ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗಡ್ಕರಿ ನಿವಾಸಕ್ಕೆ ಕಳ್ಳಗಿವಿ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಚಲನವಲನಗಳನ್ನು, ಮಾತುಗಳನ್ನು ಯಾರೋ ಕದ್ದಾಲಿಸುತ್ತಿದ್ದಾರೆಯೇ...

Mainashree
Updated On : 27 Jul 2014, 10:58 am

ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಚಲನವಲನಗಳನ್ನು, ಮಾತುಗಳನ್ನು ಯಾರೋ ಕದ್ದಾಲಿಸುತ್ತಿದ್ದಾರೆಯೇ?
ಗಡ್ಕರಿ ನಿವಾಸದಲ್ಲಿ ಅತ್ಯಾಧುನಿಕ ಸೂಕ್ಷ್ಮ ಕದ್ದಾಲಿಕೆ ಉಪಕರಣಗಳು ದೊರೆತಿವೆ ಎಂಬ ವರದಿ ಇಂತಹುದೊಂದು ಪ್ರಶ್ನೆ ಹುಟ್ಟುಹಾಕಿದೆ. ದೆಹಲಿಯ 13 ತೀನ್ ಮೂರ್ತಿ ಲೇನ್‌ನಲ್ಲಿರುವ ಗಡ್ಕರಿ ನಿವಾಸದಲ್ಲಿ ಹೈ ಪವರ್ ಕದ್ದಾಲಿಕೆ ಸಾಧನಗಳು ಪತ್ತೆಯಾಗಿರುವ ಬಗ್ಗೆ 'ದಿ ಸಂಡೇ ಗಾರ್ಡಿಯನ್‌' ವರದಿ ಮಾಡಿದೆ. ಇದರಲ್ಲಿ ವಿದೇಶಿ ಸಂಸ್ಥೆಯ ಕೈವಾಡವನ್ನೂ ಪತ್ರಿಕೆ ಶಂಕಿಸಿದೆ. ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ, ವರದಿಯನ್ನು ತಳ್ಳಿಹಾಕಿರುವ ಸಚಿವ ಗಡ್ಕರಿ, ನನ್ನ ಮನೆಯಲ್ಲಿ ಅಂತಹ ಯಾವುದೇ ಸಾಧನ ಪತ್ತೆಯಾಗಿಲ್ಲ. ಇದೆಲ್ಲ ಊಹಾಪೋಹ ಎಂದಿದ್ದಾರೆ. ಆದರೆ ತನ್ನ ಮನೆಯಲ್ಲಿ ಸೂಕ್ಷ್ಮ ಸಾಧನಗಳು ಪತ್ತೆಯಾಗಿರುವ ಬಗ್ಗೆ ಗಡ್ಕರಿ, ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್‌ಗೆ ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
 ಭಾರತದಲ್ಲಿ ಸಿಗಲ್ಲ
ಅಮೆರಿಕದ ಗುಪ್ತಚರ ಸಂಸ್ಥೆಗಳು ಬಿಜೆಪಿ ಸೇರಿ ನಾನಾ ರಾಜಕೀಯ ಪಕ್ಷಗಳ ವಿರುದ್ಧ ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕಳೆದ ತಿಂಗಳಷ್ಟೇ ಮಾಹಿತಿದಾರ ಎಡ್ವರ್ಡ್ ಸ್ನೋಡೆನ್ ಬಹಿರಂಗಪಡಿಸಿದ್ದ. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಈ ಬಗ್ಗೆ ಅಮೆರಿಕದೊಂದಿಗೆ ಪ್ರತಿಭಟನೆಯನ್ನೂ ವ್ಯಕ್ತಪಡಿಸಿತ್ತು. ಬೆನ್ನಲ್ಲೇ ಈಗ ಬಿಜೆಪಿ ಪ್ರಮುಖ ನಾಯಕ ಗಡ್ಕರಿ ಅಧಿಕೃತ ನಿವಾಸದಲ್ಲಿ ಕದ್ದಾಲಿಕೆ ಸಾಧನ ಪತ್ತೆಯಾಗಿರುವುದು ಮತ್ತಷ್ಟು ಪ್ರಶ್ನೆಗಳನ್ನು ಮೂಡಿಸಿದೆ. ಇವು ಭಾರತದಲ್ಲಿ ಎಲ್ಲೂ ಸಿಗದಂತಹ ಅತ್ಯಾಧುನಿಕ ಹಾಗೂ ಹೈ ಪವರ್ ಸಲಕರಣೆಗಳು. ಸಿಐಎ ಹಾಗೂ ಎನ್‌ಎಸ್‌ಎಗಳಂತಹ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳಷ್ಟೇ ಇವುಗಳನ್ನು ಬಳಸುತ್ತಿವೆ. ಹಾಗಾಗಿ ಪ್ರಕರಣದ ಹಿಂದೆ ವಿದೇಶಿ ಸಂಸ್ಥೆಗಳ ಕೈವಾಡದ ಶಂಕೆ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ.
 ಸಚಿವರಲ್ಲೇ ವಿಶ್ವಾಸದ ಕೊರತೆ
ಕದ್ದಾಲಿಕೆ ಬಗೆಗಿನ ವಿವರವನ್ನು ಕೂಡಲೇ ಸರ್ಕಾರ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಎನ್‌ಡಿಎ ಸಚಿವರಲ್ಲೇ ವಿಶ್ವಾಸ, ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ ಎಂದಿದೆ. ಯಾರ ಆದೇಶದ ಮೇರೆಗೆ ಮತ್ತು ಯಾವ ಉದ್ದೇಶಕ್ಕಾಗಿ ಗೂಢಚರ್ಯೆ ನಡೆಸಲಾಗುತ್ತಿತ್ತು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.

ಸಚಿವ ಗಡ್ಕರಿ ಅವರೇ ಈ ಸುದ್ದಿಯನ್ನು ಸುಳ್ಳು ಎನ್ನುತ್ತಿರುವುದು ನೋಡಿದರೆ ಘಟನೆ  ಬಗ್ಗೆ ಇನ್ನಷ್ಟು ಅನುಮಾನ ಮೂಡತೊಡಗಿದೆ. ಸುದ್ದಿ ಸುಳ್ಳೆಂದಾದರೆ ಅದು ಸಾರ್ವಜನಿಕವಾಗಿ ಬಹಿರಂಗವಾದದ್ದಾದರೂ ಹೇಗೆ? ಈ ಬಗ್ಗೆ ಸೂಕ್ತ ತನಿಖೆ ನಡೆಸಿದರಷ್ಟೇ ಸತ್ಯ ಹೊರಬರಲು ಸಾಧ್ಯ.
- ಮನೀಷ್ ತಿವಾರಿ,
ಕಾಂಗ್ರೆಸ್ ನಾಯಕ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement