪ್ರಾರ್ಥನಾ ಮಂದಿರಗಳನ್ನು ಪ್ರಶ್ನಿಸುವಂತಿಲ್ಲ.

ಖಾಸಗಿ ದೇವಸ್ಥಾನ ಆರಂಭಿಸುವುದಕ್ಕೆ ಸಂಬಂಧಿಸಿ ಯಾವುದೇ ಕಾನೂನು ಇಲ್ಲ. ಇಲಾಖೆಯಲ್ಲಿ ಯಾವ ನಿಯಮಗಳೂ ಇಲ್ಲ. ಏಕೆಂದರೆ, ಅವು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ.
- ಕುಮಾರಸ್ವಾಮಿ, ಮುಜರಾಯಿ ಇಲಾಖೆ ಅಧಿಕಾರಿ


ಮಸೀದಿ, ಚರ್ಚ್ ಆರಂಭಿಸುವುದಾಗಲಿ, ಅವುಗಳ ವ್ಯವಹಾರ ನಿಯಂತ್ರಿಸುವುದಕ್ಕಾಗಲಿ ನಮ್ಮ ಇಲಾಖೆಯಲ್ಲಿ ಯಾವುದೇ ಕಾನೂನು ಇಲ್ಲ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ


- ಶಿವಕುಮಾರ್ ಬೆಳ್ಳಿತಟ್ಟೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement