ಪೇಶ್ ಇಮಾಮ್- ಮೌಜನ್ಗಳಿಗೆ ಸಿದ್ದು ಸರ್ಕಾರದ ರಂಜಾನ್ ಗಿಫ್ಟ್
ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾಗಿರುವ ರಾಜ್ಯದಲ್ಲಿರುವ ಮಸೀದಿಗಳಲ್ಲಿ...
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.27
ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾಗಿರುವ ರಾಜ್ಯದಲ್ಲಿರುವ ಮಸೀದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್(762) ಮತ್ತು ಮೌಜನ್(727)ಗಳಿಗೆ ಮಾಸಿಕ ಗೌರವ ಧನ(ಹದಿಯ) ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಜು.10ರಂದೇ ಅಧಿಕೃತ ಆದೇಶ ಹೊರಬಿದ್ದಿದೆ. ಪೇಶ್ ಇಮಾಮ್ಗಳಿಗೆ ಮಾಸಿಕ 3,100 ಹಾಗೂ ಮೌಜನ್ಗಳಿಗೆ ಮಾಸಿಕ 2,500 ನೀಡಲು ಸರ್ಕಾರ ನಿರ್ಧರಿಸಿದೆ.
ಹಬ್ಬದ ಕೊಡುಗೆ: ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಖಮರುಲ್ ಇಸ್ಲಾಂ ಈ ವಿಷಯ ಪ್ರಕಟಿಸಿದ್ದು, ಇದನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐತಿಹಾಸಿಕ ನಿರ್ಧಾರ. ರಂಜಾನ್ ಹಬ್ಬದ ಸಂದರ್ಭದಲ್ಲಿ ಇಮಾಮ್ ಹಾಗೂ ಮೌಜನ್ಗಳಿಗೆ ಸರ್ಕಾರ ನೀಡುತ್ತಿರುವ ಹಬ್ಬದ ಕೊಡುಗೆ ಎಂದು ಹೇಳಿದರು.
1,25,39,100 ಹಣ ಬಿಡುಗಡೆ: 2014-15ನೇ ಸಾಲಿಗಾಗಿ ಇಲಾಖೆಗೆ 4680 ಲಕ್ಷ ಒದಗಿಸಲಾಗಿದ್ದು, ಈ ಪೈಕಿ 1170 ಲಕ್ಷ ಅನುದಾನವನ್ನು ರಾಜ್ಯ ವಕ್ಫ್ ಮಂಡಳಿಗೆ ಬಿಡುಗಡೆಗೊಳಿಸಲಾಗಿದೆ. ಪ್ರಸಕ್ತ ಸಾಲಿನ ಏಪ್ರಿಲ್ನಿಂದಲೇ ಈ ಗೌರವಧನ ಅನ್ವಯವಾಗುತ್ತದೆ. ರಾಜ್ಯದ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ 727 ಮಸೀದಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್, ಮೇ ಹಾಗೂ ಜೂನ್ 3 ತಿಂಗಳ ಗೌರವ ಧನಕ್ಕಾಗಿ ವಕ್ಫ್ ಮಂಡಳಿಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಸದರಿ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಪ್ರಿಲ್ನಿಂದ 3 ತಿಂಗಳ ಗೌರವ ಧನದ ಮೊತ್ತವಾಗಿ 16 ಜಿಲ್ಲೆಗಳಲ್ಲಿರುವ 762 ಪೇಶ್ ಇಮಾಮ್ ಹಾಗೂ 727 ಮೌಜನ್ಗಳಿಗೆ ನೀಡುವ ಗೌರವಧನ ಅನುದಾನ ರೂಪದಲ್ಲಿ 1,25,39,100 ಹಣ ಬಿಡುಗಡೆ ಮಾಡಿದ್ದಾರೆ ಎಂದು ಇಸ್ಲಾಂ ಹೇಳಿದರು.
ರಾಜ್ಯದಲ್ಲಿ ಕನಿಷ್ಠ 5ರಿಂದ 6 ಸಾವಿರ ಮಸೀದಿಗಳಿವೆ: ಈ ಯೋಜನೆಯಡಿಯಲ್ಲಿ 762 ಪೇಶ್ ಇಮಾಮ್- 727 ಮೌಜನ್ಗಳ ಪಟ್ಟಿ 16 ಜಿಲ್ಲೆಯಲ್ಲಿ ಸಿದ್ಧವಾಗಿದೆ. ಈ ಪೈಕಿ ಬೀದರ್(468), ಗುಲ್ಬರ್ಗ (294), ಯಾದಗಿರಿ(123) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೌರವ ಧನಕ್ಕೆ ಅರ್ಹರಾಗಿರುವ ಪೇಶ್ ಇಮಾಮ್, ಮೌಜನ್ಗಳಿದ್ದಾರೆ ಎಂದರು.
ರಾಜ್ಯದಲ್ಲಿ ಕನಿಷ್ಠ 5ರಿಂದ 6 ಸಾವಿರ ಮಸೀದಿಗಳಿವೆ. ಇವುಗಳು ಬರುವ ದಿನಗಳಲ್ಲಿ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿ ಅರ್ಜಿ ಸಲ್ಲಿಸಿದಲ್ಲಿ ಅಲ್ಲಿ ಕೆಲಸದಲ್ಲಿರುವ ಪೇಶ್ ಇಮಾಮ್, ಮೌಜನ್ಗಳಿಗೆ ಗೌರವಧನಕ್ಕೆ ಪರಿಗಣಿಸಲಾಗುತ್ತದೆ. ಈ ಬಗ್ಗೆ ಸ್ಥಳೀಯವಾಗಿ, ಜಿಲ್ಲಾ ಕೇಂದ್ರಗಳಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ವಕ್ಫ್ ಮಂಡಳಿಯಿಂದ ಬರುತ್ತದೆ. ನೋಂದಾಯಿತ ಮಸೀದಿಗಳ ಪೇಶ್ ಇಮಾಮ್- ಮೌಜನ್ಗಳು ಮಾತ್ರ ಗೌರವ ಧನಕ್ಕೆ ಅರ್ಹರಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಇಸ್ಲಾಂ ಹೇಳಿದರು.
ಅನೇಕ ಮಸೀದಿಗಳಲ್ಲಿ ಆದಾಯವೇ ಇರುವುದಿಲ್ಲ. ಅಲ್ಲಿ ಪ್ರಾರ್ಥನೆ ಹೇಳುವುದು ಸೇರಿದಂತೆ ಹಲವಾರು ಧಾರ್ಮಿಕ ಕೆಲಸಗಳನ್ನು ಪೇಶ್ ಇಮಾಮ್ ಹಾಗೂ ಮೌಜನ್ಗಳು ಮಾಡುತ್ತಾರೆ. ಇಂತಹವರಿಗೆ ಬದುಕಿಗೆ ಆಸರೆಯಾಗಲಿ ಎಂದು ಈ ಗೌರವ ಧನ ಯೋಜನೆ ಪ್ರಕಟಿಸಲಾಗಿದೆ. ದೇಶದ ಬೇರಾವ ರಾಜ್ಯದಲ್ಲಿಯೂ ಇಂತಹ ಯೋಜನೆ ಇಲ್ಲ ಎಂದು ಇಸ್ಲಾಂ ನುಡಿದರು.