ಚಿಕ್ಕೋಡಿ ಉಪ ಚುನಾವಣೆ: ಹುಕ್ಕೇರಿ ಮಗ ಅಭ್ಯರ್ಥಿ
ಬೆಳಗಾವಿ: ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಸಂಸದ ಪ್ರಕಾಶ ಹುಕ್ಕೇರಿ ಅವರು ಪುತ್ರ ಗಣೇಶ ಹುಕ್ಕೇರಿ ಅವರ ಹೆಸರನ್ನು ಹೈಕಮಾಂಡ್ಗೆ ಸೂಚಿಸಲಾಗುವುದು ಎಂದು ಚುನಾವಣಾ ವೀಕ್ಷಕ ಮತ್ತು ಮಾಜಿ ಸಭಾಪತಿ ಬಿ.ಆರ್. ಸುದರ್ಶನ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚಿಕ್ಕೋಡಿ-ಸದಲಗಾ, ಬಳ್ಳಾರಿ ಗ್ರಾಮೀಣ ಹಾಗೂ ಶಿಕಾರಿಪುರ ವಿಧಾನಸಭೆ ಮತಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಾಗಿ ನಾವು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದು, ಈ ಚರ್ಚೆಯಲ್ಲಿ ಗಣೇಶ ಪ್ರಕಾಶ ಹುಕ್ಕೇರಿ ಹೆಸರನ್ನು ಸರ್ವಾನುಮತದಿಂದ ಅಂತಿಮಗೊಳಿಸಲಾಗಿದೆ. ವೀಕ್ಷಕರ ತಂಡವು ಗಣೇಶ ಹುಕ್ಕೇರಿ ಅವರಿಗೆ ಚುನಾವಣಾ 'ಬಿ' ಫಾರಂ ನೀಡುವಂತೆ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಶಿಫಾರಸು ಮಾಡುತ್ತೇವೆ. ಅಂತಿಮ ತೀರ್ಮಾನ ಹಾಗೂ ಘೋಷಣೆ ಪಕ್ಷದ ಹೈಕಮಾಂಡ್ ಮಾಡಲಿದೆ ಎಂದರು.