ವಿವೇಕಾನಂದ ಶಾಲೆ
ಕೊಪ್ಪಳ: ಡೊನೇಷನ್ ಹಾವಳಿ ಕುರಿತು ಸರ್ಕಾರದ ಜಾಣ ಕುರುಡು ಇನ್ನೊಂದು ಪ್ರಕರಣದಲ್ಲೂ ಬಯಲಾಗಿದೆ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಅಕ್ರಮದ ಕುರಿತು ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ!
ದುಬಾರಿ ಶುಲ್ಕದ ವಿರುದ್ಧ ಕಳೆದ ವರ್ಷ(2013 ಜುಲೈ)50 ಪಾಲಕರು ದೂರು ನೀಡಿದ್ದರು. ಈ ವರ್ಷವೂ ದೂರು ಸಲ್ಲಿಕೆಯಾಗಿದೆ. ಈ ಕುರಿತು ದಾಖಲೆಗಳನ್ನೂ ಒದಗಿಸಲಾಗಿದೆ. ಇಷ್ಟಾದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
20 ಲಕ್ಷ ವಸೂಲಿ: ಶಾಲೆಯಲ್ಲಿ ಸುಮಾರು 1,500 ವಿದ್ಯಾರ್ಥಿಗಳಿಂದ 15-20 ಲಕ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಿದ ಶಿಕ್ಷಣ ಇಲಾಖೆ, ಪಾಲಕರಿಗೆ ಶುಲ್ಕ ವಾಪಸ್ ನೀಡುವಂತೆ ಆದೇಶಿಸಿತ್ತು. ಆದರೂ ಅದು ಕಾರ್ಯಗತವಾಗಿಲ್ಲ. ಶಾಲಾ ಮಂಡಳಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿತು. ನಂತರ ಪ್ರಕರಣ ಸರ್ಕಾರದ ಅಂಗಳಕ್ಕೆ ಬಂದು ನಿಂತಿದೆ. ಪಾಲಕರು ನಡೆಸುತ್ತಿರುವ ಹೋರಾಟ ಇಂದಿಗೂ ಮುಂದುವರಿದಿದೆ.
ಅಧಿಕೃತವಾಗಿಯೇ ವಸೂಲಿ
ದುಬಾರಿ ಶುಲ್ಕ ವಸೂಲಿ ಎಲ್ಲೂ ಇಲ್ಲ, ದೂರು ಬಂದಿಲ್ಲ ಎನ್ನುತ್ತದೆ ಸರ್ಕಾರ. ವಾಸ್ತವದಲ್ಲಿ ಬಹುತೇಕ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಾಗುತ್ತದೆ. ಬ್ಯಾಂಕ್ ಡಿಡಿ ಮೂಲಕವೇ ಶುಲ್ಕ ಪಾವತಿಸಿಕೊಳ್ಳಲಾಗುತ್ತದೆ. ಅಧಿಕಾರಿಗಳ ಮಕ್ಕಳೇ ಶುಲ್ಕ ಪಾವತಿಸಿ, ಪ್ರವೇಶ ಪಡೆಯುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಬ್ಯಾಂಕ್ ಖಾತೆ ತೆರೆದು ನೋಡಿದರೂ ಈ ಅಕ್ರಮ ಬಯಲಾಗುತ್ತದೆ.
ಶುಲ್ಕ ಕುರಿತು ದೂರು ನೀಡಿದ್ದೇವೆ ಮತ್ತು
ಅದು ತನಿಖೆಯಾಗಿ ದೃಢಪಟ್ಟಿದೆ. ಆದರೂ ಶಾಲೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಶಾಲೆ ಮಾನ್ಯತೆ ರದ್ದು ಮಾಡಿಲ್ಲ.
- ಬಸವರಾಜ ಶೀಲವಂತರ, ಪಾಲಕರು
ಸೋಮರಡ್ಡಿ ಅಳವಂಡಿ