ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ: ಇನ್ನೂ ಮೂವರು ಪೊಲೀಸ್ ವಶಕ್ಕೆ
ಶಿವಮೊಗ್ಗ: ಡಿಸಿಸಿ ಬ್ಯಾಂಕ್ನ ರು. 60 ಕೋಟಿ ಅಡಮಾನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ಡಿಸಿಸಿಬಿ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರ ವಾಹನ ಚಾಲಕನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಕೋಟ್ಯಾಂತರ ರುಪಾಯಿ ಗೋಲ್ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಐಬಿ ಇನ್ಸ್ಪೆಕ್ಟರ್ ಜೈರಾಜ್ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆಚುರುಕುಗೊಳಿಸಿದ್ದು, ಅವ್ಯವಹಾರಕ್ಕೆ ಕಾರಣರಾದವರಿಗೆ ಸಹಕರಿಸಿದವರನ್ನು ವಶಕ್ಕೆ ಪಡೆದುಕೊಳ್ಳಲಾರಂಭಿಸಿದೆ.
ಭಾನುವಾರ ದಿನೇಶ್, ಜಿತೇಂದ್ರ ಹಾಗೂ ಗುರುರಾಜ್ ಬಂಧಿತರಾಗಿದ್ದಾರೆ. ಸಬ್ ಇನ್ಸ್ಪೆಕ್ಟರ್ ಚೈತನ್ಯ ಮತ್ತವರ ಸಿಬ್ಬಂದಿ ಈ ಆರೋಪಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ.
ದಿನೇಶ್ ಹಾಗೂ ಜಿತೇಂದ್ರ ಅವರು ಆನ್ಲೈನ್ ಗೋಲ್ಡ್ ಟ್ರೇಡಿಂಗ್ ನಡೆಸುತ್ತಿದ್ದು, ಮ್ಯಾನೇಜರ್ ಶೋಭಾ ಮೂಲಕ ಆನ್ಲೈನ್ ಟ್ರೇಡಿಂಗ್ ನಡೆಸಿದ್ದರು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಮತ್ತೋರ್ವ ಆರೋಪಿ ಗುರುರಾಜ್ ನಕಲಿ ಚಿನ್ನಾಭರಣಗಳನ್ನು ಮಾಡಿಕೊಡುತ್ತಿದ್ದರು. ಇವರು ಮಾಡಿಕೊಟ್ಟ ನಕಲಿ ಚಿನ್ನವನ್ನು ತಾನೇ ಸೃಷ್ಟಿಸಿದ ವಿವಿಧ ಖಾತೆಗಳ ಮೂಲಕ ಅಡಮಾನವಿಟ್ಟು ಕೋಟ್ಯಾಂತರ ಹಣವನ್ನು ಲಪಟಾಯಿಸುತ್ತಿದ್ದರು. ಪ್ರಸ್ತುತ ಪೊಲೀಸರ ವಶದಲ್ಲಿರುವ ಆರೋಪಿಗಳು ಡಿಸಿಸಿಬಿ ಚಿನ್ನಾಭರಣ ಅಡಮಾನ ಹಾಗೂ ಹಣದ ದುರ್ಬಳಕೆಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಈ ಆಧಾರದ ಮೇಲೆ ಮತ್ತಷ್ಟು ಜನರ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ಜಾಲ ಬೀಸಿದೆ. ಡಿಸಿಸಿಬಿ ನಗರ ಶಾಖೆಯಲ್ಲಿ ಬಾಕಿ ಉಳಿದ ಮೂರು ಲಾಕರ್ಗಳ ತಪಾಸಣಾ ಕಾರ್ಯ ಡಿಸಿಐಬಿ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರಂಭಿಸಿದೆ.