ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಾಣಿಜ್ಯ ಪಟ್ಟಣದಲ್ಲಿ 81ನೇ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ

81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ವಿವಾದಕ್ಕೆ ಅಂತೂ ತೆರೆ ಬಿದ್ದಂತಾಗಿದೆ...

Mainashree
Updated On : 2 Aug 2014, 5:25 am

ಹಾವೇರಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ವಿವಾದಕ್ಕೆ ಅಂತೂ ತೆರೆ ಬಿದ್ದಂತಾಗಿದೆ. ರಾಣಿಬೆನ್ನೂರಿನಲ್ಲೇ ಸಮ್ಮೇಳನ ನಡೆಸಲು ಜಿಲ್ಲಾ ಸಾಹಿತ್ಯ ಪರಿಷತ್ ತೀರ್ಮಾನ ಕೈಗೊಂಡಿದೆ. ಇನ್ನು ಗೊಂದಲ, ವೈಮನಸ್ಸು, ಹಠಮಾರಿ ಧೋರಣೆ ಕೈಬಿಟ್ಟು ಸೌಹಾರ್ದಯುತವಾಗಿ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಕನ್ನಡದ ತೇರನ್ನು ಎಳೆಯಲು ಸಜ್ಜಾಗಬೇಕಿದೆ.
ಮಡಿಕೇರಿಯಲ್ಲಿ ನಡೆದ 80ನೇ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಎಂದು ಘೋಷಣೆ ಮಾಡಿದ್ದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿತ್ತು. ಆಗಲೇ 81ನೇ ಸಮ್ಮೇಳನ ರಾಣಿಬೆನ್ನೂರಿನಲ್ಲಿ ಎಂದು ಘೋಷಣೆ ಮಾಡಿದ್ದರೆ ಯಾರೂ ಚಕಾರ ಎತ್ತುತ್ತಿರಲಿಲ್ಲ. ಆದರೆ ಹಾವೇರಿಯಲ್ಲಿ ಎಂದು ಘೋಷಣೆ ಮಾಡಿ, ನಂತರ ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅವರು ಅದನ್ನು ರಾಣಿಬೆನ್ನೂರಿನಲ್ಲಿ ಎಂದು ಹೇಳಿದ್ದು ಗೊಂದಲ ಮೂಡಿಸಿತ್ತು. ಆದ್ದರಿಂದ 8 ತಿಂಗಳಿಂದ ಹಾವೇರಿ-ರಾಣಿಬೆನ್ನೂರು ನಡುವೆ ಹಗ್ಗಜಗ್ಗಾಟ ನಡೆದು ಅಂತಿಮವಾಗಿ ಭಾನುವಾರ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳುವ ಮೂಲಕ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸುವುದು ಪಕ್ಕಾ ಆದಂತಾಗಿದೆ.
ಯಾರೂ ಸೋತಿಲ್ಲ: ಹಾವೇರಿಯಲ್ಲೇ ಸಮ್ಮೇಳನ ನಡೆಸಬೇಕು ಎಂಬ ಸಾಹಿತ್ಯಾಸಕ್ತರ ಒತ್ತಾಯಕ್ಕೆ ಹಿನ್ನಡೆಯಾದರೂ ಅದನ್ನು ಇನ್ನೂ ಮುಂದುವರಿಸುವುದು ಸರಿಯಲ್ಲ. ಹಾವೇರಿ ಜಿಲ್ಲೆ ಎಂಬ ಸಮಗ್ರ ದೃಷ್ಟಿಕೋನದಿಂದ ಎಲ್ಲರೂ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವ ಅಗತ್ಯವಿದೆ. ಸಾಹಿತ್ಯ ಪರಿಷತ್ ಶತಮಾನೋತ್ಸವ ಸಂಭ್ರಮದಲ್ಲಿರುವುದರಿಂದ ಸಮ್ಮೇಳನ ಅದ್ಧೂರಿಯಾಗಿ ಆಗಬೇಕಿದೆ. ಆದ್ದರಿಂದ ಇಲ್ಲಿ ರಾಣಿಬೆನ್ನೂರು ಬೆಂಬಲಿಗರು ತಾವು ಗೆದ್ದೆವು ಎಂದು ಸಂಭ್ರಮಿಸದೇ ಹಾವೇರಿ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿದೆ.

- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement