ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಂಗಳೂರು-ಬೆಂಗಳೂರು ಹಗಲು ರೈಲು ಶೀಘ್ರ ಆರಂಭ

ರೈಲ್ವೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಮಂಗಳೂರು- ಬೆಂಗಳೂರು ಮಧ್ಯೆ ಹಗಲು ರೈಲು 'ಕುಡ್ಲ ಎಕ್ಸ್‌ಪ್ರೆಸ್‌' ಶೀಘ್ರವೇ...

Mainashree
Updated On : 27 Jul 2014, 9:02 am

ಮಂಗಳೂರು:  ರೈಲ್ವೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಮಂಗಳೂರು- ಬೆಂಗಳೂರು ಮಧ್ಯೆ ಹಗಲು ರೈಲು 'ಕುಡ್ಲ ಎಕ್ಸ್‌ಪ್ರೆಸ್‌' ಶೀಘ್ರವೇ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.
ಹುಟ್ಟೂರು ಸುಳ್ಯ ಸಮೀಪದ ಮಂಡೆಕೋಲು ಗ್ರಾಮದ ದೇವರಗುಂಡ ಮನೆಗೆ ತಾಯಿ ಆರೋಗ್ಯ ವಿಚಾರಿಸಲು ಭಾನುವಾರ ಆಗಮಿಸಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನಂತರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌಡರು, ರೈಲ್ವೆ ಬಜೆಟ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜು.31ರಂದು ದೆಹಲಿಯಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಬಜೆಟ್ ಯೋಜನೆ ಅನುಷ್ಠಾನ ಬಗ್ಗೆ ಚರ್ಚೆ ನಡೆಸಲಾಗುವುದು. ರೈಲ್ವೆ ಇಲಾಖೆಯ ವಿವಿಧ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರು, ಸುರಕ್ಷಾ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳನ್ನು ಕರೆದು ಚರ್ಚಿಸಲಾಗುವುದು. ಈ ಸಭೆಯ ಫಲಶ್ರುತಿ ಬಗ್ಗೆ ಚರ್ಚಿಸಲು ರೈಲ್ವೆ ವಿಭಾಗಗಳ ಮಹಾಪ್ರಬಂಧಕರನ್ನು ಕರೆದು ಚರ್ಚಿಸಲಾಗುವುದು ಎಂದರು. ಈ ಬಾರಿ ರೈಲ್ವೆ ಬಜೆಟ್ ಅನ್ನು ವಿರೋಧಿಗಳೂ ಮೆಚ್ಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಚಿವರ ಮೌಲ್ಯಮಾಪನ ಮಾಡಿಲ್ಲ. ಆದರೆ ರೈಲ್ವೆ ಬಜೆಟ್ ಮಂಡನೆಗೆ ಮುನ್ನ ಅದನ್ನು ಪ್ರಧಾನಿಗೆ ಒಪ್ಪಿಸಿದ್ದು, ಅವರು ಕೆಲವು ಮಾರ್ಪಾಟಿಗೆ ಸೂಚಿಸಿದ್ದರು. ಅದನ್ನು ಬಜೆಟ್‌ನಲ್ಲಿ ಸೇರಿಸಿದ್ದೇನೆ ಎಂದರು.
ರಾಜ್ಯ ಸಹಕರಿಸಲಿ: ಪುತ್ತೂರಿನಲ್ಲಿ ತೆಂಕಿಲ ಗೌಡ ಸಮುದಾಯ ಭವನದಲ್ಲಿ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಗೌಡರು, ರೈಲ್ವೆ ಸುಧಾರಣೆಗೆ ರಾಜ್ಯ ಸರ್ಕಾರದಿಂದ ಯಾವುದೇ ಹೊಸ ಅನುದಾನವನ್ನು ಕೇಂದ್ರ ನಿರೀಕ್ಷಿಸುತ್ತಿಲ್ಲ. ಬದಲಿಗೆ ಹಿಂದೆ ನೀಡುತ್ತಿದ್ದ ಅನುದಾನ ಮುಂದುವರಿಸುವಂತೆ ಕೇಳಿಕೊಳ್ಳಲಾಗಿದೆ ಎಂದರು.
ಹಿಂದಿನ ಸರ್ಕಾರದಂತೆ ಹೊಸ ಆಶ್ವಾಸನೆ ನೀಡುವ ಬದಲು, ಇರುವ ಯೋಜನೆಯನ್ನೇ ಸುಧಾರಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ರೈಲ್ವೆ ಸುಧಾರಣೆಗೆ ರಾಜ್ಯ ಸರ್ಕಾರ ಶೇ.50ರಷ್ಟು ಅನುದಾನ ನೀಡಬೇಕು ಹಾಗೂ ಅವಶ್ಯಕ ಜಾಗ ಮಂಜೂರು ಮಾಡಬೇಕು ಎಂಬ ನಿಯಮ ಮೊದಲೇ ರೂಪಿಸಲಾಗಿತ್ತು ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು, ಶೇ.50ರಷ್ಟು ಅನುದಾನ ನೀಡಲು ಕಷ್ಟ ಎಂದು ತಿಳಿಸಿದ್ದಾರೆ. ಇದನ್ನು ರಾಜಕೀಯ ಮಾಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗೆ ಪತ್ರ ಬರೆದು ವಿಚಾರ ತಿಳಿಸಿದ್ದೇನೆ.
ರಾಜ್ಯದ ಮೂಲೆಮೂಲೆ ಸಂಪರ್ಕಿಸುವ ಕೇಂದ್ರದ ಕನಸಿಗೆ ರಾಜ್ಯ ಸರ್ಕಾರ ಸಹಕರಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement