ಲಿಫ್ಟ್ ಕೊಟ್ಟು ರು. 2 ಲಕ್ಷದ ಚಿನ್ನಾಭರಣ ದೋಚಿದರು
ನಿಪ್ಪಾಣಿ: ಮಹಿಳೆಯೊಬ್ಬರನ್ನು ಶನಿವಾರ ಮಧ್ಯಾಹ್ನ ಲಿಫ್ಟ್ ನೀಡುವ ನೆಪದಲ್ಲಿ ಟಾಟಾ ಸುಮೋದಲ್ಲಿ ಹತ್ತಿಸಿಕೊಂಡ ದುಷ್ಕರ್ಮಿಗಳು ಸುಮಾರು ರು. 2 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ದೋಚಿ, ಸ್ತವನಿಧಿ ಘಾಟ್ನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಸುರುಪಲಿ ಗ್ರಾಮದ ರಂಜನಾ ದಿನಕರ ಪಾಟೀಲ(35) ಎಂಬ ಮಹಿಳೆ ಅಪಹರಣಕ್ಕೊಳಗಾದವರು. ಇವರು ಅಮಾವಾಸ್ಯೆ ನಿಮಿತ್ತ ಬಾಳುಮಾಮಾ ದೇವರ ದರ್ಶನಕ್ಕೆ ಮೇತಕೆಗೆ ಹೋಗಲು ನಿಪ್ಪಾಣಿ -ಮುರಗೋಡ ರಸ್ತೆಯಲ್ಲಿ ನಿಂತಿದ್ದರು. ಆಗ, ನಾವೂ ಮೇತಕೆಗೆ ಹೋಗುತ್ತಿದ್ದೇವೆಂದು ಸುಮೋದಲ್ಲಿ ಬಂದವರು ಹೇಳಿದ್ದಾರೆ. ವಾಹನದಲ್ಲಿ ಇಬ್ಬರು ಪುರುಷರ ಸಹಿತ ಇಬ್ಬರು ಮಹಿಳೆಯರೂ ಇದ್ದಿದ್ದರಿಂದ ವಾಹನದಲ್ಲಿ ಹೋಗಿದ್ದಾರೆ. ಆದರೆ ವಾಹನ ಬೇರೆಡೆ ತಿರುಗಿಸಿದಾಗ ಮಹಿಳೆ ಕಿರುಚಿದ್ದು, ಕಾರಲ್ಲಿದ್ದವರು ಥಳಿಸಿದ್ದಾರೆ. ಚಿನ್ನಾಭರಣ ದೋಚಿ, ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಮುರಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.